ISSN (Print) - 0012-9976 | ISSN (Online) - 2349-8846

ರಫೇಲ್ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ

ರಫೇಲ್ ಹಗರಣದ ಬಗ್ಗೆ ಹೊರಬರುತ್ತಲೇ ಇರುವ ಸತ್ಯಾಂಶಗಳು ಸರ್ಕಾರವು ಮಾಡಿಕೊಳ್ಳುತ್ತಿರುವ ಸಮರ್ಥನೆಗಳನ್ನು ಅಮಾನ್ಯಗೊಳಿಸುತ್ತಿರುವುದಲ್ಲದೆ ಇಡೀ ಪ್ರಕರಣದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಪಾತ್ರವನ್ನು ವಿಚಾರಣೆಗೊಳಪಡಿಸಬೇಕಾದ ಅಗತ್ಯವನ್ನು ಸೂಚಿಸುತ್ತಿದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

೨೦೧೯ರ ಲೋಕಸಭಾ ಚುನಾವಣೆಯು ಸಮೀಪಿಸುತ್ತಿದ್ದಂತೆ ರಫೇಲ್ ಯುದ್ಧವಿಮಾನ ಖರೀದಿ ಹಗರಣವು ವಿರೋಧಪಕ್ಷಗಳಿಗೆ ಹೊಸ ಶಕ್ತಿಯನ್ನು ತುಂಬುತ್ತಿದೆ. ರಫೇಲ್ ವ್ಯವಹಾರದ ಸುತ್ತಾ ನಡೆದಿರುವ ಹಲವು ಅಕ್ರಮಗಳ ಹೊಣೆಗಾರಿಕೆಯನ್ನು ಅನಿಲ್ ಅಂಬಾನಿ ಹಾಗೂ ಸರ್ಕಾರಗಳೇ ಹೊರಬೇಕೆಂದು ವಿರೋಧಪಕ್ಷಗಳೆಲ್ಲಾ  ಒಟ್ಟಾಗಿ ಒತ್ತಾಯಿಸುತ್ತಿವೆ. ಮತ್ತೊಂದು ಕಡೆ ಸರ್ಕಾರದ ವಕ್ತಾರರು ರಫೇಲ್ ವ್ಯವಹಾರದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲವೆಂದು ಸಾಬೀತುಪಡಿಸಲು ಎಲ್ಲಾ ಪ್ರಯತ್ನಗಳಲ್ಲೂ ತೊಡಗಿದ್ದಾರೆ. ಆದರೆ ಈ ವ್ಯವಹಾರದ ಬಗ್ಗೆ ಇತ್ತೀಚಿಗೆ ಬಯಲಾಗಿರುವ ಸತ್ಯಾಂಶಗಳು ಸರ್ಕಾರವನ್ನು ಮತ್ತಷ್ಟು ವಿವಾದದಲ್ಲಿ ಮುಳುಗಿಸಿದೆಯಲ್ಲದೆ ಒಟ್ಟಾರೆ ವ್ಯವಹಾರದಲ್ಲಿ ಭ್ರಷ್ಟಾಚಾರ ಮತ್ತು ಸಾರ್ವಜನಿಕ ಅಕ್ರಮಗಳ ದುರ್ವಾಸನೆ ದಟ್ಟವಾಗಿ ಹೊಡೆಯುತ್ತಿದೆ.

 

