ISSN (Print) - 0012-9976 | ISSN (Online) - 2349-8846

ಖಾಸಗೀಕರಣದ ಅಪಾಯ ಎದುರಿಸುತ್ತಿರುವ ಬೃಹತ್ ಮುಂಬೈ ನಗರ ಸಾರಿಗೆ ಸಂಸ್ಥೆ(ಬಿಇಎಸ್ಟಿ)

ಮುಂಬೈನಲ್ಲಿ ನಡೆದ ಬಿಇಎಸ್‌ಟಿ (ಬೆಸ್ಟ್) ನೌಕರರ ಬಸ್ ಮುಷ್ಕರ ಮತ್ತು ಅದಕ್ಕೆ ಕಾರಣವಾಗಿರುವ ಸಂಗತಿಗಳು ಭಾರತದ ಸಾರ್ವಜನಿಕ ನಗರ ಸಾರಿಗೆ ವ್ಯವಸ್ಥೆಯಲ್ಲಿರುವ ಲೋಪಗಳಿಗೆ ಹಿಡಿದ ಕನ್ನಡಿಯಾಗಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ತನ್ನ ಐತಿಹಾಸಿಕ ಅಸ್ಮಿತೆಯ ಭಾಗವೇ ಆಗಿದ್ದ ಬೃಹತ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬಿಇಎಸ್‌ಟಿ- ಬೆಸ್ಟ್- ಬೃಹತ್ ಮುಂಬೈ ನಗರ ಸಾರಿಗೆ ಸಂಸ್ಥೆ)ನ ಸೇವೆಯನ್ನು ಮುಂಬೈ ನಗರವು ೨೦೧೯ರ ಜನವರಿ ೮ ರಿಂದ ೧೭ರವರೆಗೆ- ಒಂಭತ್ತು ದಿನಗಳ ಕಾಲ ಕಳೆದುಕೊಂಡಿತ್ತು. ಮುಂಬೈ ನಗರದ ಲಕ್ಷಾಂತರ ಜನತೆಯ ದೈನಂದಿನ ಓಡಾಟದ ಬೆನ್ನೆಲುಬಾಗಿರುವ ಈ ಬಸ್ ಸೇವೆಯು ಇಲ್ಲವಾಗಿದ್ದರಿಂದ ಮುಂಬೈನ ನಾಗರಿಕರು ಅಪರವಾದ ಪಡಿಪಾಟಲುಗಳಿಗೆ ಗುರಿಯಾಗಿದ್ದು ಮಾತ್ರವಲ್ಲದೆ ಆತಂಕಕ್ಕೂ ಒಳಗಾದರು. ಬೆಸ್ಟ್ ಸಾರಿಗೆಯನ್ನು ಬಿಟ್ಟರೆ ಇನ್ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸೌಕರ್ಯವಿಲ್ಲದ ಪ್ರದೇಶಗಳ ಜನರಂತೂ ಎಲ್ಲರಿಗಿಂತ ಹೆಚ್ಚಿನ ತೊಂದರೆಗೊಳಗಾದರು. ಅದರಲ್ಲೂ ವಿದ್ಯಾರ್ಥಿಗಳು ಪರೀಕ್ಷೆಗಳಿಗೂ ಹಾಜರಾಗಲು ಸಾಧ್ಯವಾಗಲಿಲ್ಲ. ಅದೇನೇ ಇದ್ದರೂ ಬೆಸ್ಟ್ ಸಂಸ್ಥೆಯ ನೌಕರರೂ ಹೂಡಿದ ಮುಷ್ಕರದಲ್ಲಿ ಎರಡು ಸಂಗತಿಗಳು ಎದ್ದುಕಾಣುತ್ತವೆ. ಮೊದಲನೆಯದಾಗಿ ಇತ್ತೀಚಿನ ದಿನಗಳಲ್ಲೇ ಇದು ಸುದೀರ್ಘಾವಧಿಯ ಮುಷ್ಕರವಾಗಿದ್ದರೂ ಸಹ ಬೆಸ್ಟ್ ನೌಕರರ ಬಗೆಗೆ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಅನುಕಂಪ ಕಡಿಮೆಯಾಗಲಿಲ್ಲ. ಶಿವಸೇನಾ ಪಾಯೋಜಿತ ನೌಕರ ಸಂಘವು ಎಷ್ಟೇ ವಿಭಜನಕಾರಿ ತಂತ್ರವನ್ನು ಪ್ರಯೋಗಿಸಿದರೂ ಅಲುಗಾಡದ ಕಾರ್ಮಿಕರು ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಧೃಢವಾಗಿದ್ದುಕೊಂಡು ಮುಷ್ಕರವನ್ನು ಮುಂದುವರೆಸಿದರು. ಕಾರ್ಮಿಕರ ಬೇಡಿಕೆಗಳು ನ್ಯಾಯಬದ್ಧವಾಗಿದ್ದದ್ದೂ ಮತ್ತು  ಮುಷ್ಕರವೂ ಒಟ್ಟಾರೆಯಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಹಿತಾಸಕ್ತಿಗಳ ಪರವಾಗಿದ್ದದ್ದೂ ಸಹ ಸಾರ್ವಜನಿಕರ ಅನುಕಂಪ ಮುಷ್ಕರದ ಪರವಾಗಿರಲು ಕಾರಣವಾಗಿತ್ತು. ಎರಡನೆಯದಾಗಿ, ಮುಂಬೈ ಹೈಕೊರ್ಟಿನ ಮಧ್ಯಪ್ರವೇಶದ ನಂತರ ಮುಷ್ಕರವು ನಿಂತು ಮತ್ತೆ ಬಸ್‌ಗಳ ಓಡಾಟ ಪ್ರಾರಂಭವಾಗಿದ್ದರೂ ಬೆಸ್ಟ್ ಸಂಸ್ಥೆಯನ್ನು ಖಾಸಗಿಯವರಿಗೆ ವಹಿಸುತ್ತಾರೆ ಅಥವಾ ಉದ್ದೇಶಪೂರ್ವಕವಾಗಿ ಬೆಸ್ಟ್ ಸಾರಿಗೆಯನ್ನು ನಿರ್ಲಕ್ಷ್ಯ ಮಾಡುತ್ತ ಇತರ ಖಾಸಗಿ ಸಾರಿಗೆ ವ್ಯವಸ್ಥೆಗೆ ಲಾಭವಾಗುವಂತೆ ಮಾಡಲಾಗುತ್ತದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಈ ಎರಡರಲ್ಲಿ ಯಾವುದು ನಿಜವಾದರೂ ಸಾರ್ವಜನಿಕ ಸಾರಿಗೆಯ ಭವಿಷ್ಯಕ್ಕಾಗಲೀ ಅಥವಾ ಮುಂಬೈ ನಗರದ ವಾಸಿಗಳಿಗಾಗಲೀ ಒಳಿತು ಮಾಡುವುದಿಲ್ಲ.

ಬೆಸ್ಟ್ ಸಂಸ್ಥೆಯ ಬಸ್‌ಗಳು ಮುಂಬೈ ನಗರದೊಳಗೆ ಮಾತ್ರವಲ್ಲದೆ ಮುಂಬೈ ಹೊರವಲಯದ ಮೀರ- ಬಯಂದರ್, ನವಿ ಮುಂಬೈ ಮತ್ತು ಥಾಣೆಗಳಲ್ಲೂ ಸೇವೆಯನ್ನೊದಗಿಸುತ್ತವೆ. ಕಳೆದೆರಡು ದಶಕಗಳಲ್ಲಿ ಬೆಸ್ಟ್ ಸಂಸ್ಥೆಯು ಅವಸಾನದ ಅಂಚಿಗೆ ಬಂದು ನಿಂತಿದೆ. ಸಾಮಾನ್ಯ ನಾಗರಿಕರ ಸಾರ್ವಜನಿಕ ಅಗತ್ಯಗಳ ಬಗೆಗೆ ಕಿಂಚಿತ್ತೂ ಕಾಳಜಿಯನ್ನು ತೋರದ ಸರ್ಕಾರವು ಸರ್ಕಾರಿ ಸೇವೆಗಳಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ನಗರ ಯೋಜನೆಯ ಮೂಲಕ  ಮತ್ತೊಂದು ಸಾಂಸ್ಥಿಕ ಅವಸಾನದ ಕಥೆಯನ್ನು ಬರೆಯುತ್ತಿದೆ. ಇದು ತ್ವರಿತ ಮತ್ತು ಅಯೋಜಿತ ನಗರೀಕರಣ ಹಾಗೂ ಕೆಟ್ಟ ಆಡಳಿತದ ಕಾರಣಗಳಿಂದ ದೇಶಾದ್ಯಂತ ಸಂಭವಿಸುತ್ತಿರುವ ವಿದ್ಯಮಾನವೇ ಆಗಿದೆ. ಇನ್ನು ಬೆಸ್ಟ್ ಸಂಸ್ಥೆಯ ವಿಷಯಕ್ಕೆ ಬರುವುದಾದರೆ ಮುಂಬೈನ ಪ್ರಮುಖ ಪ್ರದೇಶಗಳಲ್ಲಿದ್ದ ಅದರ ಡಿಪೋಗಳಿದ್ದು ಆ ಜಾಗಗಳನ್ನು ಮಾರಿಕೊಂಡಿರುವುದು, ಲಾಭದಾಯಕವಲ್ಲವೆಂಬ ನೆಪದಲ್ಲಿ ಹಲವಾರು ರೂಟುಗಳನ್ನು ರದ್ದು ಮಾಡಿರುವುದು, ಬಸ್ ಪ್ರಯಾಣ ದರವನ್ನು ಹೆಚ್ಚಿಸ್ರುವುದು, ಬಸ್‌ಗಳ ಕೆಟ್ಟ ಯಾಂತ್ರಿಕ ನಿರ್ವಹಣೆ, ಮತ್ತು ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬರುತ್ತಿರುವ ವಿದ್ಯಮಾನಗಳೆಲ್ಲಾ ಸಾರ್ವಜನಿಕರಿಗೆ ತಿಳಿದಿರುವ ಸಂಗತಿಯೇ ಆಗಿದೆ.

ಬೆಸ್ಟ್ ಸಂಸ್ಥೆಯ ಪ್ರಕರಣವು ಭಾರತದಲ್ಲಿನ ನಗರ ಸಾರಿಗೆ ವ್ಯವಸ್ಥೆಯು ಹೇಗೆ ಆಡಳಿತ ವರ್ಗದ ಸಮಗ್ರ ನೋಟವಿಲ್ಲದ ಯೋಜನೆಗಳು ಮತ್ತು ಆಡಳಿತಕ್ಕೆ ಬಲಿಯಾಗುತ್ತಿದೆಯೆಂಬುದನ್ನು ಸೂಚಿಸುತ್ತದೆ. ಲಾಭದಾಯಕವಲ್ಲದ ರೂಟುಗಳನ್ನು ರದ್ದುಪಡಿಸುವ ಕಡೆ ಹೆಚ್ಚು ಒತ್ತುಕೊಡುವ ಮತ್ತು ಸಂಸ್ಥೆಯ ಮೂಲಭೂತ ಸೌಕರ್ಯಗಳ ನಿರ್ವಹಣೆಗಾಗಿ ಹೂಡಿಕೆ ಮಾಡದಿರುವ ಕ್ರಮಗಳು ಸಂಸ್ಥೆಯ ಆಸಕ್ತಿಗಳಿಗೆ ತದ್ವಿರುದ್ಧವಾಗಿವೆ. ಮುಂದುವರೆಯುತ್ತಿರುವ ದೇಶಗಳಲ್ಲಿ ಸರ್ಕಾರಿ ಸಬ್ಸಿಡಿಗಳಿಲ್ಲದೆ ಸಾರ್ವಜನಿಕ ನಿರ್ವಹಣೆಯನ್ನು ಮಾಡುವುದು ಅಸಾಧ್ಯವೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಬೆಸ್ಟ್‌ನ ಆಡಳಿತ ವರ್ಗವು ತನ್ನ ನಷ್ಟವನ್ನು ಇತರ ಮೂಲಗಳಿಂದ ಸರಿದೂಗಿಸುವ ಮತ್ತು ಅದರ ಗುಣಮಟ್ಟವನ್ನು ಹೆಚ್ಚಿಸಲು ಬೇಕಾದ ಹೂಡಿಕೆಗೆ ಬೇಕಾದ ಹಣಕಾಸನ್ನು ಹೊಂದಿಸುವ ಮಾರ್ಗಗಗಳನ್ನು ಅನ್ವೇಷಿಸಬೇಕು. ಬೆಸ್ಟ್ ಸಂಸ್ಥೆಯ ಬಜೆಟ್ಟನ್ನು ಬೃಹನ್‌ಮುಂಬೈ ನಗರ ಪಾಲಿಕೆ (ಬಿಎಂಸಿ)ಯ ಬಜೆಟ್ಟಿನೊಂದಿಗೆ ವಿಲೀನಗೊಳಿಸಬೇಕೆಂದು ನೌಕರರು ಆಗ್ರಹಿಸುತ್ತಿದ್ದಾರೆ. ಇದು ಒಂದು ಪರಿಗಣಿಸಲೇ ಬೇಕಾದ ಪ್ರಮುಖ ಬೇಡಿಕೆಯಾಗಿದೆ.

