ISSN (Print) - 0012-9976 | ISSN (Online) - 2349-8846

ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ಆರ್ಸಿ)ಯ ದ್ವಂದ್ವಗಳು

ನಾಗರಿಕತ್ವವು ಮಾನವೀಯತೆಯ ಕಾಳಜಿಗಳನ್ನು ಬಿಟ್ಟುಕೂಡಾ ಅಸ್ಥಿತ್ವದಲ್ಲಿರುತ್ತದೆ ಎಂದು ಭಾವಿಸಲಾಗದು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಅಸ್ಸಾಮಿನ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್- ರಾಷ್ಟ್ರೀಯ ನಾಗರಿಕರ ದಸ್ತಾವೇಜು (ಎನ್‌ಆರ್‌ಸಿ) ಪ್ರಕಟಣೆಯಾದ ನಂತರದಲ್ಲಿ ಅದರ ಫಲಿತಾಂಶದ ಬಗ್ಗೆ ವಿವಿಧ ಸಾಮಾಜಿಕ ಶಕ್ತಿಗಳು ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರೊಂದಿಗೆ  ಆ ರಾಜ್ಯದ ರಾಜಕೀಯದಲ್ಲೂ ಬಿಸಿಯೇರುತ್ತಿದೆ. ಆಳುವ ಪಕ್ಷವನ್ನೂ ಒಳಗೊಂಡಂತೆ ಎನ್‌ಆರ್‌ಸಿಯ ಎಲ್ಲಾ ಪ್ರತಿಪಾದಕರಲ್ಲೂ  ಎನ್‌ಆರ್‌ಸಿಯ ಫಲಿತಾಂಶಗಳು ನಿರಾಶೆಯನ್ನು ತಂದಿದೆ. ಏಕೆಂದರೆ ಎನ್‌ಆರ್‌ಸಿಯಿಂದ ಹೊರಗುಳಿಸಲ್ಪಟ್ಟವರ ಸಂಖ್ಯೆ ಎನ್‌ಆರ್‌ಸಿಯ ಪ್ರತಿಪಾದಕರು ಪ್ರತಿಪಾದಿಸುತ್ತಿದ್ದ ಸಂಖ್ಯೆಗಿಂತ ತುಂಬಾ ಕಡಿಮೆಯಾಗಿದೆ ಮತ್ತು ಆ ಬಗ್ಗೆ ಅವರು ಬಳಸುತ್ತಾಬಂದಿದ್ದ ಪರಿಭಾಷೆಗಳಿಗೂ ವ್ಯತಿರಿಕ್ತವಾಗಿದೆ. ಮೇಲಾಗಿ ಎನ್‌ಆರ್‌ಸಿಯಿಂದ ಹೊರಗುಳಿಸಲ್ಪಟ್ಟವರಲ್ಲಿ ಭಾರತೀಯ ಜನತಾ ಪಕ್ಷದ ಸಾಮಾಜಿಕ ಮತ್ತು ಚುನಾವಣ ಬೆಂಬಲದ ನೆಲೆಯಾಗಿರುವ ಗುಂಪುಗಳು ಮತ್ತು ವ್ಯಕ್ತಿಗಳೂ ಹೆಚ್ಚಿನ ಸಂಖ್ಯೆಯಲ್ಲಿರುವುದೂ ಸಹ ಆ ಪಕ್ಷದಲ್ಲಿ ಹೆಚ್ಚಿನ ನಿರಾಶೆಯನ್ನುಂಟು