ISSN (Print) - 0012-9976 | ISSN (Online) - 2349-8846

ಬೆಟ್ಟದೆತ್ತರವಾಗುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳು

ಪ್ಲಾಸ್ಟಿಕ್ ಬಳಕೆ ನಿರಾಕರಣೆ ಮಾತ್ರದಿಂದಲೇ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಬಗೆಹರಿಯುವುದಿಲ್ಲ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಬಗ್ಗೆ ರಾಜಕೀಯ ನಾಯಕರುಗಳು ಪದೇಪದೇ ಸಾರ್ವಜನಿಕ ಘೋಷಣೆಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಆ ಘೋಷಣೆಗಳಿಗೆ ಯಾವುದೇ ಧೃಢವಾದ ಮತ್ತು ನಿಶ್ಚಿತವಾದ ಪ್ರತಿಸ್ಪಂದನೆಗಳು ಮಾತ್ರ ದೊರೆಯುತ್ತಿಲ್ಲ. ಉದಾಹರಣೆಗಳು ಪ್ರಧಾನಿಗಳು ಭಾರತವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವುದಾಗಿ ಘೋಷಿಸಿದ್ದರೂ, ೨೦೨೨ರೊಳಗೆ ಭಾರತದಲ್ಲಿ ಒಮ್ಮೆ ಬಳಸಿ ಬಿಸುಡುವ ಏಕಬಳಕೆ ಪ್ಲಾಸ್ಟಿಕ್‌ನ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಗುರಿಯನ್ನು ಹಿಂತೆಗೆದುಕೊಳ್ಳಲಾಗಿದೆ. ಏಕೆಂದರೆ ಈ ಕ್ರಮದಿಂದಾಗಿ ಅದನ್ನು ಉತ್ಪಾದಿಸುತ್ತಿರುವ ೧೦,೦೦೦ಕ್ಕೂ ಹೆಚ್ಚು ಕಾರ್ಖಾನೆಗಳು ಮುಚ್ಚಿಕೊಂಡು ಈಗಾಗಲೇ ಇಳಿಮುಖದಲ್ಲಿರುವ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಕಂಗೆಡಿಸುವುದರ ಜೊತೆಗೆ ಬಳಕೆವಸ್ತುಗಳ ಉದ್ದಿಮೆಗಳ ಕೆಂಗೆಣ್ಣಿಗೂ ಗುರಿಯಾಗಬೇಕಾಗುತ್ತದೆಂದೂ ಭಾವಿಸಲಾಗಿದೆ.