ಭಾರತೀಯ ವಾಯುಪಡೆಯು ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಕಂಪನಿಯು ತಯಾರಿಸುವ ರಫೇಲ್ ಜೆಟ್ ವಿಮಾನಗಳನ್ನು ಕೊಂಡುಕೊಳ್ಳುವ ವ್ಯವಹಾರದ ಗುತ್ತಿಗೆಯ ಒಂದು ಪಾಲನ್ನು ೨೦೧೫ರ ಏಪ್ರಿಲ್‌ನಲ್ಲಿ ಅಂಬಾನಿಯ ರಿಲೈಯನ್ಸ್ ಡಿಫೆನ್ಸ್ ಸಂಸ್ಥೆಯು ಪಡೆದುಕೊಂಡಿತು. ಕೇವಲ ಎರಡು ವಾರಗಳ ಹಿಂದಷ್ಟೆ ರಿಜಿಸ್ಟರ್ ಮಾಡಿಕೊಂಡಿದ್ದ ಕಂಪನಿಯೊಂದಕ್ಕೆ  ದಿಢೀರನೆ ಇಷ್ಟು ದೊಡ್ಡ ಗುತ್ತಿಗೆಯನ್ನು ನೀಡಲಾಯಿತು. ಮತ್ತೊಂದೆಡೆ ಇಡೀ ಒಪ್ಪಂದವನ್ನೇ ಒಂದು ಪವಾಡ ಸದೃಶ ಸಾಧನೆಯೆಂಬಂತೆ ಸಾರ್ವಜನಿಕರೆದುರು ಬಿತ್ತರಿಸಲಾಯಿತು. ಆ ಸಂದರ್ಭದಲ್ಲಿ ಪ್ರಧಾನಿಯಾಗಿ ತನ್ನ ಮೊದಲ ವರ್ಷದ ಮುಕ್ತಾಯದ ಹೊಸ್ತಿಲಲ್ಲಿದ್ದ ನರೇಂದ್ರ ಮೋದಿಯವರು ವಿಶ್ವದ ಎಲ್ಲ ಶಕ್ತ ರಾಷ್ಟ್ರಗಳಿಗೆ ಭೇಟಿ ನೀಡುವ ಅಭಿಯಾನದಲ್ಲಿ ಫ್ರಾನ್ಸ್ ಭೇಟಿಯಲ್ಲಿದ್ದರು. ಭಾರತದ ವಿದೇಶಾಂಗ ಸಂಬಂಧಗಳ ಸಂದರ್ಭವನ್ನು ಹೊಸದಾಗಿ ಪುನರ್ರಚಿಸಿಕೊಳ್ಳುವುದು ಪ್ರಧಾನಿಗಳ ಈ ಶಕ್ತ ರಾಷ್ಟ್ರಗಳ ಭೇಟಿಯ ಉದ್ದೇಶವೆಂದು ಹೇಳಲಾಗಿತ್ತು. ಹೀಗಾಗಿ ಈ ಭೇಟಿಯ ಸ್ವಲ್ಪ ಮುಂಚೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು ಹೇಳಿದಂತೆ ಇದೊಂದು ನಾಯಕತ್ವ ಮಟ್ಟದ ಭೇಟಿಯಾಗಿದ್ದು ಯಾವುದೇ ರಕ್ಷಣಾ ಗುತ್ತಿಗೆಗಳ ಒಳವಿವರಗಳನ್ನು ಚರ್ಚಿಸುವ ಕಾರ್ಯಕ್ರಮವಾಗಿರಲಿಲ್ಲ.

 

ಈ ಹಿಂದಿನ ಸರ್ಕಾರವು ಯುದ್ಧವಿಮಾನಗಳ ಖರೀದಿಗಾಗಿ ಪ್ರಾರಂಭಿಸಿದ ಪ್ರಸ್ತಾವಗಳಿಗಾಗಿ ಕೋರಿಕೆಯನುಸಾರ ಫ್ರಾನ್ಸಿನ ಡಸಾಲ್ಟ್ ಕಂಪನಿಯ ಜೊತೆ ೨೦೦೭ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತ್ತು.  ಅದರಲ್ಲಿ ಸೂಕ್ತವಾದ ಮತ್ತು ಅತ್ಯಾಧುನಿಕವಾದ ಎಲ್ಲಾ ಶಸ್ತ್ರೋಪಕರಣಗಳನ್ನು ಜೋಡಿಸಿದ ೧೮ ಫೈಟರ್ ಜೆಟ್‌ಗಳ ಖರೀದಿ ಮತ್ತು ಭಾರತದ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾದ ಎಚ್.ಎ.ಎಲ್ ಜೊತೆಗೂಡಿ ೧೦೮ ಯುದ್ಧ ವಿಮಾನಗಳ ತಯಾರಿಯ ಒಪ್ಪಂದವೂ ಭಾಗವಾಗಿತ್ತು. ಅವುಗಳ ಬೆಲೆಯ ಕುರಿತು ವಿಸ್ತೃತವಾದ ಚರ್ಚೆಗಳು ನಡೆದು ಕೆಲವು ತೊಡಕುಗಳು ಉದ್ಭವಿಸಿದವು. ವಿಮಾನಗಳ ನೇರ ಖರೀದಿ ಹಾಗೂ ಒಪ್ಪಂದ ಮಾಡಿಕೊಳ್ಳಲಾದ ವಿಮಾನಗಳ ಸಂಖ್ಯೆಯ ಅರುಪಟ್ಟು ಹೆಚ್ಚಿನ ವಿಮಾನಗಳ ತಯಾರಿಕೆಯಲ್ಲಿ ಶೇ.೭೦ರಷ್ಟು ಮೌಲ್ಯ ಸೇರ್ಪಡೆಯನ್ನು ಎಚ್.ಎ.ಎಲ್‌ನಿಂದಲೇ ಮಾಡಿಕೊಳ್ಳಬೇಕು ಎಂಬಿತ್ಯಾದಿ ಶರತ್ತುಗಳುಳ್ಳ ಒಂದು ಸಂಕೀರ್ಣ ಒಪ್ಪಂದದಲ್ಲಿ  ಇಂತಹ ತೊಡಕುಗಳು ಸಾಮಾನ್ಯವೇ ಆಗಿದ್ದವು.

