ಪರಿಸರದ ಕರೆ
ಪರಿಸರದ ಸಂರಕ್ಷಣೆಯು ಪ್ರಜ್ನಾಪೂರ್ವಕ ಕಾರ್ಯಾಚರಣೆಗಳಿಂದ ಸಾಧ್ಯವೇ ಹೊರತು ಸಾಂಕ್ರಾಮಿಕ ಸ್ವರೂಪದ ವೀರಾವೇಷಗಳಿಂದಲ್ಲ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
೨೦೧೯ರ ಸೆಪ್ಟೆಂಬರ್ ೨೦ ರಿಂದ ಸೆಪ್ಟೆಂಬರ್ ೨೭ರ ತನಕ ನಡೆದ ಪರಿಸರ ಸಂರಕ್ಷಣಾ ಹೋರಾಟಗಳು ನಾವು ಈ ಭೂಮಿಯನ್ನು ಹಿರಿಯರಿಂದ ಪಡೆದುಕೊಂಡಿರುವುದಲ್ಲ, ಬದಲಿಗೆ ನಮ್ಮ ಮಕ್ಕಳಿಂದ ಕಡ ತೆಗೆದುಕೊಂಡಿರುವುದು ಎಂಬ ಹಳೆಯ ನಾಣ್ಣುಡಿಂiನ್ನು ನೆನಪಿಸುವಂತಿತ್ತು. ಈ ನಾಣ್ಣುಡಿಯು ಈ ಕಾಲದ ಯುವಜನಾಂಗವು ಅತ್ಯಂತ ತುರ್ತಾಗಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿರುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಮತ್ತು ಅದರ ಜೊತೆಜೊತೆಗೆ ಒಂದು ದೇಶದೊಳಗೆ ಮಾತ್ರವಲ್ಲದೆ ದೇಶದೇಶಗಳಾಚೆಯೂ ಎಲ್ಲಾ ಪೀಳಿಗೆಯವರೂ ಪರಿಸರ ಸಂರಕ್ಷಣೆಗಾಗಿ ಮುಂದಾಗಬೇಕಾದ ಬೃಹತ್ ಪರಿಕಲ್ಪನೆಯನ್ನೂ ಮುಂದಿರಿಸುತ್ತದೆ. ಆದರೆ ಆಯಾ ದೇಶಗಳ ಮಾಲಿನ್ಯಕೋರರು/ ಬಳಕೆದಾರರು ಒಟ್ಟಾರೆ ಹೊರಬೇಕಾದ ಐತಿಹಾಸಿಕ ಹೊಣೆಗಾರಿಕೆಗಳು ಈ ಎರಡೂ ಸಂದರ್ಭಗಳಲ್ಲಿ ಆಗಬೇಕಿದ್ದ ಸಹಕಾರಿ ಮತ್ತು ಸಾಮೂಹಿಕ ಕಾರ್ಯಾಚರಣೆಗಳ ಮೇಲೆ ಮಿತಿಯನ್ನು ಹೇರುತ್ತವೆ. ಸಾಮಾನ್ಯವಾಗಿ ಹೆಚ್ಚು ಮಾಲಿನ್ಯವನ್ನು ಉಂಟು ಮಾಡುತ್ತಿರುವವರು ಹೆಚ್ಚು ಮಾಲಿನ್ಯ ನಿವಾರಣೆಯ ಹೊರೆಯನ್ನು ಹೊರಬೇಕು ಎಂಬ ಸಾಮಾನ್ಯ ಜ್ನಾನದ ತತ್ವಕ್ಕೆ ವ್ಯತಿರಿಕ್ತವಾಗಿ ಬರಲಿರುವ ದಿನಗಳಲ್ಲಿ ಕಡಿಮೆ ಮಾಲಿನ್ಯ ಉಂಟುಮಾಡುತ್ತಿರುವವರೇ ಹೆಚ್ಚು ಹೊಣೆಗಾರಿಕೆಯನ್ನು ಹೊರಬೇಕೆಂಬ ತತ್ವವು ಜಾರಿಯಾಗುತ್ತಿರುವುದು ಕಂಡುಬರುತ್ತಿದೆ.
