ದುಡಿಮೆಯ ಅಣಕ
ಸರ್ಕಾರದ ಘೋಷಿತ ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿದರವು ಅದರ ಪರಿಕಲ್ಪನೆಯನ್ನೇ ವಿಫಲಗೊಳಿಸುವಂತಿದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಕೇಂದ್ರ ಸರ್ಕಾರವು ಇತ್ತೀಚೆಗೆ ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿದರವನ್ನು ರೂ.೧೭೮ ಎಂದು ನಿಗದಿಗೊಳಿಸಿದೆ. ಇದು ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿಯನ್ನು ನಿಗದಿಗೊಳಿಸಲು ಅಳವಡಿಸಿಸಬೇಕಾಗಿದ್ದ ಮಾನದಂಡಗಳನ್ನು ಮಾತ್ರವಲ್ಲದೆ ಅನುಸರಿಸಬೇಕಾದ ಆಡಳಿತಾತ್ಮಕ ಪ್ರಕ್ರಿಯೆಗಳನ್ನೂ ಉಲ್ಲಂಘಿಸಿದೆ. ೨೦೧೫ರಲ್ಲಿ ಇದನ್ನು ರೂ.೧೬೦ ಎಂದು ನಿಗದಿಗೊಳಿಸಲಾಗಿತ್ತು. ನಂತರ ೨೦೧೭ರಲ್ಲಿ ಆಗ ಚಾಲ್ತಿಯಲ್ಲಿದ್ದ ಕೈಗಾರಿಕಾ ಕಾರ್ಮಿಕರ ಗ್ರಾಹಕ ಸೂಚ್ಯಂಕ ಏರಿಕೆಯನ್ನು ಆಧರಿಸಿ ಶೇ.೧೦ರಷ್ಟು ಏರಿಸಿ ಕನಿಷ್ಟ ಕೂಲಿಯನ್ನು ದಿನಕ್ಕೆ ರೂ. ೧೭೬ ಎಂದು ನಿಗದಿ ಮಾಡಲಾಯಿತು. ಆದರೆ ಹಾಲಿ ಚಾಲ್ತಿಯಲ್ಲಿರುವ ಹಣದುಬ್ಬರ ದರವನ್ನು ಪರಿಗಣನೆಗೆ ತೆಗೆದುಕೊಳ್ಳದೇ ನಿಗದಿ ಪಡಿಸಿರುವ ಈ ರಾಷ್ಟ್ರೀಯ ಕನಿಷ್ಟ ತಳಮಟ್ಟದ ಕೂಲಿದರವು ವಾಸ್ತವ ದರದಲ್ಲಿ ಏರಿಕೆಯಾಗದೆ ಇಳಿಕೆಯಾಗಿದೆ. ಹಾಗಿದ್ದಲ್ಲೆ ಕನಿಷ್ಟ ಕೂಲಿ ದರನ್ನು ನಿಗದಿ ಮಾಡುವ ಔಚಿತ್ಯವಾದರೂ ಏನಿದೆ?