 

ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವಿನ ನಾಯಕರ ಮಟ್ಟದಂತಹ ಜಾಗತಿಕ ಮಟ್ಟದಮಾತುಕತೆಗಳಲ್ಲಿ ಯಾವುದೋ ಒಂದು ಒಪ್ಪಂದದ ವಿವರಗಳು ಜಾಗ ಪಡೆದುಕೊಳ್ಳುವ ಸಾಧ್ಯತೆಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರಾಕರಿಸಿದ ಎರಡು ದಿನಗಳಲ್ಲೇ ಫ್ರಾನ್ಸಿನ ಜೊತೆ ಸನ್ನದ್ಧ ಸ್ಥಿತಿಯಲ್ಲಿರುವ ೩೬ ವಿಮಾನಗಳ ಖರೀದಿಯ ಬಗ್ಗೆ ಅಂತರ್ ಸರ್ಕಾರ ಒಪ್ಪಂದ (ಇಂಟರ್ ಗವರ್ನಮೆಂಟಲ್ ಅಗ್ರೀಮೆಂಟ್- ಐಜಿಎ)ವಾಗಿರುವುದಾಗಿ ಭಾರತದ ಪ್ರಧಾನಿಗಳೇ ಘೋಷಿಸಿದರು. ಜಂಟಿ ಹೇಳಿಕೆಯೊಂದು ಈ ಒಪ್ಪಂದz ಬಗ್ಗೆ ಪ್ರತ್ಯೇಕವಾದ ಪ್ರಕ್ರಿಯೆಯೊಂದು ಪ್ರಾರಂಭವಾಗಿದ್ದು, ಒಪ್ಪಂದದ ಶರತ್ತುಗಳು ಡಸಾಲ್ಟ್ ಕಂಪನಿ ತಿಳಿಸಿರುವ ಶರತ್ತುಗಳಿಗಿಂತಲೂ ಉತ್ತಮವಾಗಿರುತ್ತವೆ. ಎಂದು ಹೇಳಿತ್ತು.

 