ಈ ಹಿನ್ನೆಲೆಯಲ್ಲಿ ಭಾರತದ ನಗರಗಳಾದ್ಯಂತ ಪರಿಸರ ಸಂರಕ್ಷಣೆಗೆಂದು ಯುವಜನತೆ ಬೀದಿಗಿಳಿದಿರುವುದು ಅತ್ಯಂತ ಆಶಾದಾಯಕವಾದ ಬೆಳವಣಿಗೆಯಾಗಿದೆ. ಆದರೆ ಈ ಪ್ರತಿರೋಧಗಳ ಆಶಯಗಳು ಪರಿಸರ ನಿರ್ವಹಣೆಯ ಸ್ವರೂಪ ಮತ್ತು ಸಾರಗಳನ್ನು ಪ್ರಭಾವಿಸುವಷ್ಟು ಸಶಕ್ತವಾಗಿವೆಯೇ ಎಂಬ ಕಾಳಜಿಗಳೂ ಸಹ ಇದರ ಜೊತೆಜೊತೆಗೆ ವ್ಯಕ್ತವಾಗುತ್ತಿವೆ. ಕಳೆದ ಹತ್ತು ವರ್ಷಗಳಿಂದ ಪರಿಸರ ಬದಲಾವಣೆಯ ತಗಾದೆಗಳಲ್ಲಿ ಪರಿಸರ ಸಂರಕ್ಷಣಾವಾದಿಗಳು ಹೆಚ್ಚುಹೆಚ್ಚಾಗಿ ಮಾನವ ಹಕ್ಕು ಕಾನೂನುಗಳ ವ್ಯಾಖ್ಯಾನವನ್ನು ಬಳಸುತ್ತಿದ್ದಾರೆ. ಆದರೆ ಆ ಬಗೆಯ ವ್ಯಾಖ್ಯಾನಗಳು ವಿವಿಧ ನೆಲೆಗಳಿಂದ ನೋಡಿದಾಗ ಎಷ್ಟರ ಮಟ್ಟಿಗೆ ನಿಜವಾದ ಗೆಲುವನ್ನು ತಂದು ಕೊಟ್ಟೀತು ಎಂಬ ವಿಷಯವನ್ನು ಸಂರಕ್ಷಣಾ ವಕೀಲರು ಹಾಗೂ ಆಸಕ್ತರು ಇನ್ನಷ್ಟು ಕೂಲಂಕಷವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ಉದಾಹರಣೆಗಾಗಿ ಸುರಕ್ಷಿತ ಪರಿಸರದ ಸಹಲಾಭಗಳು ಎಂಬ ಸಂಗತಿಯನ್ನೇ ತೆಗೆದುಕೊಳ್ಳಿ. ಭಾರತದ ಸಂದರ್ಭದಲ್ಲಿ ಈ ಧೋರಣೆಯು ಹೆಚ್ಚು ಅನ್ವಯವಾಗುವುದಿಲ್ಲ. ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳ ಬದಲಿಗೆ ಸೌರ ಅಥವಾ ಗಾಳಿ ಆಧಾರಿತ ಪುನರ್‌ನವೀಕರಣ ಮಾಡಬಲ್ಲ ಶಕ್ತಿ ಮೂಲಗಳ ಬಳಕೆಯಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ನ ಹೊರಸೂಸುವಿಕೆಯ ಪ್ರಮಾಣವು ಖಂಡಿತಾ ಕಡಿಮೆಯಾಗುತ್ತದೆ. ಆದರೆ ಅದೇ ಸಮಯದಲ್ಲಿ ಅದು ಉದ್ಯೋಗ ಸೃಷ್ಟಿಯೆಂಬ ಸಹಲಾಭಗಳನ್ನು ಒದಗಿಸುತ್ತವೆಯೇ ಎಂಬುದು ಮಾತ್ರ ಪ್ರಶ್ನಾರ್ಹವೇ. ಇಂಟಿಗ್ರೇಟೆಡ್ ರಿಸರ್ಚ್ ಅಂಡ್ ಆಕ್ಷನ್ ಫಾರ್ ಡೆವಲಪ್‌ಮೆಂಟ್ ಸಂಸ್ಥೆಯ ತಜ್ನ ವಿದ್ವಾಂಸರು ೨೦೧೬ರಲ್ಲಿ ಒಂದು ವರದಿ ನೀಡಿದ್ದಾರೆ. ಅದರ ಪ್ರಕಾರ ಕೋಲ್ ಇಂಡಿಯಾ ಸಂಸ್ಥೆಯಲ್ಲಿ ೨೦೧೪-೧೫ರ ಸಾಲಿನ ಉತ್ಪಾದನೆಯನ್ನು ಆzsರಿಸಿ ಹೇಳುವುದಾದರೆ, ಕಾರ್ಮಿಕರ ಉತ್ಪಾದಕತೆಯು ಪ್ರತಿ ಗಂಟೆಗೆ ೦.