ಆದರೆ ಅದರ ಬದಲಿಗೆ ಇತರ ಎಲ್ಲಾ ನಗರಗಳಲ್ಲೂ ಸಂಭವಿಸುತ್ತಿರುವಂತೆ ನಗರ ಸಾರಿಗೆಯ ವಿಷಯದಲ್ಲಿ ಕಾರು-ಕೇಂದ್ರಿತ ಯೋಜನೆಗಳ ಬಗ್ಗೆಯೇ ಒತ್ತು ಮತ್ತು ಆದ್ಯತೆಗಳನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಆಡಳಿತವರ್ಗವು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಉಲ್ಲೇಖಿಸುತ್ತಾರೆ. ಆದರೆ ಇದು ಯೋಜನೆಗಳ ಅಸಮರ್ಪಕತೆಯನ್ನಷ್ಟೇ ಸೂಚಿಸುತ್ತದೆ. ದೇಶದ ಯಾವುದೇ ಭಾಗದಲ್ಲಿ ನಗರದ ಪ್ರಯಾಣಿಕರು ತಮ್ಮ ನಿತ್ಯದ ಅಗತ್ಯಗಳಿಗೆ ಅಗ್ಗದ ದರದ ಸಾರ್ವಜನಿಕ ಸಾರಿಗೆಯನ್ನು ಬಿಟ್ಟು ಉದ್ದೇಶಪೂರ್ವಕವಾಗಿ ದುಬಾರಿ ದರದ ಖಾಸಗಿ ಸಾರಿಗೆಗೆ ಪ್ರಾಶಸ್ತ್ಯ ಕೊಡುತ್ತಾರೆ ಎಂದು ಊಹಿಸಿಕೊಳ್ಳುವುದೇ  ಹಾಸ್ಯಾಸ್ಪz. ಇಕ್ಕಟ್ಟಾಗುತ್ತಿರುವ ರಸ್ತೆಗಳು, ಪಾದಾಚಾರಿ ಮಾರ್ಗವೇ ಇಲ್ಲದಿರುವುದರಿಂದ ಪಾದಾಚಾರಿಗಳು ರಸ್ತೆಯ ಮೇಲೆಯೇ ಓಡಾಡಬೇಕಿರುವ ಪರಿಸ್ಥಿತಿ, ಮತ್ತು ವಾಹನೋದ್ಯಮಗಳಿಗೆ ನೀಡಲಾಗುತ್ತಿರುವ ವಿವೇಚನಾ ರಹಿತ ಸಬ್ಸಿಡಿಗಳಂಥ ವಿದ್ಯಮಾನಗಳೆಲ್ಲಾ ಒಟ್ಟು ಸೇರಿ ಬೆಸ್ಟ್ ಸಾರಿಗೆ ವ್ಯವಸ್ಥೆಯೆಂದರೆ ಹೆಚ್ಚು ಸಮಯವನ್ನು ಕಬಳಿಸುವ ಮತ್ತು ನಿಯಂತ್ರಿಸಲಾಗದ ವ್ಯವಸ್ಥೆಯೆಂಬ ಅಭಿಪ್ರಾಯವನ್ನು ಪ್ರಯಾಣಿಕರಲ್ಲಿ ಮೂಡಿಸಿದೆ. ಇದರ ದುಷ್ಪರಿಣಾಮವಾಗಿ ಮುಂಬೈನಲ್ಲಿ ಮಾತ್ರವಲ್ಲದೆ ಭಾರತದ ಎಲ್ಲಾ ನಗರಗಳಲ್ಲೂ ದ್ವಿಚಕ್ರ ವಾಹನಗಳನ್ನು ಅವಲಂಬಿಸುವುದು ಹೆಚ್ಚುತ್ತಿದೆ. ಅದು ರಸ್ತೆಗಳಲ್ಲಿ ಮತ್ತಷ್ಟು ದಟ್ಟಣೆಗಳಿಗೆ ಮತ್ತು ಆಮೆಗತಿ ಸಂಚಾರಗಳಿಗೆ ಕಾರಣವಾಗುತ್ತಿದೆ. ವೈಯಕ್ತಿಕ ವಾಹನ ಸಾರಿಗೆಗಿಂತ ಸಮರ್ಥವಾದ ಸಾರ್ವಜನಿಕ ಸಾರಿಗೆಗಳು ವಿವಾದಾತೀತವಾಗಿ ಅತ್ಯುತ್ತಮ ಆಯ್ಕೆಯಾಗಿದೆ.