ಆದರೆ ಅಂಕಿಸಂಖ್ಯೆಗಳು ಸರ್ಕಾರದ ಹೇಳಿಕೆಯನ್ನು ಸಮರ್ಥಿಸುತ್ತಿಲ್ಲವೆಂಬುದು ಸುಸ್ಪಷ್ಟ. ಆದರೆ ಈ ಪ್ರತ್ಯೇಕ ಪ್ರಕ್ರಿಯೆಯಡಿ ನಡೆಯುತ್ತಿದ್ದ ಮಾತುಕತೆ ಪ್ರಕ್ರಿಯೆಯಲ್ಲಿ ಹಲವಾರು ಭರವಸೆಗಳನ್ನು ನೀಡಲಾಗಿದ್ದರೂ ಅಂತಿಮವಾಗಿ ಘೋಷಿಸಲಾದ ಅಂತರ್ ಸರ್ಕಾರ ಒಪ್ಪಂದ-ಐಜಿಎ ದಲ್ಲಿ ನೇರ ಖರೀದಿಯ ಹೊರತಾಗಿ ಬೇರೇನೂ ಇರಲಿಲ್ಲ. ೨೦೦೭ರಲ್ಲಿ ಈ ಹಿಂದಿನ ಸರ್ಕಾರವು ಮಾಡಿಕೊಂಡಿದ್ದ ಒಪ್ಪಂದದಲ್ಲಿ ಅಂದಾಜು ೪೨,೦೦೦ ಕೋಟಿ ವೆಚ್ಚದಲ್ಲಿ ೧೨೬ ರಫೇಲ್ ಜೆಟ್ ವಿಮಾನಗಳನ್ನು ಖರೀದಿಸುವ ಒಪ್ಪಂದವಾಗಿತ್ತು. ಅಂದರೆ ಪ್ರತಿ ವಿಮಾನಕ್ಕೆ ೩೫೦ ಕೋಟಿ ರೂಗಳೆಂದು ಒಪ್ಪಂದವಾಗಿತ್ತು. ಆದರೆ ೨೦೧೫ರ ಏಪ್ರಿಲ್‌ನಲ್ಲಿ ಆಗಿನ ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಅವರು ಘೋಷಿಸಿದ ರಫೇಲ್ ಒಪ್ಪಂದದ ವಿವರಗಳಲ್ಲಿ, ಐಜಿಎ ಮಾತುಕತೆಗೂ ಮೀರಿ, ಪ್ರತಿ ವಿಮಾನಕ್ಕೆ ರೂ.೭೧೫ ಕೋಟಿ ಬೆಲೆ ನಿಗದಿಯಾಗಿತ್ತು! ಐಜಿಎ ಒಪ್ಪಂದಗಳಲ್ಲಿ ಬೆಲೆ ಎಷ್ಟೆಂದು ನಿಗದಿಯಾಗಿತ್ತೆಂಬುದನ್ನು ಬಹಿರಂಗಪಡಿಸಬೇಕೆಂದು ಎಷ್ಟೇ ಪ್ರತಿಭಟನೆ ನಡೆಸಿದರೂ ಸರ್ಕಾರ ತುಟಿಬಿಚ್ಚಿರಲಿಲ್ಲ. ಆದರೆ ರಕ್ಷಣಾ ಖಾತೆಯ ರಾಜ್ಯಮಂತ್ರಿ ಸುಭಾಷ್ ಬ್ರಹ್ಮೆಯವರು ೨೦೧೬ರ ನವಂಬರ್‌ನಲ್ಲಿ ಲೋಕಸಭೆಯಲ್ಲಿ ನಡೆದ ಚರ್ಚೆಯೊಂದರಲ್ಲಿ ಐಜಿಎ ಒಪ್ಪಂದದಲ್ಲಿ ಪ್ರತಿ ವಿಮಾನದ ಬೆಲೆ ೬೭೦ ಕೋಟಿ ರೂ.ಗಳೆಂದು ನಿಗದಿಯಾಗಿತ್ತೆಂದುಬಾಯಿ ತಪ್ಪಿ ಬಹಿರಂಗಗೊಳಿಸಿಬಿಟ್ಟರು. ಆದರೆ ಡಸಾಲ್ಟ್ ಮತ್ತು ರಿಲಾಯನ್ಸ್ ಡಿಫೆನ್ಸ್ ಕಂಪನಿಗಳು ೨೦೧೭ರ ಫೆಬ್ರವರಿಯಲ್ಲಿ ಜಂಟಿಯಾಗಿ ಪ್ರಕಟಿಸಿದ ಹೇಳಿಕೆಯಲ್ಲಿ ಪ್ರತಿ ವಿಮಾನದ ಬೆಲೆ ೧೬೬೦ ಕೋಟಿ ಎಂದು ಘೋಷಿಸಿದ್ದರು. ಇದು ಲೋಕಸಭೆಯಲ್ಲಿ ಮಂತ್ರಿಗಳು ನೀಡಿದ ಹೇಳಿಕೆಗೆ ವ್ಯತಿರಿಕ್ತವಾಗಿತ್ತು. ಇಷ್ಟಾದರೂ ಇನ್ನಿದುವರೆಗೂ ಒಪ್ಪಂದದ ಭಾಗವಾಗಿ ಮೊಟ್ಟಮೊದಲ ವಿಮಾನದ ಸರಬರಾಜೂ ಕೂಡಾ ಆಗಿಲ್ಲದಿರುವುದರಿಂದ ಈ ಒಪ್ಪಂದವು ವಿಧಿಸಿರುವ ಕಾಲಮಿತಿಯನ್ನು ನಿಜಕ್ಕೂ ಪಾಲಿಸುವುದೇ ಎಂಬ ಬಗ್ಗೆ ಸಕಾರಣವಾದ ಅನುಮಾನಗಳಿವೆ. ಈ ಮಧ್ಯೆ ಹಲವಾರು ಸಾರ್ವಜನಿಕ ಸಂಸ್ಥೆಗಳು ಸಹ ಈ ವ್ಯವಹಾರದಲ್ಲಿ ಸರ್ಕಾರವು ತೆಗೆದುಕೊಂಡಿರುವ ಹಲವಾರು ಅನುಮಾನಸ್ಪದ ತೀರ್ಮಾನಗಳಲ್ಲಿ ಪಾಲುದಾರರಾಗಿರುವ ಆಪಾದನೆಗಳಿಗೆ ಗುರಿಯಾಗಿವೆ ಮತ್ತು ಇನ್ನೂ ವಿವಿಧವಾದ ಮುಜುಗರಗಳಿಗೆ ಸರ್ಕಾರವು ಕೂಡಾ ಗುರಿಯಾಗುವಂತಾಗಿದೆ. ನಾಗರಿಕ ಹಕ್ಕುಗಳ ವಕೀಲರಾಗಿರುವ ಪ್ರಶಾಂತ್ ಭೂಷಣ್, ಹಾಗೂ ಇತ್ತೀಚಿನವರೆಗೂ ಮೋದಿ ಸರ್ಕಾರವನ್ನು ಸಮರ್ಥಿಸಿಕೊಂಡು ಬಂದಿದ್ದ ಭಾರತದ ಹಿರಿಯ ಮತ್ತು ಪ್ರಖ್ಯಾತ ರಾಜಕಾರಣಿಗಳಾದ ಅರುಣ್ ಶೌರಿ ಮತ್ತು ಯಶವಂತ ಸಿನ್ಹಾರವರು ಒಟ್ಟುಗೂಡಿ ೨೦೧೮ರ ಆಗಸ್ಟಿನಲ್ಲಿ ರಫೇಲ್ ವ್ಯವಹಾರದ ಬಗ್ಗೆ ಒಂದು ವಿವರವಾದ ಸತ್ಯಸಂಗತಿಗಳ ವರದಿಯನ್ನು ಪ್ರಕಟಪಡಿಸಿದರು.ಈ ವ್ಯವಹಾರವು ನಡೆದುಕೊಂಡು ಬಂದ ಇತಿಹಾಸವನ್ನು ಕಾಲಾನುಕ್ರಮದನುಸಾರವಾಗಿ ಕಟ್ಟಿಕೊಡುವ ಆ ವಾಸ್ತವ ಸಂಗತಿಗಳು ರಫೇಲ್ ವ್ಯವಹಾರದಲ್ಲಿ ಸಾಕಷ್ಟು ಅಕ್ರಮಗಳು ನಡೆದಿರಬಹುದಾದ ದಟ್ಟವಾದ ಸಾಧ್ಯತೆಗಳನ್ನು ತೆರೆದಿಟ್ಟಿದೆ.