ಕನಿಷ್ಟ ಕೂಲಿ ಮತ್ತು ಸಾಮೂಹಿಕ ಚೌಕಾಸಿ ವ್ಯವಸ್ಥೆಗಳು ಕೂಲಿದರದ ಮಟ್ಟ ಮತ್ತು ವಿತರಣೆಯ ಮೇಲೆ ಪ್ರಭಾವ ಬೀರಬಲ್ಲ ಕಾರ್ಮಿಕ ಮಾರುಕಟ್ಟೆ ಸಂಬಂಧೀ ಸಾಂಸ್ಥಿಕ ಏರ್ಪಾಟುಗಳಾಗಿವೆ. ಹೀಗಾಗಿ, ಸಾಧಾರಣವಾಗಿ, ಒಂದು ಕಾರ್ಮಿಕ ನೀತಿಯ ಭಾಗವಾಗಿಯೇ ಬಡತನ ಸುಧಾರಣೆ ಹಾಗೂ ಆದಾಯ ಮತ್ತು ಕಾರ್ಮಿಕ ಮಾರುಕಟ್ಟೆ ಅಸಮಾನತೆಗಳನ್ನು ಮೀರುವ ಒಂದು ಸಾಧನವಾಗಿ ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿ ದರವನ್ನು ನಿಗದಿ ಮಾಡಲಾಗುತ್ತದೆ. ಏಕೆಂದರೆ ಸಾಮಾನ್ಯವಾಗಿ ಈ ಕನಿಷ್ಟ ಕೂಲಿಯನ್ನು ಕಾರ್ಮಿಕರ ಮತ್ತವರ ಕುಟುಂಬಗಳ ಅಗತ್ಯವನ್ನೂ ಪೂರೈಸುವ ಮಾನದಂಡಗಳ ಜೊತೆಜೊತೆಗೆ ಹಣದುಬ್ಬರ ದರವನ್ನೂ ಗಮನದಲ್ಲಿಟ್ಟುಕೊಂಡು ಲೆಕ್ಕಾಚಾರ ಮಾಡಲಾಗುತ್ತದೆ. ಇದು ಸಾಮೂಹಿಕ ಚೌಕಾಸಿ ವ್ಯವಸ್ಥೆಗಿಂತ ಭಿನ್ನ. ಸಾಮೂಹಿಕ ಚೌಕಾಸಿ ವ್ಯವಸ್ಥೆಯ ಮೂಲಕ, ವಿಶೇಷವಾಗಿ ಸಂಘಟಿತ ಕ್ಷೇತ್ರದ ಕಾರ್ಮಿಕರು ಅಸ್ಥಿತ್ವದಲ್ಲಿರುವ ಕೂಲಿ ದರಕ್ಕಿಂತ ಹೆಚ್ಚಿನ ದರವನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ, ಸಮಾಜದಲ್ಲಿ ಅತ್ಯಂತ ತಳಮಟ್ಟದ ಹಾಗೂ ಅತಂತ್ರ ಕೂಲಿಯನ್ನು ಪಡೆಯುವವರನ್ನು ಉದ್ದೇಶಿಸಿ ನಿಗದಿ ಮಾಡುವ ಪರಿಣಾಮಕಾರಿ ಕನಿಷ್ಟ ಕೂಲಿಯು ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸುವುದಲ್ಲದೆ, ಮಧ್ಯಮ ವರ್ಗವನ್ನು ಹುಟ್ಟುಹಾಕಿ ಗಟ್ಟಿಗೊಳಿಸುತ್ತದೆ ಮತ್ತು ಆ ಮೂಲಕ ಸುಸ್ಥಿರವಾದ ಹಾಗೂ ಎಲ್ಲರನ್ನೂ ಒಳಗೊಳ್ಳುಂಥ ಅಭಿವೃದ್ಧಿಯನ್ನು ಕೂಡಾ ಸಾಧಿಸಬಹುದು.