ಮಾಡಿದೆ. ಈ ಇಡೀ ಎನ್‌ಆರ್‌ಸಿ ಪ್ರಕ್ರಿಯೆಯಿಂದ (ಜನರನ್ನು ಹೊರಗಿಡುವುದರಲ್ಲಿ ಸಂಭವಿಸಿರುವ ಅನ್ಯಾಯ ಮತ್ತು ಅವಾಸ್ತವಿಕತೆಗಳನ್ನು ಒಂದು ಕ್ಷಣ ಬದಿಗಿಟ್ಟು ನೋಡಿದರೂ,) ಹೊರಗುಳಿಸಲ್ಪಟ್ಟವರು ಎದುರಿಸಬೇಕಾದ ಸಂಕಷ್ಟಗಳು ಮತ್ತು ತೆರಬೇಕಾದ ಬೆಲೆಗಳನ್ನೂ ಪರಿಗಣಿಸಿದಾಗ ಅಂತಿಮವಾಗಿ ಹೊರಗುಳಿಸಲ್ಪಟ್ಟವರ ಸಂಖ್ಯೆ ಕಡಿಮೆಯಾಗಿರುವುದು ಸ್ವಲ್ಪ ಸಮಾಧಾನವನ್ನೇ ತರಬೇಕು. ಇದು ಈಗಾಗಲೇ ಸಮಾಜದ ಅಂಚಿಗೆ ತಳ್ಳಲ್ಪಟ್ಟ ಲಕ್ಶಾಂತರ ಜನರನ್ನು ವಿದೇಶೀಯರ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳಿಗೆ ಅಲೆಯುವ ಸಂಕಷ್ಟಗಳಿಗೆ, ಸರಿಯಾದ ದಸ್ತಾವೇಜಿಲ್ಲದವರು ಅತ್ಯಂತ ಭಯಾನಕ ಹಾಗೂ ಅಮಾನವೀಯ ಪರಿಸ್ಥಿತಿಯಲ್ಲಿರುವ ನಿರ್ಬಂಧ ಶಿಬಿರಗಳಿಗೆ ತಳ್ಳಲ್ಪಡುವ, ಮತ್ತು ಅವರನ್ನು ಎರಡನೇ ದರ್ಜೆ ನಾಗರಿಕತ್ವಕ್ಕೆ ಅಥವಾ ಪ್ರಭುತ್ವಹೀನಸ್ಥಿತಿಗೆ ದೂಡಿ ಅತ್ಯಂತ ತೀವ್ರತರವಾದ ಸಂಕಷ್ಟಗಳಿಗೆ ಗುರಿ ಮಾಡಿದೆ. ಆದರೆ ಆಳುವ ಸರ್ಕಾರದ ಸಿನಿಕ ಲೆಕ್ಕಾಚಾರಗಳಿಗೆ ಮತ್ತು ಅಜೆಂಡಾಗಳಿಗೆ ಜನರ ಈ ಸಂಕಷ್ಟಗಳು ಕಾಣುವುದಿಲ್ಲ. ಏಕೆಂದರೆ ಜನರನ್ನು ವಿಭಜಿಸಿ ಆಳುವ ಮತ್ತು ಅಂಚಿಗೆ ದೂಡುವ ರಾಜಕೀಯವು ಏರುಗತಿಯಲ್ಲಿರುವ ಈ ನಿರ್ದಿಷ್ಟ ಸಂದರ್ಭದಲ್ಲಿ ಎನ್‌ಆರ್‌ಸಿಯ ಅಂತರ್ಗತ ತರ್ಕವೇ ಯಾವುದೇ ಮಾನವೀಯ ಸಂವೇದನೆಗಳನ್ನು ಇಲ್ಲದಂತೆ ಮಾಡುತ್ತದೆ . ಹೀಗಾಗಿಯೇ ಈ ಪ್ರಕ್ರಿಯೆಯು ರಾಜಕೀಯ ಮತ್ತು ಸಮಾಜದ ಮೇಲೆ ಬೀರುವ ಪರಿಣಾಮವೂ ಕೂಡಾ ಕೇವಲ ಅಸ್ಸಾಮಿಗೆ ಮಾತ್ರ ಸೀಮಿತವಾಗಿರುವುದಿಲ್ಲ.

ಹೊರಗಿನವರು ಮತ್ತು ಸ್ಥಳೀಯರೆಂಬ ವಿರುದ್ಧ ದ್ವಿತರ್ಕಗಳನ್ನು, ಅಂತಿಮ ದಿನಾಂಕಗಳನ್ನು, ಭೂಮಿಯ ಮೇಲೆ ಪರಂಪರಾನುಗತ ಸ್ವಾಧೀನತೆಯನ್ನು ಸಾಬೀತು ಮಾಡುವ ದಾಖಲೆಗಳನ್ನು ಆಧರಿಸಿರುವ ಈ ಎನ್‌ಆರ್‌ಸಿ ಯೆಂಬ ಕಸರತ್ತು ಈಗಾಗಲೇ ಇರುವ ಸಾಮಾಜಿಕ ವೈಷಮ್ಯಗಳನ್ನು ಮತ್ತಷ್ಟು ತೀವ್ರಗೊಳಿಸುತ್ತಿದೆ. ಈ ಪ್ರಕ್ರಿಯೆಯು ವರ್ಷಗಳಿಂದ ಮುಂದುವರೆಯುತ್ತಲೇ ಬಂದಿರುವ ಸಂಘರ್ಷಕ್ಕೆ ಒಂದು ಅಂತಿಮ ಪರದೆಯನ್ನು ಎಳೆದು ಪರಸ್ಪರರ ಬಗ್ಗೆ ಇದ್ದ ಅನುಮಾನದ ವಾತಾವರಣವನ್ನು ತಿಳಿಗೊಳಿಸುವ ಉದ್ದೇಶವನ್ನು ಹೊಂದಿದ್ದರೂ,  ಪರಿಣಾಮವು ಮಾತ್ರ ಅದಕ್ಕೆ ವ್ಯತಿರಿಕ್ತವಾಗಿಯೇ ಸಂಭವಿಸಲಿದೆ. ಏಕೆಂದರೆ ವಾತಾವರಣದಲ್ಲಿ ಸಾಮರಸ್ಯವು ಮೂಡಬೇಕೆಂದರೆ ಸಮುದಾಯಗಳು ಮತ್ತು ಸಾಮಾಜಿಕ ಗುಂಪುಗಳ ನಡುವೆ ರಾಜಿ ಹಾಗೂ ಮರುಸಂಧಾನದ ಮಾತುಕತೆಗಳು ನಡೆದು, ಗತದ ಹೊರೆಯ ಬಗ್ಗೆ ಒಂದು ಸ್ಪಷ್ಟ ಗ್ರಹಿಕೆಯೊಂದಿಗೆ ಪರಸ್ಪರ ಸಮಾನವಾದ ಭವಿಷ್ಯವನ್ನು ರೂಪಿಸಿಕೊಳ್ಳಲು ವರ್ತಮಾನದ ಬಗ್ಗೆ ಸರ್ವಸಮ್ಮತಿಯೊಂದು ರೂಪುಗೊಳ್ಳಬೇಕು. ಆದರೆ ಇದು ಒಂದು ಸಭ್ಯ ಸಮಾಜದ ಬಗ್ಗೆ ಒಂದು ಸಮಗ್ರ ಹಾಗೂ ಲೌಕಿಕ ದೃಷ್ಟಿಕೋನವುಳ್ಳ, ನಿರಂತರ ಹಾಗೂ ತ್ರಾಸದಾಯಕ ಪ್ರಯತ್ನಗಳಿಂದ ಮಾತ್ರ ಸಂಭವಿಸಲು ಸಾಧ್ಯ. ಆದರೆ ಆಳುವ ಪಕ್ಷದ ರಾಜಕೀಯ ಅಜೆಂಡಾಗಳಲ್ಲಿ ಇಂಥಾ ಯಾವುದೇ ದೃಷ್ಟಿ ಇಲ್ಲದಿರುವುದರಿಂದ ಮತ್ತು ಈ ಇಡೀ ಕಸರತ್ತನ್ನು ತನ್ನ ಚುನಾವಣಾ ಯಶಸ್ಸಿಗೆ ಅಡಿಪಾಯವಾಗಿ ಬಳಸಿಕೊಳ್ಳಲು ಮಾಡುತ್ತಿರುವ ನಗ್ನ ಪ್ರಯತ್ನಗಳನ್ನು ನೋಡಿದರೆ ಈ ವಿಷಯದಲ್ಲಿ ಒಂದು ಮರುಸಂಧಾನ ಸಾಧ್ಯ ಮತ್ತು ಅಗತ್ಯ ಎಂಬ ಭರವಸೆಗಳನ್ನು ಇಟ್ಟುಕೊಂಡಿರುವ ಅಸ್ಸಾಮಿನ ಕೆಲವು ಪ್ರಗತಿಪರರ ನಿರೀಕ್ಷೆಗಳು ಫಲಿಸುವುದಿಲ್ಲವೆಂದೇ ಕಾಣುತ್ತದೆ. ಎನ್‌ಆರ್‌ಸಿಯ ಸಂದರ್ಭದಲ್ಲಿ ಆ ನಾಯಕರು  ನುಸುಳುಕೋರರು, ಗೆದ್ದಲುಹುಳುಗಳು ಮತ್ತು ನಿರ್ದಿಷ್ಟ ಕೋಮಿಗೆ ಸೇರಿದ ಬಹುಪಾಲು ವ್ಯಕ್ತಿಗಳನ್ನು ಅಕ್ರಮವಾಗಿ ಎನ್‌ಆರ್‌ಸಿಯಲ್ಲಿ ಸೇರಿಸಲಾಗಿದೆಯೆಂಬ ಹೇಳಿಕೆಗಳನ್ನೇ ಪದೇಪದೇ ನೀಡುತ್ತಿದ್ದಾರೆ. ಇದು ಅಸ್ಥಿತ್ವದಲ್ಲಿರುವ ಸಾಮಾಜಿಕ ವಿಭಜನೆಯನ್ನು ಉಳಿಸಿಕೊಂಡು ಬೆಳೆಸುವ ಪ್ರಯತ್ನಗಳೇ ಆಗಿವೆ ಎಂಬುದು ಸುಸ್ಪಷ್ಟ. ಬೇರೊಬ್ಬರ ಭಯವನ್ನು ಬಿತ್ತುವ ರಾಜಕೀಂiಕ್ಕೆ ಮರುಸಂಧಾನಗಳು ಮತ್ತು ವಿವಾದಗಳ ಮುಕ್ತಾಯಗಳು ಅಪಥ್ಯವಾಗಿರುತ್ತದೆ.  

ಈ ಪ್ರಕ್ರಿಯೆಯಲ್ಲಿ ಅನುಸರಿಸಿದ ತಾರತಮ್ಯದಿಂದ ಕೂಡಿದ ಪ್ರಕ್ರಿಯೆಗಳು, ಮಾನದಂಡಗಳು ಮತ್ತು ಶರತ್ತುಗಳು ಸಹ ಎನ್‌ಆರ್ ಸಿಯಿಂದ ಹೊರಗಿಡುವ ಹಿಂದಿನ ತರ್ಕಕ್ಕೆ ಕೊಡುಗೆಯನ್ನು ನೀಡಿದೆ. ವಿವಿಧ ಸಾಮಾಜಿಕ ಗುಂಪುಗಳಿಗೆ ವಿವಿಧ ರೀತಿಯ ದಸ್ತಾವೇಜುಗಳ ಅಗತ್ಯವನ್ನು ಹೇರಿದ ಈ ಪ್ರಕ್ರಿಯೆಯು ಅಂತರ್ಗತವಾಗಿಯೇ ಪೂರ್ವಗ್ರಹಗಳನ್ನು ಹೊಂದಿತ್ತು ಮತ್ತು ಪಾರಂಪರಿಕ ದಾಖಲೆಗಳನ್ನು ಒದಗಿಸಬೇಕೆಂಬ ಶರತ್ತನ್ನು,  ಹುಟ್ಟಿನಿಂದಲೇ ನಾಗರಿಕತ್ವವು ದೊರಕಬೇಕಾದ ನಿಯಮಕ್ಕೆ ವಿರುದ್ಧವಾಗಿಯೇ ಈ ಪ್ರಕ್ರಿಯೆಯಲ್ಲಿ ಅನ್ವಯಿಸಲಾಗಿದೆ. ಇಂಥಾ ಅತಿರೇಕಗಳು ಹೊರದೂಡುವಿಕೆಯನ್ನು ಸಾಂಸ್ಥೀಕರಿಸಿಬಿಡುವ ಅಪಾಯವನ್ನು ಹೊಂದಿದೆ. ಮತ್ತು ಆಳುವ ಸರ್ಕಾರವು ಎನ್‌ಆರ್‌ಸಿಯನ್ನು ಒಂದು ಆಯುಧವನ್ನಾಗಿ ಬಳಸುತ್ತಿರುವ ಹಿಂದಿನ ಉದ್ದೇಶವೂ ಅದೇ ಆಗಿರುವಂತಿದೆ. ಆಳುವ ಸರ್ಕಾರವು ಎನ್‌ಆರ್‌ಸಿ ಪ್ರಕ್ರಿಯೆಯನ್ನು ಇತರ ರಾಜ್ಯಗಳಲ್ಲೂ ಮತ್ತು ದೇಶಾದ್ಯಂತ ಅನ್ವಯಿಸುವುದಾಗಿ ಮಾಡುತ್ತಿರುವ ಘೋಷಣೆಯಲ್ಲೂ ಆ ಉದ್ದೇಶವು ಸ್ಪಷ್ಟವಾಗಿ ವ್ಯಕ್ತಗೊಳ್ಳುತ್ತಿದೆ.  ಹಾಗೆ ನೋಡಿದಲ್ಲಿ ನೈತಿಕವಾಗಿ ಎಷ್ಟೇ ಸಮಸ್ಯಾತ್ಮವಾಗಿದ್ದರೂ ಅಸ್ಸಾಮಿನ ನಿರ್ದಿಷ್ಯ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡಾಗ ಆ ರಾಜ್ಯದಲ್ಲಿ ಇಂಥಾ ಒಂದು ಕಸರತ್ತು ಅಗತ್ಯವಿತ್ತೆಂದು ತಾರ್ಕಿಕವಾಗಿ ಒಪ್ಪಿಕೊಳ್ಳಬಹುದು. ಆದರೆ ಅದೇ ರೀತಿಯ ಕಸರತ್ತನ್ನು ದೆಹಲಿ, ತೆಲಂಗಾಣ ಅಥವಾ ಮಹಾರಾಷ್ಟಗಳಲ್ಲೂ ನಡೆಸುವುದಕ್ಕೆ ಯಾವ ತರ್ಕವಿದೆ? ದೇಶಾದ್ಯಂತ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಮಾಡಿಕೊಂಡು ಅದರ ಸುತ್ತಾ ಉದ್ದೇಶಪೂರ್ವಕವಾಗಿ ಅನುಮಾನದ ಕಾರ್ಮೋಡಗಳನ್ನು ಸೃಷ್ಟಿಸುವ ಸಿನಿಕ ಉದ್ದೇಶದ ಹೊರತು ಮತ್ತೇನೂ ಇದರ ಹಿಂದೆ ಇರಲು ಸಾಧ್ಯವಿಲ್ಲ. ಈಗಾಗಲೇ ದೇಶಾದ್ಯಂತ ಎನ್‌ಆರ್‌ಸಿಯನ್ನು ಮತ್ತು ನಿರ್ಬಂಧ ಶಿಬಿರಗಳನ್ನು ನಿರ್ಮಿಸಲಾಗುತ್ತದೆಂಬ ಅನುಮಾನಗಳು ವ್ಯಾಪಕವಾಗಿ ಹಬ್ಬಿಕೊಂಡು ಭೀತಿ ಮತ್ತು ಅಭದ್ರತೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ವಾಸ್ತವದಲ್ಲಿ ಎರಡನೇ ದರ್ಜೆ ನಾಗರಿಕರಾಗಿರುವ ಜನರಲ್ಲಿ ಕಾನೂನಾತ್ಮಕವಾಗಿಯೂ ತಮ್ಮನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲಾಗುತ್ತದೆಂಬ ಅನುಮಾನಗಳನ್ನು ಸಂವೇದನಾಶಿಲ ಭರವಸೆಗಳ ಮೂಲಕ ನಿವಾರಿಸುವ ಅಗತ್ಯವಿದೆ. ಆಳುವ ವರ್ಗವು ಇದರ ಮೂಲಕ ಒಂದು ನಿರ್ದಿಷ್ಟ ಸಮುದಾಯವನ್ನು ತನ್ನ ಕೋಮುವಾದಿ ದಾಳಿಗೆ ಗುರಿಮಾಡಿಕೊಳ್ಳುವ ಉದ್ದೇಶಗಳಿಗೆ ಪೂರಕವಾಗಿ ಇದನ್ನು ಬಳಸಿಕೊಂಡರೂ, ಇಂಥಾ ಆಗ್ರಹಗಳ ತರ್ಕಗಳು ಇತರ ಆಯಾಮಗಳಿಗೂ ಹರಡಿಕೊಂಡು ಭಾರತದಂಥ ವೈವಿಧ್ಯಮಯ ಮತ್ತು ಅಸಮಾನ ದೇಶದಲ್ಲಿ ಶಾಶ್ವತ ತಳಮಳವನ್ನೇ ಹುಟ್ಟುಹಾಕುತ್ತದೆ.

ಅತ್ಯಂತ ಮೂಲಭೂತವಾದ ವಿಷಯವೇನೆಂದರೆ ಒಂದು ದೇಶದ ವಿಶಾಲ ಜನಸಮುದಾಯದ ಜೀವನ ಮತ್ತು ಜೀವನೋಪಾಯಗಳ ಮೇಲೆ ನೇರ ಪರಿಣಾಮವನ್ನು ಬೀರುವಂಥ ನಾಗರಿಕತ್ವದ ವಿಷಯವನ್ನು ನಿರ್ವಹಿಸುವಾಗ ಸಾಂವಿಧಾನಿಕತೆಗಿಂತ ಹೆಚ್ಚು ಪಾರಂಪರಿಕ ಗುರುತುಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಲು ಸಾಧ್ಯವೇ? ಹಾಗೆಯೇ ಸಾಂವಿಧಾನಿಕತೆಯ ಪ್ರಕ್ರಿಯೆಗಳಿಗೆ ಸಾಂವಿಧಾನಿಕತೆಯ ವಿಶ್ವಾತ್ಮಕ  ತಿರುಳಾಗಿರುವ ಮಾನವೀಯvಗಿಂತ ಹೆಚ್ಚಿನ ಮಹತ್ವವನ್ನು ಕೊಡಲು ಸಾಧ್ಯವೇ? ಮಾನವ ನಾಗರಿಕೆತೆಯಲ್ಲಿ ವಲಸೆಯೆಂಬುದು ಐತಿಹಾಸಿಕ ವಾಸ್ತವವೆಂಬುದನ್ನು ಮತ್ತು ಇಂದಿನ ಕಾಲಘಟ್ಟದಲ್ಲಿ ಹಲವಾರು ಕಾರಣಗಳಿಂದಾಗಿ ವಲಸೆಯು ಎಷ್ಟೋ ಪಟ್ಟು ಹೆಚ್ಚಿದೆಯೆಂಬುದನ್ನೂ ಗಮನಿಸಿದಾಗ, ನಾಗರಿಕತ್ವದ ಪರಿಕಲ್ಪನೆಯು ಪ್ರಭುತ್ವ ಕೇಂದ್ರಿತವಾಗುವುದಕ್ಕಿಂತ ಮಾನವ ಕೇಂದ್ರಿತವಾಗಬೇಕಾದ ಅಗತ್ಯವಿದೆ. ನಾಗರಿಕತೆಯನ್ನು ನಿರ್ಧರಿಸಲು ಪಾರಂಪರಿಕವಾದ ಗುರುತಗಳ ಅಗತ್ಯವನ್ನು ಮುಂದುಮಾಡುತ್ತಾ ಒಂದು ಜನವರ್ಗಕ್ಕೆ ಹಕ್ಕುಗಳನ್ನು ನಿರಾಕರಿಸುವ ಮೂಲಕ ಭಾರತವು ಒಂದೋ ಜನಾಂಗೀಯ ಪ್ರಜಾತಂತ್ರವಾಗಲಿದೆ ಅಥವಾ ಧರ್ಮಾಧಾರಿತ ಪ್ರಭುತ್ವವಾಗಿಬಿಡಲಿದೆ. ಭಾರತದ ಸಂವಿಧಾನದ  ಗಣತಾಂತ್ರಿಕ ಆದರ್ಶಗಳಿಗೆ ತಕ್ಕಂತಿರುವ ನಾಗರಿಕ ಗುರುತುಗಳನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ. 

 

Back to Top