ಈ ಹಗರಣದ ಬಗ್ಗೆ ದೇಶದ ಪ್ರಧಾನ ತನಿಖಾ ಸಂಸ್ಥೆಯಾದ ಸಿಬಿಐ ನಿಂದ ತನಿಖೆ ನಡೆಸಬೇಕೆಂದೂ ಆಗ್ರಹಿಸಲಾಯಿತು. ಅಂತಹ ಸಾಧ್ಯತೆ ದಟ್ಟವಾಗುತ್ತಿರುವಂತೆ ಸಿಬಿಐ ಸಂಸ್ಥೆಯಲ್ಲೇ ಹಲವಾರು ಬದಲಾವಣೆಗಳನ್ನು ಮಾಡಲಾಯಿತಲ್ಲದೆ ಅದು ಆ ಸಂಸ್ಥೆಯ ಉನ್ನತ ಅಧಿಕಾರಗಳ ನಡುವೆಯೇ ಹಿಂದೆಂದೂ ಇಲ್ಲದ ಒಳಜಗಳವನ್ನು ಹುಟ್ಟುಹಾಕಿತು. ಸಿಬಿಐನ ಅತ್ಯುನ್ನತ ಅಧಿಕಾರಿಯನ್ನು ತೆಗೆದುಹಾಕುವ ನಿರ್ಣಯಕ್ಕೆ ತನ್ನ ಸಮ್ಮತಿಯನ್ನು ಸೂಚಿಸಿದ ನ್ಯಾಯಾಧೀಶರೊಬ್ಬರಿಗೆ ಸರ್ಕಾರವು ನಿವೃತ್ತಿಯ ನಂತರz ಅಧಿಕಾರವೊಂದನ್ನು ನೀಡಲು ತೀರ್ಮಾನಿಸಿತ್ತೆಂಬ ಹಾಗೂ ಆ ನ್ಯಾಯಾಧೀಶರು ಅದನ್ನು ಒಪ್ಪಿಕೊಳ್ಳಲಿದ್ದರೆಂಬ ಅತ್ಯಂತ ಅನಾರೋಗ್ಯಕರ ಸಂಗತಿಯು ಕೂಡಾ ಬೆಳಕಿಗೆ ಬಂದಿತು. ಅಂತಿಮವಾಗಿ ಸಿಬಿಐ ತನಿಖೆಯನ್ನು ನಿರಾಕರಿಸಿದ ಕೋರ್ಟು ಈ ವಿಷಯದ ಬಗ್ಗೆ ಯಾವುದೇ ಪರಿಶೋಧನೆಯನ್ನೇ ಆರಂಭಿಸದಿದ್ದ ಭಾರತದ ಮಹಾ ಲೆಕ್ಕ ಪರಿಶೋಧಕರಿಗೆ (ಕಂಪ್ಟ್ರೋಲರ್ ಅಂಡ್ ಆಡಿಟರ್ ಜನರಲ್ - ಸಿಎಜಿ) ತನಿಖೆ ಮಾಡಲು ಸೂಚಿಸಿತು.

ಸಿಎಜಿಯು ತನ್ನ ವರದಿಯಲ್ಲಿ ರಫೇಲ್ ಜೆಟ್ ವಿಮಾನ ಖರೀದಿ ವ್ಯವಹಾರವನ್ನು ಆರ್ಥಿಕತೆ ಮತ್ತು ವೆಚ್ಚದ ಆಧಾರದಲ್ಲಿ ಸಮರ್ಥಿಸಿದಂತೆ ಕಂಡುಬರುತ್ತದೆ. ಆದರೆ ಆ ವೇಳೆಗಾಗಲೇ ರಕ್ಷಣಾ ಇಲಾಖೆಯ ಕಡತಗಳನ್ನು ಆಧರಿಸಿ ಮಾಧ್ಯಮಗಳು ಬಹಿರಂಗಪಡಿಸಿದಂತೆ ಐಜಿಎ ಒಪ್ಪಂದ ಜಾರಿಗೆ ಬಂದ ನಂತರದಲ್ಲೂ ರಫೇಲ್ ಖರೀದಿಯು ಶೇ.೪೧ರಷ್ಟು ತುಟ್ಟಿಯಾಗಿತ್ತೆಂಬುದು ಸಾರ್ವಜನಿಕವಾಗಿತ್ತು. ರಕ್ಷಣಾ ಇಲಾಖೆಯ ಅಧಿಕಾರಿಗಳು ತಯಾರು ಮಾಡಿದ ವರದಿಯೂ ಸ್ಪಷ್ಟಪಡಿಸುವಂತೆ ಪ್ರಧಾನ ಮಂತ್ರಿ ಕಾರ್ಯಾಲಯದ ಸತತ ಮಧ್ಯಪ್ರವೇಶದಿಂದಾಗಿ ಈ ವ್ಯವಹಾರದಲ್ಲಿ ಭಾರತದ ಬೆಲೆ-ಸಮಾಲೋಚನೆ ಸಾಮರ್ಥ್ಯ ಬಹಳಷ್ಟು ಕುಸಿಯಿತು.

ರಾಷ್ಟ್ರೀಯ ಭದ್ರತೆಯ ವಿಷಯವು ಸಂಪೂರ್ಣವಾಗಿ ತನ್ನ ಜಾಗೀರೆಂದು ಭಾವಿಸುವ ಹಾಲಿ ಸರ್ಕಾರ ಅದರ ಸುತ್ತ ಇನ್ನಿಲ್ಲದ ಒತ್ತನ್ನು ಹಾಕುತ್ತಿದೆ. ತನ್ನ ರಾಜಕೀಯ ವಿರೋಧಿಗಳ ಮೇಲೆ ದೇಶದ್ರೋಹಿ ಚಟುವಟಿಕೆಗಳ ಅಸ್ತ್ರವನ್ನು ಪ್ರಯೋಗಿಸುವ ಹಳೆಯ ಚಾಳಿಯನ್ನು ಮತ್ತೊಮ್ಮೆ ನವೀಕರಿಸಿದೆ. ಅದೇನೇ ಮಾಡಿದರೂ ಭ್ರಷ್ಟಾಚಾರದ ದುರ್ವಾಸನೆ ಮಾತ್ರ ಹೋಗುತ್ತಿಲ್ಲ.

Back to Top