ಆದರೆ, ಹಣದುಬ್ಬರವನ್ನು ಗಣನೆಗೇ ತೆಗೆದುಕೊಳ್ಳದೆ ಕನಿಷ್ಟ ಕೂಲಿಯನ್ನು ರೂ.೧೭೮ ಎಂದು ನಿಗದಿ ಮಾಡಿರುವುದರಿಂದ ಅದು ವಾಸ್ತವದಲ್ಲಿ ಕಾರ್ಮಿಕರ ಕೊಳ್ಳುವ ಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಹಾಗೂ ಅದು ಹಲವಾರು ಕಾರ್ಮಿಕ ಅಧಿವೇಶನಗಳ ಮತ್ತು ೧೯೯೨ರ ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಯೂ ಆಗಿದೆ. ಅಷ್ಟುಮಾತ್ರವಲ್ಲ. ಶಾಸನಬದ್ಧವಾದ ಕನಿಷ್ಟ ಕೂಲಿ ಸಲಹಾ ಸಮಿತಿಯ ಸಭೆಯಲ್ಲಿ ಇದರ ಬಗ್ಗೆ ಅನುಮೋದನೆಯನ್ನು ಕೂಡಾ ತೆಗೆದುಕೊಳ್ಳದೆ ಈ ತಳಮಟ್ಟದ ಕನಿಷ್ಟ ಕೂಲಿಯನ್ನು ಘೋಷಿಸಲಾಗಿದೆ. ರಾಜ್ಯ ಸರ್ಕಾರಗಳು ಇದಕ್ಕಿಂತ ತಳಮಟ್ಟದ ಕೂಲಿಯನ್ನು ನಿಗದಿ ಮಾಡದ ಹಾಗೆ ಮಾಡುವ ಮತ್ತು ಕೇವಲ ಸಲಹಾತ್ಮಕವಾಗಿರುವ ಈ ಕೂಲಿದರವು ಮಾಸಿಕ ೨೬ ದಿನಗಳ ಕೂಲಿಯ ಲೆಕ್ಕದಲ್ಲಿ ತಿಂಗಳಿಗೆ ಕೇವಲ ರೂ. ೪೬೨೮ ಅನ್ನು ಮಾತ್ರ ಒದಗಿಸುತ್ತದೆ.
ಒಂದು ಕನಿಷ್ಟ ಕೂಲಿಯನ್ನು ನಿಗದಿ ಮಾಡುವ ಚರ್ಚೆಗಳಲ್ಲಿ ಕಾರ್ಮಿಕರ ಕುಟುಂಬದ ಅಗತ್ಯಗಳ ಜೊತೆಗೆ ಸಾರ್ವತ್ರಿಕ ಕೂಲಿಯ ಮಟ್ಟ, ಅದರ ವಿತರಣೆ, ಜೀವನ ಮಟ್ಟ, ಕಾರ್ಮಿಕ ಉತ್ಪಾದಕತೆಯ ಮಟ್ಟ, ಆರ್ಥಿಕ ಪ್ರಗತಿಯ ದರ ಮೊದಲಾವುಗಳನ್ನು ಸಹ ಪರಿಗಣಿಸಲಾಗುತ್ತದೆ. ಆದರೆ ಕಾರ್ಮಿಕ ಮಂತ್ರಿಗಳು ಘೋಶಿಸಿರುವ ಈ ದಿನಕ್ಕೆ ರೂ.೧೭೮ ಎಂಬ ಕೂಲಿ ದರದ ಲೆಕ್ಕಾಚಾರದಲ್ಲಿ ಇಂಥ ಯಾವ ಚರ್ಚೆಗಳು ನಡೆದ ಸೂಚನೆಯಿಲ್ಲ. ಹೀಗಾಗಿ ಈ ದರವನ್ನು ಬೇಕಾಬಿಟ್ಟಿಯಾಗಿ ನಿಗದಿ ಮಾಡಲಾಗಿದೆ. ಮೇಲಾಗಿ ಕಾರ್ಮಿಕ ಇಲಾಖೆಯೇ ರಚಿಸಿದ ಪರಿಣಿತರ ಸಮಿತಿಯೂ ಸಹ ತಿಂಗಳಿಗೆ ರೂ.೯೭೫೦-೧೧,೬೨೨ ಲೆಕ್ಕದಲ್ಲಿ ರಾಷ್ಟ್ರೀಯ ಕನಿಷ್ಟ ಕೂಲಿಯನ್ನು ದಿನಕ್ಕೆ ಕನಿಷ್ಟ ರೂ.