ಏಕಬಳಕೆ ಪ್ಲಾಸ್ಟಿಕ್ ನಿಷೇಧವಾಗುತ್ತದೆಂಬ ಪುಕಾರು ಹಬ್ಬಿದ್ದರೂ ತಳಮಟ್ಟದಲ್ಲಿ ಅದಕ್ಕೆ ಬೇಕಿದ್ದ ತಯಾರಿಯನ್ನು ಮಾಡಿಕೊಂಡಿರಲಿಲ್ಲವೆಂಬುದು ಸ್ಪಷ್ಟವಾಗಿತ್ತು. ವಾಸ್ತವವಾಗಿ ಏಕಬಳಕೆ ಪ್ಲಾಸ್ಟಿಕ್ ಎಂದರೆ ಯಾವುದು ಎಂಬುದರ ಬಗ್ಗೆಯಾಗಲೀ, ಅದರ ಬಳಕೆ ಹಾಗೂ ನಿಷೇಧದ ಬಗ್ಗೆಯಾಗಲೀ ಅಥವಾ ಅವಕ್ಕೆ ಸೂಕ್ತ ಪರ್ಯಾಯಗಳನ್ನು ಒದಗಿಸುವ ಯೋಜನೆಗಳ ಬಗ್ಗೆಯಾಗಲೀ ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಲಾಗಿರಲಿಲ್ಲ. ಬೇರೆಬೇರೆ ರಾಜ್ಯಗಳು ಏಕಬಳಕೆ ಪ್ಲಾಸ್ಟಿಕ್ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿದ್ದರೂ ಅದರಿಂದ ಹೆಚ್ಚಿನ ಉಪಯೋಗವೇನೂ ಆಗಿಲ್ಲ. ಅದೇನೇ ಇದ್ದರೂ, ಮರುಬಳಕೆ ಮಾಡಲಾಗದ ಸಮಸ್ಯಾತ್ಮಕ ಪ್ಲಾಸ್ಟಿಕ್ ಬಳಕೆಯನ್ನು ಹಂತಹಂತವಾಗಿ ನಿಲ್ಲಿಸಬೇಕಾದ ಅಗತ್ಯವಂತೂ ತುರ್ತಾಗಿದೆ. ಬಹಳಷ್ಟು ಏಕಬಳಕೆ ಪ್ಲಾಸ್ಟಿಕ್ಕನ್ನು ಬಳಸಿದ ಮರುಗಳಿಗೆಯಲ್ಲೇ ಬಿಸಾಡಲಾಗುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳ ಹಾಗೂ ಆಹಾರ ವಸ್ತುಗಳ ಉದ್ಯಮಿಗಳು ಇಂಥಾ ಪ್ಲಾಸ್ಟಿಕ್ಕನ್ನು ಹೆಚ್ಚಾಗಿ ಬಳಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ಕಿನ ಬಳಕೆ ಹೆಚ್ಚಾಗುತ್ತಿರುವ ಕಾರಣ ಘನತ್ಯಾಜ್ಯ ವಸ್ತುಗಳ ಘಟಕಾಂಶಗಳಲ್ಲಿ ತೀವ್ರವಾದ ಬದಲಾವಣೆಗಳು ಉಂಟಾಗುತ್ತಿವೆ. ಭಾರತದಲ್ಲಿ ಪ್ರತಿದಿನ ಅಂದಾಜು ೨೫,೯೪೦ ಟನ್ನಿನ್ನಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳು ಉತ್ಪಾದನೆಯಾಗುತ್ತವೆ. ಅದರಲ್ಲಿ ಶೇ.೪೦ರಷ್ಟು ಪ್ಲಾಸ್ಟಿಕ್ಕನ್ನು ಸಂಗ್ರಹಿಸುವುದೂ ಇಲ್ಲ ಅಥವಾ ಮರುಬಳಕೆಯನ್ನೂ ಮಾಡುವುದಿಲ್ಲ. ಹೀಗಾಗಿ ಅವುಗಳು ಅಂತಿಮವಾಗಿ ನೀರನ್ನು ಕಲುಷಿತಗೊಳಿಸುತ್ತವೆ, ಅಥವಾ ಚರಂಡಿಯಲ್ಲಿ ಸೇರಿಕೊಂಡು ಹರಿವಿಗೆ ಅಡ್ಡಿಯಾಗುತ್ತವೆ ಅಥವಾ ಮಣ್ಣನ್ನು ಹಾನಿಗೊಳಿಸುತ್ತವೆ. ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಎಷ್ಟು ವಿಶಾಲವಾದ ಹರಹನ್ನು ಪಡೆದುಕೊಂಡಿದೆಯೆಂದರೆ ಆಳ ಸಮುದ್ರದಲ್ಲಿರುವ ಅಥವಾ ಧೃವ ಪ್ರದೇಶಗಳಲ್ಲಿರುವ ಆಮೆಗಳು, ಹಸುಗಳು ಅಥವಾ ಇನ್ನಿತರ ಪ್ರಾಣಿಗಳ ಕರುಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಅಥವಾ ಕರುಳು ಕಿತ್ತುಬಂದಿರುವ, ಅಥವಾ ಸಿಗರೇಟಿನ ಮೊನೆಗಳು ಮೂಗಿನಲ್ಲಿ ಸಿಕ್ಕಿಕೊಂಡಿರುವ ಅಥವಾ ಪ್ಲಾಸ್ಟಿಕ್ ದಾರಗಳು ಕುತ್ತಿಗೆಗೆ ಬಿಗಿದಿರುವ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುತ್ತಿವೆ.

ಇಂದು ಮನುಷ್ಯರು ಪ್ರತಿದಿನ ಅಂದಾಜು ೨೫೦ ಮೈಕ್ರೋಪ್ಲಾಸ್ಟಿಕ್ ಚೂರುಗಳನ್ನು ಸೇವಿಸುತ್ತಾರೆಂದು ಇತ್ತೀಚಿನ ಸಂಶೋಧನೆಗಳು ಸಾಬೀತುಪಡಿಸಿವೆ. ಇಂಥಾ ಮೈಕ್ರೋ ಪ್ಲಾಸ್ಟಿಕ್‌ಗಳು ಸರಿಯಾಗಿ ನಿರ್ವಹಿಸದ ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮಾತ್ರವಲ್ಲದೆ ಸಾಬೂನು ಹಾಗೂ ಟೂಥ್‌ಪೇಸ್ಟ್‌ಗಳಿಂದಲೂ ನೇರವಾಗಿ  ಉತ್ಪಾದಿತವಾಗುತ್ತವೆ. ಆದರೆ ಮನುಷ್ಯರು ಸೇವಿಸುವ ಮೈಕ್ರೋಪ್ಲಾಸ್ಟಿಕ್‌ಗಳ ಮೂಲ ಮಾತ್ರ ನಲ್ಲಿ ಹಾಗೂ ಹಾಗೂ ಬಾಟಲ್‌ನೀರುಗಳೇ ಆಗಿವೆ.

ಈ ಬಹುಪಾಲು ವಾಸ್ತವ ಸಂಗತಿಗಳು ಗೊತ್ತಿದ್ದರೂ ಸಹ ಜನರು ಪ್ಲಾಸ್ಟಿಕ್ ಬಳಕೆಯನ್ನೇನು ಕಡಿಮೆ ಮಾಡುತ್ತಿಲ್ಲ. ತಮ್ಮ ಜಾಗದಲ್ಲಿ ಬಿಟ್ಟು ಬೇರೆಡೆ ಬಿಸುಡುವ ಸಂಸ್ಕೃತಿ ವ್ಯಾಪಕವಾಗಿರುವುದು ಮಾತ್ರವಲ್ಲದೆ ಪ್ಲಾಸ್ಟಿಕ್ ಬಳಕೆ ಒಂದು ಬಗೆಯ ಅನುಕೂಲತೆ ಹಾಗೂ ಅನಿವಾರ್ಯತೆಗಳನ್ನು ಹುಟ್ಟುಹಾಕಿರುವುದೂ ಸಹ ಇದಕ್ಕೆ ಕಾರಣವಾಗಿದೆ. ಉದಾಹರಣೆಗೆ ವೈದ್ಯಕೀಯ ಕ್ಷೇತ್ರಗಳಲ್ಲಿ ಔಷಧಗಳ ಸಂಗ್ರಹಕ್ಕೆ ಪ್ಲಾಸ್ಟಿಕ್ ಬಳಸುವುದನ್ನು ಸ್ವಚ್ಚ ಮತ್ತು ಸುರಕ್ಷಿತ ಎಂದು ಭಾವಿಸಲಾಗುತ್ತದೆ. ಆದರೆ ಪ್ಲಾಸ್ಟಿಕ್‌ನಲ್ಲಿ ಮುಚ್ಚಿಡಲಾಗುವ ಔಷಧವೂ ಅಷ್ಟೊಂದು ಸುರಕ್ಷಿತವಲ್ಲವೆಂಬುದು ಈಗ ತಿಳಿದು ಬರುತ್ತಿದೆ ಅಲ್ಲದೇ ಸುರಕ್ಷಿತ ಪ್ಲಾಸ್ಟಿಕ್ ಬಳಕೆಯ ಮಾನದಂಡಗಳನ್ನೂ ಸಹ ಭಾರತದಲ್ಲಿ ಅನುಸರಿಸುವುದಿಲ್ಲ.

ಪ್ಲಾಸ್ಟಿಕ್ ಬಳಕೆಯು ಜನಸಾಮಾನ್ಯರ ಸಂಸ್ಕೃತಿಯ ಭಾಗವಾಗಿಬಿಟ್ಟಿದೆ.  ಪ್ಲಾಸ್ಟಿಕ್ಕನ್ನು ಬಳಸಿ ಬಿಸುಡುವವರು ಅದನ್ನು ಸ್ವಚ್ಚಗೊಳಿಸಲು ಮಾತ್ರ ಬಾಧ್ಯರಲ್ಲ.  ಹಾಗೆಯೇ ತಾವು  ಉತ್ಪಾದಿಸುತ್ತಿರುವ ಈ ತ್ಯಾಜ್ಯ ಅಂತಿಮವಾಗಿ ಏನಾಗಲಿದೆ ಎಂಬುದರ ಬಗ್ಗೆಯೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗೆಯ ಜೀವನಶೈಲಿಯ ಪರಿಣಾಮಗಳು ಘನತ್ಯಾಜ್ಯಗಳನ್ನು ಬಿಸುಡುವ ಪ್ರದೇಶಗಳಲ್ಲಿ ಬೆಟ್ಟದಂತೆ ಬೆಳೆಯುತ್ತಿರುವ ಘನತ್ಯಾಜ್ಯ ಸಂಗ್ರಹಗಳಲ್ಲಿ ವ್ಯಕ್ತವಾಗುತ್ತದೆ. ಉದಾಹರಣೆಗೆ ದೆಹಲಿಯ ಗಾಜಿಪುರದ ಅಂಥ ಒಂದು ಘನತ್ಯಾಜ್ಯ ಸಂಗ್ರಹ ಪ್ರದೇಶದಲ್ಲಿ ತ್ಯಾಜ್ಯಗಳು ೬೫ ಮೀಟರುಗಳಷ್ಟು ಎತ್ತರಕ್ಕೆ ಬೆಳೆದು ಕುಂತಿವೆ. ಇವು ಪ್ರಾಣಾಂತಿಕವೂ ಆಗಬಲ್ಲವು. ಏಕೆಂದರೆ ತ್ಯಾಜ್ಯ ಸಂಗ್ರಹದಲ್ಲಿರುವ ವಿಷಕಾರಿ ವಸ್ತುಗಳು ಮತ್ತು ಸಂಸ್ಕರಿಸದ ತ್ಯಾಜ್ಯಗಳು ನೀರನ್ನು ಕಲುಷಿತಗೊಳಿಸಬಹುದು ಮತ್ತು ತ್ಯಾಜ್ಯಗಳಿಗೆ ಬೆಂಕಿ ಇಟ್ಟಾಗ ಕ್ಯಾನ್ಸರ್‌ಕಾರಕ ಮಾಲಿನ್ಯವೂ ಹರಡಬಹುದು.

ಪ್ಲಾಸ್ಟಿಕ್ ಅನ್ನು  ಮರುಸಂಸ್ಕರಿಸಿ ಮರುಬಳಕೆಯೋಗ್ಯ ಮಾಡಲು ಮೂಲದಲ್ಲೇ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವುದು ಅತ್ಯುತ್ತಮವಾದ ಕ್ರಮ. ಆದರೆ ಬಹಳಷ್ಟು ನಗರ ಮತ್ತು ಪೌರಪಾಲಿಕೆಗಳು ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ನಿರ್ವಹಣೆ ಕಾನೂನುಗಳನ್ನು ಅನುಷ್ಠಾನಕ್ಕೆ ತರಲು ಹೆಣಗಾಡುತ್ತಿವೆ. ಒಂದು ಸರಿಯಾದ ತ್ಯಾಜ್ಯ ನಿರ್ವಹಣಾ ಪದ್ಧತಿ ಇಲ್ಲದಿರುವುದರಿಂದ ಕಳಪೆ ಪ್ಲಾಸ್ಟಿಕ್ ಕಸಗಳ ಸಂಸ್ಕರಣೆಯು ದುಬಾರಿ ಹಾಗೂ ಅಸುರಕ್ಷಿತ ಮಾತ್ರವಲ್ಲದೆ ಅತಿ ಹೆಚ್ಚು ನೀರನ್ನೂ ಕಬಳಿಸುವ ಪ್ರಕ್ರಿಯೆಯಾಗಲಿದೆ. ಆಹಾರ ಪ್ಯಾಕೇಜಿಂಗ್ ಉದ್ದಿಮೆಯಲ್ಲಿ ಬಳಸುವ ಬಹುಪದರದ ಪ್ಲಾಸ್ಟಿಕ್‌ಗಳನ್ನು ಪುನರ್ ಸಂಸ್ಕರಣೆ ಮಾಡಲಾಗದು. ಆದ್ದರಿಂದ ಉತ್ಪಾದಕರೇ ಅದನ್ನು ಮರಳಿ ಸಂಗ್ರಹಿಸುವಂತ ವ್ಯವಸ್ಥೆಯು ಜಾರಿಗೆ ಬರಬೇಕು. ಮತ್ತು ಅದನ್ನು ಉತ್ಪಾದಕರ ವಿಸ್ತೃತ ಜವಾಬ್ದಾರಿ ಎಂದು ಮಾಡಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಅಷ್ಟು ಮಾತ್ರವಲ್ಲದೆ ಪುನರ್ ಸಂಸ್ಕರಿಸುವ ತಂತ್ರಜ್ನಾನ ಮತ್ತು ಪ್ರಕ್ರಿಯೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು. ಏಕೆಂದರೆ ಭಾರತದಲ್ಲಿನ ಬಹುಪಾಲು ಪ್ಲಾಸ್ಟಿಕ್‌ಗಳು ಕೆಳದರ್ಜೆ ಪ್ಲಾಸ್ಟಿಕ್‌ಗಳಾಗಿ ಸಂಸ್ಕರಣೆಗೊಳ್ಳುತ್ತವೆ.

ಆದರೆ ಬಳಕೆಯಾದ ಎಲ್ಲಾ ಪ್ಲಾಸ್ಟಿಕ್‌ಗಳನ್ನು ಕೆಲವು ಬಾರಿ ಮಾತ್ರ ಪುನರ್ ಸಂಸ್ಕರಿಸಲು ಸಾಧ್ಯ. ಹೀಗಾಗಿ ಪ್ಲಾಸ್ಟಿಕ್ಕಿನ ಸಂಪೂರ್ಣ ಪುನರ್ ಬಳಕೆ ಸಾಧ್ಯವಾಗುವುದಿಲ್ಲ. ಅಲ್ಲದೆ ವ್ಯಾಪಾರ ಹಾಗೂ ಜೀವನೋಪಾಯಗಳ ಹೆಸರಿನಲ್ಲಿ ಹಾನಿಕಾರಕ ಪುನರ್ ಸಂಸ್ಕರಣಾ ಘಟಕಗಳು ಬಡಜನರ ಭೂಮಿ ಮತ್ತು ಕೈಗಳಿಗೆ ವರ್ಗಾವಣೆಯಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಕಂಪನಿಗಳು ಸ್ಥಳೀಯವಾಗಿ ಉತ್ಪನ್ನವಾಗುವ ತ್ಯಾಜ್ಯವನ್ನು ಸಂಸ್ಕರಿಸಿ ಬಳಸುವುದಕ್ಕಿಂತ, ಪ್ಲಾಸ್ಟಿಕ್ ಆಮದು ನಿಷೇಧವಿದ್ದರೂ, ಆಮದು ಮಾಡಿಕೊಳ್ಳುವಲ್ಲೇ ಹೆಚ್ಚಿನ ಆಸಕ್ತಿಯನ್ನು ತೋರುತ್ತಿವೆ.

 ಪ್ಲಾಸ್ಟಿಕ್ಕನ್ನು ರಸ್ತೆ ಮತ್ತು ಕಟ್ಟಡ ನಿರ್ಮಾಣಗಳಲ್ಲಿ ಬಸುವ ಮೂಲಕ ಅದರ ಬಳಕೆಯನ್ನು ಅಂತ್ಯಗೊಳಿಸುವ ಪರಿಹಾರಗಳಿವೆ. ಆದರೂ  ಪ್ಲಾಸ್ಟಿಕ್ಕಂತೂ ಈ ಗ್ರಹದಲ್ಲಿ ಇದ್ದೇ ಇರುತ್ತದೆ. ಪ್ಲಾಸ್ಟಿಕ್ಕಿಗೆ ಪರ್ಯಾಯವಾಗಿ ಬಳಸಬಹುದಾದ ಕಾಗದ, ಬಟ್ಟೆ, ಗ್ಲಾಸ್ ಇನ್ನಿತ್ಯಾದಿಗಳೂ ಸಹ ಭೂಮಂಡಲದಲ್ಲಿ ತನ್ನ ಉಳಿಕೆಯನ್ನು ಬಿಟ್ಟೇ ಇರುತ್ತವೆ. ಬೇಕಾಬಿmಯಾಗಿ ವಾತಾವರಣದಲ್ಲಿ ಬಿಸಾಡಿದರೆ ಸಸ್ಯಜನ್ಯ ವಸ್ತುಗಳಿಂದ ಅಥವಾ ಅಡಿಕೆ ಹಾಳೆಯಿಂದ ಮಾಡಲ್ಪಟ್ಟ ಜೈವಿಕ ತಟ್ಟೆಗಳು ಸಹ ಜೈವಿಕವಾಗಿ ಕರಗುವುದು ಕಷ್ಟ.

ಹೀಗಾಗಿ ಹೆಚ್ಚುತ್ತಿರುವ ಬಳಕೆಯಿಂದಾಗಿ ಮಾತ್ರವಲ್ಲದೆ ಅಸಮರ್ಪಕ ತ್ಯಾಜ್ಯ ನಿರ್ವಹಣೆಯ ಕಾರಣದಿಂದಾಗಿಯೂ ಸಹ ತ್ಯಾಜ್ಯ ವಸ್ತುಗಳ ಸಂಗ್ರಹ ಬೆಟ್ಟದೋಪಾದಿಯಲ್ಲಿ ಬೆಳೆಯುತ್ತಿದೆ. ಪ್ಲಾಸ್ಟಿಕ್‌ಗೆ ಬದಲಾಗಿ ಬೇರೆ ಬೇರೆ ವಸ್ತುಗಳನ್ನು ಬಳಸಬೇಕು. ಅದರ ಜೊತೆಗೆ ಮರುಬಳಕೆ ಮಾಡುವ ಧೋರಣೆಯನ್ನೂ ಹಾಗೂ ಉತ್ಪಾದಿತವಾಗುವ ತ್ಯಾಜ್ಯಗಳ ಬಗ್ಗೆ ಕಾಳಜಿ ರಹಿತ ಮನೋಭಾವವನ್ನು ಸೃಷ್ಟಿಸುವ ಬಳಸಿ ಬಿಸುಡುವ ಸಂಸ್ಕೃತಿಯೂ ಕೂಡಾ ಬದಲಾಗಬೇಕಿದೆ. ಈ ತ್ಯಾಜ್ಯಗಳು ಕಡಿಮೆಯಾಗದಿದ್ದರೆ ತಾವು ಸೃಷ್ಟಿಸುತ್ತಿರುವ ತ್ಯಾಜ್ಯದಿಂದ ತಾವೇ ಕೊನೆಗೆ ಉಸಿರುಗಟ್ಟುವ ಕಾಲ ಮನುಕುಲಕ್ಕೆ ಬಂದೊದಗಲಿದೆ.

 

Back to Top