೭೫ ಟನ್ನಿನಷ್ಟಾಗುತ್ತದೆ. ಮಾತ್ರವಲ್ಲದೆ ಇದು ಒಂದು ಮೆಗಾವ್ಯಾಟ್ ಉತ್ಪಾದಕ ಸಾಮರ್ಥ್ಯದ ಪೋಟೋ ವೋಲ್ಟಾಯಿಕ್ ಸೌರ ಘಟಕದಲ್ಲಿನ ೨೦ ಕಾರ್ಮಿಕರ ನಾಲ್ಕು ತಿಂಗಳ ಉತ್ಪಾದಕತೆಗಿಂತಲೂ ಹೆಚ್ಚಾಗಿದೆ. ಅಮೆರಿಕದ ಕಲ್ಲಿದ್ದಲು ಘಟಕಗಳಲ್ಲಿ ೨೦೧೧ರಲ್ಲಿ ಪ್ರತಿ ಕಾರ್ಮಿಕರ ಪ್ರತಿ ಗಂಟೆ ಉತ್ಪಾದಕತೆ ೫.೨೨ ಟನ್ನಿನಷ್ಟು ಎಂದು ಅಂದಾಜು ಮಾಡಲಾಗಿತ್ತು. ಹಾಗಿದ್ದಲ್ಲಿ ಉದ್ಯೋಗ ಸೃಷ್ಟಿಗಾಗಿ ಪರಿಸರ ಕಾಳಜಿಗನ್ನು ಬಿಟ್ಟುಕೊಡಬಹುದೇ?
ಆದರೆ ಅಭಿವೃದ್ಧಿ ಸಾಮರ್ಥ್ಯ ದೃಷ್ಟಿಕೋನದ ವಿಶ್ಲೇಷಣೆಯಲ್ಲಿ ಉದ್ಯೋಗ ಮತ್ತು ಸ್ವಚ್ಚ ಪರಿಸರ/ ಸುರಕ್ಷಿತ ವಾತಾವರಣಗಳೆರಡೂ ಗುಣಮಟ್ಟದ ಜೀವನದ ಪ್ರೇರಕಶಕ್ತಿಗಳಾಗುತ್ತವೆ. ಆದ್ದರಿಂದ ಅವೆರಡೂ ಪರಸ್ಪರ ವಿರುದ್ಧವಾದ ಅಂಶಗಳೇನೂ ಆಗಬೇಕಿಲ್ಲ. ಆದರೆ ಮನುಕುಲವು ಸೀಮಿತವಾದ ಸಾಮರ್ಥ್ಯಗಳ ಸಂದರ್ಭವನ್ನು ಎದುರಿಸುತ್ತಿದೆ. ಆಗ ಒಳಗೊಳ್ಳುವುದಕ್ಕಿಂತ ಆದ್ಯತೆಯ ಪ್ರಶ್ನೆಗಳೂ ಹಾಗೂ ಭವಿಷ್ಯಕ್ಕಿಂತ ಸದ್ಯದ ಪ್ರಶ್ನೆಗಳೂ ಪ್ರಮುಖವಾಗಿಬಿಡುತ್ತವೆ. ಅಂಥಾ ಸಂದರ್ಭಗಳಲ್ಲಿ ಜೀವನೋಪಾಯಗಳು ಅದರೊಂದಿಗೆ ಬೆಸೆದುಕೊಂಡಿರುವ ಅಪಾಯಗಳಿಗಿಂತ ಹೆಚ್ಚಿನ ಮಹತ್ವವನ್ನು ಪಡೆದುಕೊಂಡುಬಿಡುತ್ತವೆ. ಇವತ್ತಿನ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಪರಿಸರದ ಹಕ್ಕನ್ನೂ ಒಳಗೊಂಡಂತೆ ತಮ್ಮ ಇತರ ಹಕ್ಕುಗಳನ್ನು ಪ್ರತಿಪಾದಿಸಿ ಗಳಿಸಿಕೊಳ್ಳಲು ಸಮರ್ಥರನ್ನಾಗಿಸುವ ಕಡೆಗೆ ಹೆಚ್ಚಿನ ಶ್ರಮವನ್ನು ಹಾಕಬೇಕಿದೆ.