೩೭೫-೪೪೭ ಎಂದು ನಿಗದಿ ಮಾಡಬೇಕೆಂದು ಶಿಫಾರಸ್ಸು ಮಾಡಿತ್ತು. ಸರ್ಕಾರವು ತಾನೇ ರಚಿಸಿದ್ದ ಈ ಸಮಿತಿ ನೀಡಿದ ಶಿಫಾರಸ್ಸುಗಳನ್ನೂ ಸಹ ಮೂಲೆಗುಂಪು ಮಾಡಿದೆ. ಹಾಗೆ ನೋಡಿದರೆ ಆ ಸಮಿತಿಯೂ ಸಹ ಕಾರ್ಮಿಕರೊಬ್ಬರ ದೈನಂದಿನ ಜೈವಿಕಶಕ್ತಿಯ ಅಗತ್ಯಗಳನ್ನು ೨೭೦೦ ರಿಂದ ೨೪೦೦ಕ್ಕೆ ಇಳಿಸಿತ್ತು. ಹಾಗೂ ದರಗಳನ್ನು ಹಾಲಿ ಲೆಕ್ಕದಲ್ಲಿ ಅಲ್ಲದೆ ೨೦೧೨ರ ದರಗಳಲ್ಲಿ ಲೆಕ್ಕ ಮಾಡಿ ಮುಂದಿಟ್ಟಿತ್ತು. ಆ ರೀತಿಯಲ್ಲಿ ಅದು ಅತ್ಯಂತ ಯಥಾಸ್ಥಿತಿವಾದಿ ಶಿಫಾರಸ್ಸಾಗಿತ್ತು. ಆದರೆ ಅದನ್ನೂ ಸಹ ಸರ್ಕಾರ ತಿರಸ್ಕರಿಸಿದೆ. ಅಷ್ತು ಮಾತ್ರವಲ್ಲ. ಈ ಕೂಲಿ ದರವು ೭ನೇ ವೇತನ ಅಯೋಗವು ೨೦೧೬ರಲ್ಲಿ ಶಿಫಾರಸ್ಸು ಮಾಡಿದ ಕೂಲಿ ದರದ ನಾಲ್ಕನೇ ಒಂದು ಭಾಗದಷ್ಟು ಮಾತ್ರ ಆಗುತ್ತದೆ.
ಈ ದೇಶದ ಶೇ.೯೩ರಷ್ಟು ದುಡಿಯುವ ಜನ ಅಸಂಘಟಿತ ಕ್ಷೇತ್ರದಲ್ಲಿ ದುಡಿಯುತ್ತಿದ್ದು ಈಗ ನಿಗದಿಯಾಗಿರುವ ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿಯು ಕಾರ್ಮಿಕರ ಕೂಲಿ ಮಟ್ಟವನ್ನು ಹೆಚ್ಚಿಸುವ ಅಥವಾ ಕಾರ್ಮಿಕರ ಕುಟುಂಬವನ್ನು ಆರ್ಥಿಕ ಅತಂತ್ರ ಸ್ಥಿತಿಯಿಂದ ಮೇಲೆತ್ತುವಂಥ ಯಾವುದೇ ಸಕಾರಾತ್ಮಕ-ಆದಾಯ ಪರಿಣಾಮಗಳನ್ನು ಬೀರುವುದಿಲ್ಲ. ಅತ್ಯಂತ ಅತಂತ್ರ ಸ್ಥಿತಿಯಲ್ಲಿರುವ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಅತ್ಯಂತ ಅಸಂಬಧ್ಹವೆನ್ನುವಷ್ಟು ಕಡಿಮೆ ಕೂಲಿಯನ್ನು ಪಡೆದುಕೊಳ್ಳುತ್ತಿರುವ ಕಾರ್ಮಿಕರ ಸಹಾಯಕ್ಕೆ ಬರದಿದ್ದ ಮೇಲೆ ಈ ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿಯನ್ನು ರಚಿಸುವುದರ ಔಚಿತ್ಯವಾದರೂ ಏನು? ವಿಪರ್ಯಾಸವೆಂದರೆ ದೇಶದ ೨೯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಲಿ ಕನಿಷ್ಟ ಕೂಲಿ ದರವು ಈ ರಾಷ್ಟ್ರೀಯ ಕೂಲಿ ದರಕ್ಕಿಂತ ಹೆಚ್ಚಾಗಿದೆ. ಆದ್ದರಿಂದ ಈ ಹೊಸ ರಾಷ್ಟ್ರೀಯ ಕೂಲಿ ದರವು ರಾಜ್ಯಗಳು ಅದನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಪರಿಷ್ಕರಿಸದಿರಲು ಕಾರಣವನ್ನಷ್ಟೇ ಒದಗಿಸುತ್ತದೆ.