 ೨೦೧೬ರಲ್ಲಿ ಸುಪ್ರೀಂಕೋರ್ಟು ಬೆಸ್ಟ್ ಸಂಸ್ಥೆ ಜಾರಿಗೆ ತಂದಿದ ಬಹು ಉಪಯೋಗಿ ವ್ಯವಸ್ಥೆಯನ್ನು ರದ್ದುಗೊಳಿಸಿತ್ತು. ಸಹಜವಾಗಿಯೇ ಹuಕಾಸಿನ ಕೊರತೆಯಿಂದಾಗಿ ಸೇವೆಗಳು ಮತ್ತು ಸಂಪನ್ಮೂಲಗಳಲ್ಲಿ ಹೂಡಿಕೆಗಳೂ ಕಡಿಮೆಯಾಗುತ್ತಾ ಹೋಯಿತು. ನೌಕರರ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತಲ್ಲದೆ ಬಹುಪಾಲು ಕಾರ್ಮಿಕರ ನಿವೃತ್ತಿ ನಂತರದ ಸೌಲಭ್ಯಗಳಲ್ಲೂ ಕತ್ತರಿಯಾಡಿಸಲಾಯಿತು. ಆಗಿನಿಂದ ಬಿಎಂಸಿ ಯು ಇತರ ಕಂಪನಿಗಳಿಂದ ತಾತ್ಕಾಲಿಕವಾಗಿ ಬಸ್ಸುಗಳನ್ನು ಬಾಡಿಗೆಗೆ ಪಡೆಯುವ ಪ್ರಸ್ತಾಪವನ್ನು ಮುಂದಿಡುತ್ತಾ ಬಂದಿದೆ. ಇತ್ತೀಚಿನ ಮುಷ್ಕರದ ಸಂದರ್ಭದಲ್ಲೂ ಭಾಗಶಃ ಖಾಸಗೀಕರಣದ ಮೂಲಕ ಮಾತ್ರ ಸಂಸ್ಥೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂಬ ತನ್ನ ಪ್ರಸ್ತಾಪವನ್ನು ಬಿಎಂಸಿಯು ಪುನರುಚ್ಚರಿಸಿತು. ಸಾರ್ವಜನಿಕ ಸಾರಿಗೆಯನ್ನು ಉಳಿಸಿಕೊಳ್ಳಲು ಖಾಸಗೀಕರಣವು ಉತ್ತರವಲ್ಲವೆಂಬುದನ್ನು ಇತರ ಹಲವಾರು ರಾಜ್ಯಗಳ ಅನುಭವವು ರುಜುವಾತು ಮಾಡಿದೆ. ಖಾಸಗಿ ಬಸ್ ನಡೆಸುವವರಿಗೆ ಪ್ರೇರಣೆ ಲಾಭದಾಯಕತೆಯೇ ವಿನಃ ಪ್ರಯಾಣಿಕರ ಅನುಕೂಲವಲ್ಲ; ಖಾಸಗಿ ಬಸ್ಸುಗಳನ್ನು ನಡೆಸುವವರು ತಮ್ಮ ನೌಕರರಿಗೆ ಅತ್ಯಂತ ಕಡಿಮೆ ವೇತನ ಕೊಡುತ್ತಾರೆ ಮತ್ತು ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯಾವುದೇ ಕಾಳಜಿ ಇಲ್ಲದೆ ದುಸ್ಥಿತಿಗಳಲ್ಲಿರುವ ಬಸ್ಸುಗಳನ್ನು ಅದರ ಬಳಕೆ ಕಾಲಾವಧಿ ಮುಗಿದಿದ್ದರೂ ರಸ್ತೆಯ ಮೇಲೆ ಬಿಟ್ಟಿರುತ್ತಾರೆ.

ಮುಂಬೈ ನಗರದಲ್ಲಿ ನಡೆದ ಈ ಮುಷ್ಕರ ಮತ್ತು ಬೆಸ್ಟ್ ಸಂಸ್ಥೆ ಮುಂದಿಟ್ಟಿರುವ ಸಮಸ್ಯೆಗಳು ನಮ್ಮ ನಗರ ಸಾರಿಗೆ ನೀತಿಗಳಲ್ಲಿ ಮತ್ತು ಆದ್ಯತೆಗಳಲ್ಲಿ ಪ್ರಮುಖ ಬದಲಾವಣೆಗಳಾಗುವ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಿದೆ ಎಂಬುದನ್ನು ಸೂಚಿಸುತ್ತದೆ. ಭಾರತದ ಯಾವುದೇ ನಗರಗಳ ಸಮರ್ಥ ನಿರ್ವಹಣೆಯು ಸಾರ್ವಜನಿಕ ಸಾರಿಗೆಯಿಲ್ಲದೆ ಸಾಧ್ಯವಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರವು ವಾಹನೋದ್ಯಮಗಳ ಮೇಲೆ ಮತ್ತು ಕಾರು ಕೇಂದ್ರಿತ ಪರಿಹಾರಗಳ ಮೇಲಿರುವ ಒತ್ತನ್ನು ಬದಲಿಸಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚು ಚಿಂತೆಗೀಡುಮಾಡುವ ವಿಷಯವೆಂದರೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕ ಸಾರಿಗೆಯ ಆಧುನೀಕರಣ ಮತ್ತು ವಿಸ್ತರಣೆಗೆ ಅಗತ್ಯವಿರುವಷ್ಟು ಸಂಪನ್ಮೂಲಗಳೇ ಇಲ್ಲದಿರುವುದು. ಈ ಅಂಶಗಳು ಭಾರತದ ನಗರಗಳ ವಾತಾವರಣದಲ್ಲಿನ ಗಾಳಿಯ ಗುಣಮಟ್ಟ ಮತ್ತು ಸಂಚಾರ ಸಾಮರ್ಥ್ಯಗಳ ಮೇಲೂ ಪರಿಣಾಮ ಬೀರುತ್ತವೆ.

ಇದು ಅಷ್ಟೊಂದು ಸುಲಭದ ಕೆಲಸವೇನಲ್ಲ. ಇದಕ್ಕಾಗಿ ಬಲವಾದ ರಾಜಕೀಯ ಇಚ್ಚಾಶಕ್ತಿ ಹೊಂದಿರುವ ಸಾರಿಗೆ ಸಂಸ್ಥೆಯ ನೌಕರ ಒಕ್ಕೂಟಗಳು ಮತ್ತು ನಾಗರಿಕರ ವೇದಿಕೆಗಳು ತೊಡಗಿಕೊಳ್ಳಬೇಕಾದ ಅಗತ್ಯವಿದೆ. ದೇಶದಲ್ಲಿ ಹೆಚ್ಚುತ್ತಿರುವ ನಗರೀಕರಣದ ಗತಿಯ ಹಿನ್ನೆಲೆಯಲ್ಲಿ, ಬೆಸ್ಟ್ ಸಂಸ್ಥೆಯ ಉದಾಹರಣೆಯು ಇತರ ನಗರಗಳಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಈ ಮುಷ್ಕರವು ನಗರದ ಸಂಚಾರ ವ್ಯವಸ್ಥೆಯನ್ನು ಮತ್ತು ಒಟ್ಟಾರೆಯಾಗಿ ನಗರ ಜೀವನದ ಸ್ವರೂಪವನ್ನು ರೂಪಿಸುವಲ್ಲಿ ಕಾರ್ಮಿಕರ ಸಾಮೂಹಿಕ ಕ್ರಿಯಾಚರಣೆಗಿರುವ ನಿರ್ಣಾಯಕ ಪಾತ್ರವನ್ನು ಒತ್ತುಕೊಟ್ಟು ಹೇಳಿದೆ.

Back to Top