ಪರಿಸರ ಸಂರಕ್ಷಣೆಯು ಆಯಾ ದೇಶಗಳಿಗೆ ನಿರ್ದಿಷ್ಟವಾದ ವಿದ್ಯಮಾನವಾಗಿದೆ. ಹೀಗಾಗಿ ಆಯಾ ದೇಶದ ಸ್ಥಿತಿಗತಿಗಳು ಮತ್ತು ಅವು ಎದುರಿಸಬೇಕಾದ ಜಾಗತಿಕ ಸಂದರ್ಭವನ್ನು ಪರಿಗಣಿಸದೆ ಹೇರಲ್ಪಡುವ ಜಾಗತಿಕ ಸಂರಕ್ಷಣಾ ಮಾನದಂಡಗಳಿಗೆ ಯಾವ ಮೌಲ್ಯವೂ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ನೋಡಿದಾಗ ದೇಶಾದ್ಯಂತ ನಡೆದ ಪರಿಸರ ಸಂರಕ್ಷಣಾ ಹೋರಾಟವು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ ಎಂದೇ ಹೇಳಬಹುದು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಭುತ್ವವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲವೆಂದು ಟೀಕಿಸುವ ಅತ್ಯುತ್ಸಾಹದಲ್ಲಿ ಪ್ರತಿಭಟನಾಕಾರರು ಅತ್ಯಂತ ವಿವಾದಾಸ್ಪದ ವಿಷಯವಾಗಿದ್ದ ಪರಿಸರ ನಿರ್ವಹಣೆಯ ವಿಷಯವನ್ನು ಕಡೆಗಣಿಸಿಬಿಟ್ಟರೆಂದೇ ಹೇಳಬೇಕು. ವಿಶ್ವಸಂಸ್ಥೆಯ ಪರಿಸರ ಬದಲಾವಣೆಯ ಬಗೆಗಿನ ಜಾಗತಿಕ ಒಪ್ಪಂದದ ಚೌಕಟ್ಟು ರೂಪಿಸಿದ ತತ್ವಗಳಲ್ಲಿ ಪರಿಸರ ಬದಲಾವಣೆಗೆ ಸಂಬಂಧಪಟ್ಟಂತೆ ಆಯಾ ದೇಶಗಳ ಸಮಾನ ಆದರೆ ಭಿನ್ನಭಿನ್ನ ಹೊಣೆಗಾರಿಕೆಗಳು ಹಾಗೂ ನಿರ್ದಿಷ್ಟ ಸಾಮರ್ಥ್ಯಗಳ ತತ್ವವೂ ಒಂದು. ಐತಿಹಾಸಿಕವಾಗಿ ನೋಡಿದರೆ ಜಗತ್ತಿನಲ್ಲಿ ಬೇರೆಬೇರೆ ದೇಶಗಳು ಬೇರೆಬೇರೆ ಪ್ರಮಾಣದ ಮಾಲಿನ್ಯವನ್ನು ಸೃಷ್ಟಿಸುತ್ತಿರುವುದರಿಂದ ಅದರ ನಿವಾರಣೆಯ ಹೊಣೆಗಾರಿಕೆಯನ್ನೂ ಸಹ ಭಿನ್ನಭಿನ್ನವಾಗಿಯೇ ಹೊರಬೇಕೆಂಬ ನಿಯಮವನ್ನು ಅರೆಮನಸ್ಸಿನಿಂದ ಪರಿಗಣಿಸಲಾಗುತ್ತಿದೆ. ಕಡಿಮೆ ಮಾಲಿನ್ಯ ಮಾಡುತ್ತಿರುವ ದೇಶಗಳ ಮಾಲಿನ್ಯ ಧಾರಣ ಶಕ್ತಿಯ ಸಾಮರ್ಥ್ಯದ ಅಂಕಗಳನ್ನು ಹೆಚ್ಚು ಮಾಲಿನ್ಯ ಮಾಡುತ್ತಿರುವ ದೇಶಗಳಿಗೆ ಹಸ್ತಾಂತರ ಮಾಡಲಾಗುತ್ತಿದೆ. ಆದ್ದರಿಂದ ಆಯಾ ದೇಶಗಳ ಉದ್ದೇಶಿತ ರಾಷ್ಟ್ರೀಯ ಕೊಡುಗೆಗಳನ್ನು ಇನ್ನಷ್ಟು ಪರಿಶೀಲನೆಗೆ ಒಳಪಡಿಸಬೇಕಿದೆ.
ಉದಾಹರಣೆಗೆ ೧೯೯೧-೨೦೧೨ರ ನಡುವೆ ಜಾಗತಿಕ ಹಸಿರು ಮನೆ ಅನಿಲ ಸಂಗ್ರಹಕ್ಕೆ ಭಾರತದ ಕೊಡುಗೆ ಏನೂ ಇಲ್ಲ. ಆದರೆ ಇದಕ್ಕೆ ಹೋಲಿಸಿದಲ್ಲಿ ಆಯಾ ರಾಷ್ಟ್ರಗಳ ನಿರ್ದಿಷ್ಟ ಹಸಿರು ಮನೆ ಅನಿಲದ ಕೊಡುಗೆಯನ್ನು ಇಳಿಸಬೇಕೆಂಬ ನೀತಿಯನ್ವಯ ಭಾರತದ ಕೊಡುಗೆಯನ್ನು ಸಹ ೨೦೧೩೦ರ ವೇಳೆಗೆ ಶೇ.೩೦-೩೫ರಷ್ಟು ಇಳಿಸಲಾಗುವುದೆಂದು ಘೋಷಿಸಲಾಗಿದೆ. ಆದರೆ ಇದು ಮಹತ್ವಾಕಾಂಕಿ ಭರವಸೆಯಾಗಿದೆ. ಭಾರತದ ರಾಷ್ಟ್ರೀಯ ಆದಾಯವು ಇಳಿಕೆಯಾಗುತ್ತಿರುವ ಈ ಹೊತ್ತಿನಲ್ಲಿ ಪರಿಸರ ಹೋರಾಟಗಾರರು ದೇಶದ ಮೇಲೆ ನಿಗದಿ ಮಾಡಲಾಗಿರುವ ಮಾಲಿನ್ಯ ಪ್ರಮಾಣದ ಅತಾರ್ಕಿಕತೆಯನ್ನೂ ಮತ್ತು ಪ್ಯಾರಿಸ್ ಒಪ್ಪಂದದ ನಂತರ ಇಂಥಾ ಹೊಣೆಗಾರಿಕೆಗಳನ್ನು ಪೂರೈಸಲು ಒದಗಿಸಬೇಕಿದ್ದ ಹಣಕಾಸು ಮತ್ತು ತಂತ್ರಜ್ನಾನಗಳ ಪೂರೈಕೆಯಲ್ಲಿ ಕಂಡುಬರುತ್ತಿರುವ ನಿರ್ಲಕ್ಷ್ಯವನ್ನೂ ಸಹ ಪ್ರಶ್ನಿಸಬಹುದಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಾಲಿನ್ಯ ಕಡಿತದ ಪ್ರಮಾಣಗಳಲ್ಲಿ ಅನುಸರಿಸಲಾಗಿರುವ ತಾರತಮ್ಯ ತತ್ವಗಳನ್ನು ಪ್ರಶ್ನಿಸಲು ಈ ಅವಕಾಶವನ್ನು ಬಳಸಿಕೊಳ್ಳಬಹುದಿತ್ತು.
ಯುವಜನತೆಯಲ್ಲಿ ಪರಿಸರ ಪ್ರಜ್ನೆಯನ್ನು ಮೂಡಿಸುವುದು ಅತ್ಯಂತ ಜರೂರಾಗಿ ಮಾಡಬೇಕಿರುವ ಕೆಲಸವೇ. ಆದರೆ ಪರಿಸರವೆಂಬುದು ಹೊರಗಿರಿಸಲಾಗದ ಸಂಪನ್ಮೂಲವಾಗಿದ್ದು ಅದರ ಸಂರಕ್ಷಣೆಯನ್ನು ಮಾಡುವಾಗ ಅದರ ಬಳಕೆಯ ವಿಧಾನಗಳ ಬಗ್ಗೆಯೂ ಸೂಕ್ಷ್ಮವಾದ ತಿಳವಳಿಕೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಜಾಗತಿಕ ಬಾಂಧವ್ಯಗಳ ಹೆಸರಿನಲ್ಲಿ ದಿಡೀರ್ ಪ್ರತಿಭಟನೆಗನ್ನು ಮಾಡುವುದು ರೋಮಾಂಚಕತೆಯ ಉತ್ಕರ್ಷವನ್ನು ಒದಗಿಸಬಹುದಾದರೂ ಪರಿಸರ ನಿರ್ವಹಣೆಯಲ್ಲಿರುವ ಆಳವಾದ ಸಮಸ್ಯೆಯನ್ನಂತೂ ಬಗೆಹರಿಸುವುದಿಲ್ಲ.