ISSN (Print) - 0012-9976 | ISSN (Online) - 2349-8846

ಭಾರತ-ಪಾಕ್ ಸಂಬಂಧ ಸುಧಾರಣೆ- ರಾಜತಾಂತ್ರಿಕ ಮಾರ್ಗವೇ ದಾರಿ

ಕಗ್ಗಂಟಾಗಿರುವ ಭಾರತ-ಪಾಕ್ ಸಂಬಂಧಗಳನ್ನು ಸುಧಾರಿಸಲು ಪ್ರಬಲವಾದ ರಾಜತಾಂತ್ರಿಕ ಕ್ರಮಗಳ ಅಗತ್ಯವಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕಳೆದ ಸೋಮವಾರದ ಮಧ್ಯರಾತ್ರಿ ಭಾರತದ ಫೈಟರ್ ಜೆಟ್ ವಿಮಾನಗಳು ಗಡಿಯಾಚೆಗಿನ ಬಾಲಾಕೋಟಿನಲ್ಲಿರುವ ಜೈಷ-ಎ-ಮುಹಮದ್ ನಡೆಸುತ್ತಿದ್ದ ಉಗ್ರಗಾಮಿಗಳ ತರಬೇತಿ ಶಿಬಿರದ ಮೇಲೆ ಮುಂದಾಳಿ ನಡೆಸಲು ವಾಯುಗಡಿಯನ್ನು ದಾಟಿದವು. ಎರಡು ವಾರಗಳ ಕೆಳಗೆ ಫುಲ್ವಾಮದಲ್ಲಿ ೪೦ ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯಿಂದ ತೀವ್ರವಾಗಿ  ಘಾಸಿಗೊಂಡಿದ್ದ ಭಾರತೀಯ ಮಾನಸಿಕತೆ ಒಂದಷ್ಟು ಭಾರತೀಯ ವಾಯುಪಡೆಯು ನಡೆಸಿದ ಈ ಯಶಸ್ವೀ ನಿಖರ ದಾಳಿಯು ಮುಲಾಮನ್ನು ಸವರಿತು. ಇದು ಒಂದು ನ್ಯೂಕ್ಲಿಯಾರ್ ಶಕ್ತಿಯೂ ಆಗಿರುವ ಪಾಕಿಸ್ತಾನದ ಜೊತೆ ದಿಟ್ಟವಾಗಿ ವ್ಯವಹರಿಸಬಲ್ಲ ಒಂದು ಸರಿಯಾದ ಮಾರ್ಗವೆಂದು ದೇಶದ ರಾಜಕೀಯ ನಾಯಕತ್ವವನ್ನು ಹೆಚ್ಚೂಕಡಿಮೆ ಇಡೀ ದೇಶವೇ ಅಭಿನಂದಿಸಿತು. ಸಂಭಾವ್ಯ ನ್ಯೂಕ್ಲಿಯಾರ್ ಯುದ್ಧವು ಪಾಕಿಸ್ತಾನದ ಎದೆಗುಂದಿಸುತ್ತಿಲ್ಲವಾದ್ದರಿಂದ ಈ ಬಗೆಯ ವಾಯು ದಾಳಿಗಳು ಒಂದು ಅರೆ ಸಾಂಪ್ರದಾಯಿಕ ಅರೆ ಯುದ್ಧದಲ್ಲಿ ಶತ್ರುವಲ್ಲಿ ಹಿಂಜರಿಕೆಯನ್ನು ಉಂಟುಮಾಡಬಲ್ಲ ಒಂದು ಪರಿಣಾಮಕಾರಿ ಸಾಧನ ವೆಂದು ವ್ಯೂಹತಾಂತ್ರಿಕ ನಿಪುಣರು ಬಣ್ಣಿಸಲು ಪ್ರಾರಂಭಿಸಿದರು. ಅಂತರರಾಷ್ಟ್ರೀಯವಾಗಿ ಪ್ರತ್ಯೇಕಗೊಳಿಸಲ್ಪಟ್ಟ ಮತ್ತು ಸಾಲದಿಂದ ಜರ್ಝರಿತವಾಗಿರುವ ಪಾಕಿಸ್ತಾನವು ತನ್ನ ವಾಯುಗಡಿಗಳ ಉಲ್ಲಂಘನೆಯ ವಿರುದ್ಧ ಪ್ರತಿಕ್ರಮಗಳನ್ನು ತೆಗೆದುಕೊಂಡು ಸಂದರ್ಭವನ್ನು ಇನ್ನಷ್ಟು ಉದ್ವಿಘ್ನಗೊಳಿಸಲಾರದು ಎಂದು ನಿರೀಕ್ಷಿಸಲಾಗಿತ್ತು.  ಆದರೆ ಬುಧವಾರ ಬೆಳಿಗ್ಗೆಯ ವೇಳೆಗೆ ಎಲ್ಲಾ ಸಮಾಜಿಕ ತಾಣಗಳಲ್ಲೂ ಪಾಕಿಸ್ತಾನದ ಸೈನ್ಯದ ವಶದಲ್ಲಿದ್ದ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ರಕ್ತಸಿಕ್ತ ಚಿತ್ರಗಳು ಹರಿದಾಡುತ್ತಿದ್ದಂತೆ ಭಾರತದಲ್ಲಿದ ವಿಜಯೋತ್ಸಾಹ ತಣ್ಣಗಾಗಿ ದುಃಖದ ಛಾಯೆ ಆವರಿಸಿಕೊಳ್ಳತೊಡಗಿತು. ಈ ಪತ್ರಿಕೆಯು ಅಚ್ಚಿಗೆ ಹೋಗುವ ವೇಳೆಗೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮಾರ್ಚ್ ೧ ರಂದು ವಾಘಾ ಗಡಿಯಲ್ಲಿ ಭಾರತದ ವಾಯುಪಡೆಗೆ ಹಸ್ತಾಂತರಿಸಲಾಗುವುದೆಂಬ ವರದಿಯು ಬಂದಿದೆ. ಹೀಗಾಗಿ ಈಗ ಎರಡೂ ದೇಶಗಳು ಸಂದರ್ಭವನ್ನು ಸಾಮಾನ್ಯ ಸ್ಥಿತಿಗೆ ಮರಳುವಂತೆ ಮಾಡಲು ಎಲ್ಲಾ ರಾಜತಾಂತ್ರಿಕ ಕ್ರಮಗಳಿಗೂ ಮುಂದಾಗಬೇಕಾದ ಅಗತ್ಯವಿದೆ.

ಇಂತಹ ರಾಜತಾಂತ್ರಿಕ ಪ್ರಕ್ರಿಯೆಗಳು ಎರಡೂ ದೇಶಗಳಿಗೂ  ತಮ್ಮತಮ್ಮ ಅಂತರಿಕ ಪ್ರಶ್ನೆ ಮತ್ತು ಸಮಸ್ಯೆಗಳತ್ತ ಗಮನ ಕೇಂದ್ರೀಕರಿಸಲು ಅವಕಾಶ ಮಾಡಿಕೊಡುವುದಲ್ಲದೆ ಸ್ವನಿರೀಕ್ಷಣೆಯಿಂದ ಅದಕ್ಕೆ ಬೇಕಾದ ಉತ್ತರಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ನೋಟು ನಿಷೇಧದಂತ ಕ್ರಮಗಳು ಭಯೋತ್ಪಾದನೆಯ ಸಮಸ್ಯೆಯನ್ನು ನಿವಾರಿಸಿಲ್ಲ ಮತ್ತು ನಿವಾರಿಸಲು ಸಾಧ್ಯವಿಲ್ಲ ಎಂಬುದನ್ನು ಭಾರತ ಸರ್ಕಾರವು ಅರ್ಥಮಾಡಿಕೊಳ್ಳಬೇಕು. ಗಡಿಯಲ್ಲಿ ನಿರಂತರವಾಗಿ ಮುಂದುವರೆದೇ ಇರುವ ಭಯೋತ್ಪಾದನಾ ಚಟುವಟಿಕೆಗಳು ಇದನ್ನು ಸಾಬೀತುಪಡಿಸಿವೆ. ಅಷ್ಟು ಮಾತ್ರವಲ್ಲದೆ ಭಾರತದ ಆರ್ಥಿಕತೆ, ಸಾಮಾಜಿಕ ಸೌಹಾರ್ದತೆ, ಮತ್ತು ರಾಷ್ಟ್ರೀಯ ಸಮಗ್ರತೆಗಳಿಗೆ ಸಂಬಂಧಪಟ್ಟ ಮೂಲಭೂತ ವಿಷಯಗಳಿಗೆ ಗಮನಕೊಡುವಲ್ಲಿ ಭಾರತವು ಸರ್ಕಾರವು ವಿಫಲವಾಗಿರುವ ಬಗ್ಗೆಯೂ ಅದು ಸ್ವನಿರೀಕ್ಷಣೆ ಮಾಡಿಕೊಳ್ಳಬೇಕಿದೆ. ಫುಲ್ವಾಮ ದಾಳಿಯ ಬಗ್ಗೆ ಮುನ್ಸೂಚನೆ ಕೊಡುತ್ತಿದ್ದ ಬಿಡಿಬಿಡೀ ಮಾಹಿತಿಗಳನ್ನು ಒಟ್ಟು ಮಾಡಿ ಎಚ್ಚರಿಕೆ ನೀಡದ ಬೇಹುಗಾರಿಕೆಯ ವೈಫಲ್ಯದ ಬಗ್ಗೆ ಹಾಗೂ ಅತ್ಯಂತ ಭದ್ರತಾ ವಲಯವಾಗಿರುವ ಕಾಶ್ಮೀರದೊಳಗೆ ದೊಡ್ಡ ಪ್ರಮಾಣದ ಆರ್‌ಡಿಎಕ್ಸ್ ಸ್ಫೋಟಕವನ್ನು ಸಾಗಿಸಲು ಹೇಗೆ ಸಾಧ್ಯವಾಯಿತೆಂಬ ಪ್ರಶ್ನೆಗಳನ್ನು ದಾಳಿಯ ಬಗ್ಗೆ ಎದ್ದ ಪಾಕಿಸ್ತಾನ ವಿರೋಧಿ ಅಲೆಯು ಮುಳುಗಿಸಿಬಿಟ್ಟಿತು. ಯುದ್ಧೋನ್ಮಾದದ ಭಾವನೆಗಳಿಗೆ ಇಂಬುಕೊಡುವ ಸೈನಿಕ ಭಾಷೆಗಳು ಈ ಪ್ರಕರಣದಲ್ಲಿ ಕೇಳಲೇ ಬೇಕಾದ ಮೂಲಭೂತ ಪ್ರಶ್ನೆಗಳನ್ನು ಮರೆಮಾಚಿಸಿಬಿಟ್ಟವು. 

ಈಗ ನಾವು ಸ್ವಯಂ ಸೃಷ್ಟಿಸಿಕೊಂಡಿರುವ ದ್ವಂದ್ವದಲ್ಲಿ ಸಿಲುಕಿಕೊಂಡಿದ್ದೇವೆ. ಕಾಶ್ಮೀರದ ಕುರಿತು ಮತ್ತು ಪಾಕಿಸ್ತಾನದ ಜೊತೆ ಭಾರತ ಸರ್ಕಾರವು ಸಾಧಿಸಿಕೊಳ್ಳಬೇಕೆಂದಿರುವ ರಾಜಕೀಯ ಉದ್ದಿಶ್ಯಗಳ ಕುರಿತು ನಮಗೆ ಒಂದು ದೀರ್ಘಕಾಲೀನವಾದ ದೃಷ್ಟಿಕೋನವಾಗಲೀ ಮತ್ತು ವ್ಯೂಹತಂತ್ರಗಳಾಗಲೀ ಇಲ್ಲ. ದೇಶದೊಳಗೆ ಅಥವಾ ಗಡಿಗಳಲ್ಲಿ ಸಂಭವಿಸುವ ಉದ್ವಿಘ್ನ  ಪರಿಸ್ಥಿತಿಯನ್ನು ಬಳಸಿಕೊಂಡೇ ಹಾಲಿ ಸರ್ಕಾರವು ಉಳಿದುಕೊಂಡು ಬಂದಿದೆ ಎಂದು ಅದರ ಟೀಕಾಕಾರರು ವಿಮರ್ಶಿಸುತ್ತಾರೆ. ಎಲ್ಲಾ ರಾಜತಾಂತ್ರಿಕ ಮಾರ್ಗೋಪಾಯಗಳನ್ನು ಬಳಸದೆ ಏಕಾಏಕಿ ಯುದ್ಧಕ್ಕಿಳಿಯುವ ತಂತ್ರವು ಮೂಲಭೂತವಾಗಿಯೇ ದೋಷಪೂರಿತವಾದದ್ದಾಗಿದೆ. ದೇಶದೊಳಗೆ ಸಾಧಿಸಿಕೊಳ್ಳಬೇಕೆಂದಿರುವ  ರಾಜಕೀಯ ಮಹತ್ವಾಕಾಂಕ್ಷೆಗಳು ವಿದೇಶಾಂಗ ನೀತಿಯನ್ನು ಪ್ರಭಾವಿಸಬಾರದು. ಪಾಕಿಸ್ತಾನದ ಜೊತೆಗಿನ ಪೈಪೋಟಿಯಲ್ಲಿ ಸರಿಸಮನಾಗಿ ನಿಲ್ಲಬೇಕೆಂಬ ಏಕೈಕ ಕಾರಣದಿಂದ ಸಂಘರ್ಷದ ದಾರಿ ತುಳಿಯುವುದು ಮುತ್ಸದ್ಧಿತನವಲ್ಲ. ಇದರಿಂದ ಉಂಟಾಗಬಹುದಾದ ಹಾನಿಕಾರಕ ಪರಿಣಾಮಗಳ ಬಗ್ಗೆ ಹಾಗು ದಕ್ಷಿಣಾ ಏಷಿಯಾದಲ್ಲಿ ಸಂಭವಿಸಬಹುದಾದ ಒಂದು ನ್ಯೂಕ್ಲೀಯಾರ್ ಯುಧ್ಹದ ಅಂತರರಾಷ್ಟ್ರೀಯ ಪರಿಣಾಮಗಳನ್ನು ಕಡೆಗಣಿಸಬಾರದು. ತೆಗೆದುಕೊಳ್ಳುವ ಕ್ರಮಗಳ ಆಗುಹೋಗುಗಳ ಬಗ್ಗೆ ಸಮಗ್ರವಾದ ಚಿಂತನೆ ಮಾಡದೆ ಅಪಾಯಕ್ಕೆ ಒಡ್ಡಿಕೊಳ್ಳುವುದು ವಿವೇಕದ ಕ್ರಮವಲ್ಲ. ಹಾಗೆಯೇ ಸರ್ಕಾರವು ಸೈನ್ಯದ ಮೇಲಿನ ವೆಚ್ಚವನ್ನು ಹೆಚ್ಚುಮಾಡಬೇಕೆಂಬ ಒತ್ತಡವನ್ನು ಹಾಕುವಷ್ಟರ ಮಾಟಿಗೆ ಯಾವುದೇ ಗುಂಪು ಧೈರ್ಯ ಮಾಡಲು ಅವಕಾಶ ಕೊಡಬಾರದು. ಪ್ರಜಾತಂತ್ರ ಮತ್ತು ಯುದ್ಧಗಳ ಬಗ್ಗೆ ನಡೆದಿರುವ ಅಧ್ಯಯನಗಳು ತಿಳಿಸುವಂತೆ ಯುದ್ಧ ಮಾಡಲು ಆಗ್ರಹಿಸುವ ಅಲ್ಪಸಂಖ್ಯಾತ ಆಕ್ರಮಣಕಾರಿ ಸಾರ್ವಜನಿಕ ಅಭಿಪ್ರಾಯಗಳಿಗೆ ಬಗ್ಗಿ  ಯುದ್ಧ ನಿರ್ಧಾರ ಮಾಡದಂತೆ ಚುನಾವಣಾ ಒತ್ತಡಗಳು ಪ್ರಜಾತಂತದ ನಾಯಕರುಗಳಿಗೆ ತಡೆಯೊಡ್ಡುತ್ತವೆ. ಹೀಗಾಗಿ ಯುದ್ಧಕೋರತನವು ಒಂದು ವಿವೇಕಯುತವಾದ ಪ್ರಭುತ್ವ ನೀತಿಯಾಗಲಾರದು.

ಶಸ್ತ್ರಾಸ್ತ್ರಗಳ ಬಳಕೆ ಮತ್ತು ಯುದ್ಧಗಳಲ್ಲದೆ ವ್ಯೂಹೋಪಾಯಗಳಲ್ಲಿ ಇನ್ನೂ ಹಲವು ಸಾಧನಗಳಿವೆ ಎಂಬುದನ್ನು ಸರ್ಕಾರವು ಪರಿಗಣನೆಗೇ ತೆಗೆದುಕೊಳ್ಳಲು ನಿರಾಕರಿಸುತ್ತಿದೆ. ಪಾಕಿಸ್ತಾನದ ಜೊತೆಗಿನ ನಮ್ಮ ವ್ಯವಹಾರದ ನೀತಿ ನಿಯಮಗಳನ್ನು ಬದಲಾಯಿಸಲು ನಮ್ಮ ಪೌರುಷತ್ವವನ್ನು ತೋರಿಸುವುದು ಒಂದೇ ದಾರಿಯಲ್ಲ. ಯುದ್ಧವು ತನ್ನಂತೇ ತಾನೇ ಒಂದು ಗುರಿಯಾಗಲೂ ಸಾಧ್ಯವಿಲ್ಲ. ಕಳೆದ ಹಲವಾರು ವರ್ಷಗಳಿಂದ ಕಾಶ್ಮೀರದ ಸಮಸ್ಯೆಯನ್ನು ಮಿಲಿಟರಿ ಮಾರ್ಗದ ಮೂಲಕ ಬಗೆಹರಿಸಿಕೊಳ್ಳಲು ಮಾಡಿರುವ ಪ್ರಯತ್ನಗಳು ಕಾಶ್ಮೀರದ ಜನತೆಯನ್ನು ಭಾರತದಿಂದ ಮತ್ತಷ್ಟು ದೂರಗೊಳಿಸಿ ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಗೊಳಿಸಿದೆ. ಭಾರತ -ಪಾಕಿಸ್ತಾನ ಸಂಬಂಧಗಳನ್ನು ಸುಧಾರಿಸುವಲ್ಲಿ ಈ ಭೌಗೋಳಿಕ ಪ್ರದೇಶದಲ್ಲಿ ನಮ್ಮೆರಡೂ ದೇಶಗಳ ನಡುವಿನ ಪ್ರಾದೇಶಿಕ ಆರ್ಥಿಕ ಸಹಯೋಗಗಳು ಸೃಷ್ಟಿಸಬಹುದಾದ ಸಾಧ್ಯತೆಗಳನ್ನು ವ್ಯೂಹತಾಂತ್ರಿಕ ದೃಷ್ಟಿಯಲ್ಲಿಯೇ ಪರಿಶೀಲಿಸಬೇಕು. ಹಾಲಿ ಎರಡೂ ದೇಶಗಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಹೆಚ್ಚೆಚ್ಚು ಸೈನಿಕ ಕಾರ್ಯಾಚರಣೆಗಳಿಂದ ಬಗೆಹರಿಸಲು ಸಾಧ್ಯವೇ ಇಲ್ಲ. ಯುದ್ಧೋನ್ಮಾದವನ್ನು ತಗ್ಗಿಸುವುದರಿಂದ ಆಳುವ ಪಕ್ಷದ ಮೇಲೆ ಆಗಬಹುದಾದ ಚುನಾವಣಾ ಪರಿಣಾಮವನ್ನು ಲೆಕ್ಕಿಸದೆ ದೇಶದ ರಾಜತಂತ್ರಜ್ನರೆಲ್ಲಾ ಒಟ್ಟು ಸೇರಿ ಕ್ರಿಯೆಗಿಳಿಯಬೇಕಿದೆ.

ನಿರಂತರವಾದ ಒತ್ತಡ ಮತ್ತು ಸಂಘರ್ಷದ ಪರಿಸ್ಥಿತಿಗಳು ಇನ್ನಷ್ಟು ಅಸಮಾಧಾನಗಳನ್ನೇ ಹುಟ್ಟುಹಾಕುತ್ತದೆ ಮತ್ತು ಶಾಂತಿಯುತವಾದ ಸಹಬಾಳ್ವೆಗೆ ದಾರಿ ಮಾಡಿಕೊಡುವುದಿಲ್ಲ. ರಾಜತಾಂತ್ರಿಕ ಕ್ರಮಗಳು ಮಾತ್ರವೇ ಶಾಂತಿಯ ಸಮಾಲೋಚನೆಗೆ ಮತ್ತು ನಮ್ಮ ಹಿತಾಸಕ್ತಿಗಳ ರಕ್ಷಣೆಗೆ ಸೂಕ್ತವಾದ ಮಾರ್ಗವೆಂದು ಒತ್ತುಕೊಟ್ಟು ಹೇಳಲೇಬೇಕಾಗುತ್ತದೆ.

Back to Top