ನವ ಉದಾರವಾದಿ ವ್ಯವಸ್ಥೆಯಡಿಯಲ್ಲಿ ಭಾರತದ ಗ್ರಾಮೀಣ ಪ್ರದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಪರಿಸ್ಥಿತಿಯು ಬಿಕ್ಕಟ್ಟಿಗೀಡಾಗಿ, ರೈತಾಪಿಯು ಹೊಟ್ಟೆಪಾಡಿಗಾಗಿ ನಗರಗಳಿಗೆ ವಲಸೆ ಹೊರಟಿರುವಾಗ ಈ ರಾಷ್ಟ್ರೀಯ ಕನಿಷ್ಟ ಕೂಲಿಯ ಘೋಷಣೆ ಅವರ ಭವಿಷ್ಯದ ಮೇಲೆ ಸಿಡಿಲು ಬಡಿದಂತಾಗಿದೆ. ಈ ರಾಷ್ಟ್ರೀಯ ಕನಿಷ್ಟ ಕೂಲಿಯ ಘೋಷಣೆಯು ಕನಿಷ್ಟಕೂಲಿಯೆಂಬ ವ್ಯವಸ್ಥೆಯ ಮೇಲೆಯೇ ನಡೆಯುತ್ತಿರುವ ದಾಳಿಯಾಗಿದೆ. ಮಾತ್ರವಲ್ಲದೆ ಕಾರ್ಮಿಕ ಸುಧಾರಣೆಯ ಹೆಸರಲ್ಲಿ ಹೆಚ್ಚೆಚ್ಚು ದಾಳಿಗೀಡಾಗುತ್ತಿರುವ ಕಾರ್ಮಿಕರ ಮೇಲಿನ ದಾಳಿಯೂ ಆಗಿದೆ. ಹಲವಾರು ಹೋರಾಟಗಳಿಂದ ಗಳಿಸಿಕೊಂಡಿದ್ದ ಹಕ್ಕುಗಳನ್ನು ಮತ್ತು ಕಾರ್ಮಿಕ ರಕ್ಷಣಾ ನೀತಿಗಳನ್ನು ಸಡಿಲಗೊಳಿಸುತ್ತಿರುವ ಸರ್ಕಾರ ಅದೇ ವೇಳೆಯಲ್ಲಿ ಮಾಲೀಕರ ಪರವಾದ ಕಾನೂನುಗಳನ್ನು ಮಾಡುತ್ತಾ ಸಾರಾಂಶದಲ್ಲಿ ಕನಿಷ್ಟ ಕೂಲಿಯೆಂಬ ಸಾಧನದ ಮೇಲೆ ದಾಳಿ ಮಾಡುತ್ತಿದೆ. ಬೇಕಾಬಿಟ್ಟಿಯಾಗಿ ಮತ್ತು ರಹಸ್ಯವಾಗಿ ರೂಪಿಸಲಾಗಿರುವ ಈ ರಾಷ್ಟ್ರೀಯ ತಳಮಟ್ಟದ ಕನಿಷ್ಟ ಕೂಲಿ ದರವು ಕೂಲಿ ಅಸಮಾನತೆಯನ್ನು ಹೆಚ್ಚಿಸುವುದಲ್ಲದೆ ಆದಾಯಗಳಲ್ಲಿ, ಜೀವನದ ಸ್ಥಿಗತಿ ಮತ್ತು ಶ್ರೇಯೋಭಿವೃದ್ಧಿಗಳಲ್ಲಿ ಅಂತರವನ್ನು ಹೆಚ್ಚಿಸುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ.