ISSN (Print) - 0012-9976 | ISSN (Online) - 2349-8846

ಬಜೆಟ್ಟಿನಲ್ಲಿರುವ ಆಲೋಚನೆಗಳು ಮತ್ತು ಆದರ್ಶಗಳು

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಕೇಂದ್ರ ಸರ್ಕಾರದ ೨೦೧೯ರ ಸಾಲಿನ ವಾರ್ಷಿಕ ಬಜೆಟ್ಟಿನ ಬಗ್ಗೆ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿರುವ ಹಲವಾರು ಅರ್ಥಶಾಸ್ತ್ರಜ್ನರು ವಿಸ್ತೃತವಾಗಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಬಜೆಟ್ಟಿನಲ್ಲಿರುವ ವ್ಯಾವಹಾರಿಕ ಧೋರಣೆಯು ಕಣ್ಣಿಗೆ ರಾಚುವಂತೇ ಇದೆ. ಹಲವಾರು ವೈರುಧ್ಯಗಳನ್ನು ಹೊಂದಿರುದ ಈ ಬಜೆಟ್ಟಿನಲ್ಲೂ ಯಥಾಪ್ರಕಾರ ಪರಸ್ಪರ ಸಂಘರ್ಷಾತ್ಮಕ ಹಿತಾಸಕ್ತಿಗಳನ್ನು ಸರಿದೂಗಿಸಿಕೊಂಡು ಹೋಗುವ ಧೋರಣೆಯನ್ನೇ ಅನುಸರಿಸಲಾಗಿದೆ. ಎಂದಿನಂತೆ ಈ ಬಜೆಟ್ಟೂ ಸಹ ಬಡವರ ಪರವಾದ ಧೋರಣೆಯನ್ನಿಟ್ಟುಕೊಂಡು ರೂಪಿಸಲಾಗಿದೆಯೆಂದೇ ಪ್ರತಿಪಾದಿಸಲಾಗುತ್ತಿದೆ. ಆದರೆ, ಕೆಲವು ಸಾಮಾಜಿಕ ಗುಂಪುಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಮಧ್ಯಮವರ್ಗದವರನ್ನು ಓಲೈಸಲು ಒಂದಷ್ಟು  ಸಂಪನ್ಮೂಲಗಳನ್ನು ವಿಶೇಷವಾಗಿ ಒದಗಿಸಲಾಗಿದೆ. ಬಡವರು ಎಂಬ ವರ್ಗೀಕರಣವು ರಾಜಕೀಯವಾಗಿ ಲಾಭದಾಯಕವಲ್ಲವೆಂಬ ತಿಳವಳಿಕೆಯನ್ನು ಪುನರ್‌ಪ್ರತಿಪಾದಿಸುವ ಈ ಬಜೆಟ್ಟು ಅ ವರ್ಗವನ್ನು ಇನ್ನಷ್ಟು ನಿರ್ದಿಷ್ಟ ಗುಂಪುಗಳನ್ನಾಗಿ ಒಳ ವಿಭಜನೆ ಮಾಡಿದೆ. ಒಂದುಕಡೆ ಅದು ವಾರ್ಷಿಕವಾಗಿ  ಎರಡು ಕೋಟಿಗಿಂತ ಹೆಚ್ಚಿನ ವರಮಾನವನ್ನು ಹೊಂದಿರುವ ಅತಿ ಶ್ರೀಮಂತರ ಮೇಲೆ ಹೆಚ್ಚುವರಿ ತೆರಿಗೆಯನ್ನು ವಿಧಿಸಿ ಆರ್ಥಿಕ ಅಭಿವೃದ್ಧಿಗೆ ಬೇಕಾದ ಸಂಪನ್ಮೂಲವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದರೂ ಮತ್ತೊಂದೆಡೆ ಬಂಡವಾಳ ಹೂಡಿಕೆಯನ್ನು ಮಾಡುವಂತೆ ಕಾರ್ಪೊರೇಟ್ ವರ್ಗವನ್ನು ಓಲೈಸಲೇಬೇಕಾಗಿದೆ.

ಹಾಗೆ ನೋಡಿದರೆ ಕೇವಲ ತೆಳುವಾದ ಬಹುಮತವನ್ನು ಹೊಂದಿರುವ ಸರ್ಕಾರ ಮಾಡುವಂತೆ ಈ ಸರ್ಕಾರವು ಸಹ ತದ್ವಿರುದ್ಧವಾದ ಪ್ರಸ್ತಾಪಗಳನ್ನು ಮತ್ತು ಯೋಜನೆಗಳನ್ನು ಘೋಷಿಸಿರುವುದೇಕೆಂದು ಹಲವರು ಗೊಂದಲಕ್ಕೀಡಾಗಿದ್ದಾರೆ. ಅಂಥಾ ಪಕ್ಷಗಳು ವಿವಿಧ ವರ್ಗ ಮತ್ತು ಸಮುದಾಯಗಳ ರಾಜಕೀಯ ಮತ್ತು ಸಾಮಾಜಿಕ ಬೇಡಿಕೆಗಳನ್ನು ಒಳಗೊಳ್ಳುವ ಒತ್ತಡದಿಂದಾಗಿ ಎಲ್ಲರನ್ನೂ ಅಲ್ಪಸ್ವಲ್ಪ ತೃಪ್ತಗೊಳಿಸುವ ಬಜೆಟ್ಟನ್ನು ಮುಂದಿಡುತ್ತವೆ. ಈ ಕಾರಣಗಳಿಗಾಗಿಯೇ ಬಜೆಟ್ ಪ್ರಕ್ರಿಯೆಯು ಒಂದು ಸಾಮಾಜಿಕವಾಗಿ ಪ್ರಗತಿಪರವಾದ ಸ್ವಭಾವವನ್ನು ಪಡೆದುಕೊಳ್ಳುತ್ತದೆ. ಹಾಗೆಂದು ಸಂಪೂರ್ಣ ಬಹುಮತವುಳ್ಳ ಒಂದು ಸರ್ಕಾರವು ಕ್ರಾಂತಿಕಾರಕ ಬಜೆಟ್ಟನ್ನು ಮಂಡಿಸಿ ಒಂದು ಸ್ಪರ್ಧಾತ್ಮಕ ಅವಕಾಶಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಾನೇ ಹೊರುತ್ತದೆ ಎಂದು ಹೇಳಲಾಗುವುದಿಲ್ಲ. ರಾಜಕೀಯ ಪಕ್ಷಗಳು ಕೆಲವು ನಿರ್ದಿಷ್ಟ ಗುಂಪುಗಳ ರಾಜಕೀಯ ಬೆಂಬಲವು ತನಗೆ ಸದಾ ಇರುವಂತೆ ನೋಡಿಕೊಳ್ಳುವ ಒತ್ತಡಗಳನ್ನು ಎದುರಿಸುತ್ತಿರುತ್ತವೆ. ಆದ್ದರಿಂದ ಈ ಅನಿವಾರ್ಯತೆಗಳನ್ನು ಅರ್ಥಮಾಡಿಕೊಳ್ಳಬಹುದು. ಅದೇ ಸಮಯದಲ್ಲಿ ಬಂಡವಾಳ ಹೂಡಿಕೆ ಮತ್ತು ಕ್ರೂಢೀಕರಣಕ್ಕೆ ರಾಜಕೀಯ ಸ್ಥಿರತೆಯು ಅತ್ಯಗತ್ಯವಾದ್ದರಿಂದ ಖಾಸಗಿ ಬಂಡವಾಳ ಕ್ಷೇತ್ರಕ್ಕೆ ಅದನ್ನೂ ಸಹ ಖಾತರಿಗೊಳಿಸಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಅವಕಾಶಗಳ ಸಾಧ್ಯತೆಯನ್ನು ನಿಜಗೊಳಿಸಿಕೊಳ್ಳಲು ವಿಸ್ತೃತವಾದ ಸ್ಪರ್ಧಾತ್ಮಕ ವಲಯವನ್ನು ಒದಗಿಸುವುದನ್ನು ಆಧರಿಸಿರುವ ಉದಾರವಾದಿ ಆದರ್ಶಗಳನ್ನು ವ್ಯಾವಹಾರಿP ದೃಷ್ಟಿಯಿಂದ ಪರಿಗಣಿಸುವ ಕ್ರಮವಾಗಿದೆ.

ಅಂಥಾ ಸ್ಪರ್ಧೆಗಳು ಒಂದು ಸ್ಥರದಲ್ಲಿ ಸಮಾನತೆಯ ಪದರಗಳನ್ನು ನಿರ್ಮಿಸಿದರೂ ದಿನಗಳೆದಂತೆ ಅದು ಆಯಾ ಗುಂಪಿನೊಳಗೆ ಮತ್ತು ಗುಂಪುಗಳ ನಡುವೆ ಅಸಮಾನತೆಗಳನ್ನು ಮತ್ತೆ ಸೃಷ್ಟಿಸುವ ಸಾಧ್ಯತೆಗಳನ್ನು ಹೊಂದಿದೆ. ಹೀಗಾಗಿ ಅಂಥಾ ವಲಯಗಳ ಅವಕಾಶಗಳನ್ನು ಮತ್ತು ಸಾಮಾಜಿಕ ತಳಹದಿಗಳನ್ನು ಸದಾ ವಿಸ್ತರಿಸುವ ಹಾಗೆ ನೋಡಿಕೊಳ್ಳುವ ಅಗತ್ಯವಿದೆ. ಜನರು ತಮ್ಮ ದುರ್ಭರ ಪರಿಸ್ಥಿತಿಗಳನ್ನು ಸಾಪೇಕ್ಷವಾಗಿ ಉತ್ತಮಗೊಳಿಸಿಕೊಳ್ಳುವ ಅವಕಾಶಗಳನ್ನು ಹೇಗೆ ಕಲ್ಪಿಸಬಲ್ಲದು ಎಂಬುದರಲ್ಲೇ ಒಂದು ಸರ್ಕಾರದ ನೀತಿಗಳ ಕ್ರಾಂತಿಕಾರತೆಯು ಅಡಗಿರುತ್ತದೆ. ಆದರೆ ಭಾರತದ ಆರ್ಥಿಕತೆಯು ಅಂಥಾ ವಲಯವನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಭಾರತದ ಶೇ.೯೩ರಷ್ಟು ಉದ್ಯೋಗವು ಇನ್ನೂ ಅಸಂಘಟಿತ ಕ್ಷೇತ್ರದಲ್ಲೇ ಇರುವುದು  ಒಂದು ಪುರಾವೆಯಾಗಿದೆ. ಸರ್ಕಾರ ಮತ್ತು ಮಾರುಕಟ್ಟೆಗಳು ಹೊಸ ಸ್ಪರ್ಧಾತ್ಮಕ ವಲಯವನ್ನು ಸೃಷ್ಟಿಸುವುದರಲ್ಲಿ ವಿಫಲವಾಗಿರುವುದರಿಂದಲೇ ಜನರನ್ನು ಸಿವಿಲ್ ಸರ್ವೀಸ್, ವೃತ್ತಿಪರ ಕೋರ್ಸುಗಳು ಮತ್ತು ಅಳಿದುಳಿದಿರಬಹುದಾದ ಸರ್ಕಾರಿ ಉದ್ಯೋಗಗಳಿಗೆ ಮೊರೆಹೋಗುವಂತೆ ಮಾಡುತ್ತದೆ. ಆದರೆ ಆ ವಲಯದಲ್ಲಿ ಕೆಲವೇ ಕೆಲವರು ಮಾತ್ರ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ ಎನ್ನುವುದು ಸ್ಪಷ್ಟ. ಮೀಸಲಾತಿಯಲ್ಲಿ ತಮ್ಮ ತಮ್ಮ ಖೋಟಾಗಳಿಗಾಗಿ ಹೆಚ್ಚುತ್ತಿರುವ ಒತ್ತಡವು ಸ್ಪರ್ಧಾತ್ಮಕ ಅವಕಾಶದ ಆದರ್ಶವು ಎಷ್ಟು ಏಕಪಕ್ಷೀಯವಾಗಿದೆಯೆನ್ನುವುದನ್ನು ರುಜುವಾತು ಮಾಡುತ್ತದೆ.

ಜನರ ಜೀವನದಲ್ಲಿ ಎಲ್ಲಾ ಸ್ಥರಗಳಲ್ಲೂ ಅಸಮಾನತೆಯನ್ನು ಉತ್ಪಾದಿಸುವುದು ಮಾರುಕಟ್ಟೆಯೇ ಎಂಬುದು ನಿರ್ವಿವಾದ. ಆದರೆ ಒಂದು ಅಸಮಾನತೆಯನು ಆಧರಿಸಿದ ವ್ಯವಸ್ಥೆ ಮತ್ತು ಪ್ರಕ್ರಿಯೆಗ ಚೌಕಟ್ಟು ಗಟ್ಟಿಯಾಗಿರುವಾಗ ಒಂದು ಬಲಿಷ್ಟ ಸರ್ಕಾರಕ್ಕೂ ಸಹ ಅಸಮಾನತೆಗಳನ್ನು ನಿವಾರಿಸುವುದು ಕಷ್ಟಸಾಧ್ಯವಾಗುತ್ತದೆ. ಅದು ನಿವಾರಿಸಬೇಕಿರುವುದು ತಾನು ಸೃಷ್ಟಿ ಮಾಡಿದ ಅಸಮಾನತೆಗಳನ್ನಲ್ಲ. ಬದಲಿಗೆ ಮಾರುಕಟ್ಟೆ ಸೃಷ್ಟಿ ಮಾಡಿದ ಅಸಮಾನತೆಗಳನ್ನು. ಪ್ರಶ್ನೆಯೇನೆಂದರೆ ಸರ್ಕಾರವೊಂದು ಮಾರುಕಟ್ಟೆ ಸೃಷ್ಟಿಸಿರುವ ಸಮಾನತೆಗಳನ್ನು ಹೇಗೆ ನಿವಾರಿಸುತ್ತದೆ ಎಂಬುದು. ಅದರಲ್ಲಿ ಖೋಟಾಗಳನ್ನು ವಿಸ್ತರಿಸುವುದು ಒಂದು ಮಾರ್ಗ.

ಬೆಳೆ ವೈಫಲ್ಯದಂಥ ವೈಪರೀತ್ಯಗಳನ್ನು ಎದುರಿಸಲು ರೈತರಿಗೆ ನೀಡಲಾಗುವ ಬೆಳೆ ವಿಮೆಯಂಥ ಕ್ರಮಗಳು ಅಂತಿಮವಾಗಿ ವಿಮಾ ಕಂಪನಿಗಳಿಗೆ ಮಾತ್ರ ಸಹಾಯ ಮಾಡುತ್ತದೆ. ಅಂಥಾ ವಿಮಾ ಯೋಜನೆಗಳು ಎಂದೂ ರೈತರಿಗೆ ಸಹಾಯವನ್ನು ಮಾಡಿಲ್ಲ. ಸಹಾಯ ಧನಗಳು ಅಸಮಾನತೆಯನ್ನು ಎಂದಿಗೂ ನಿವಾರಿಸಲಾರವು. ವಾಸ್ತವವಾಗಿ ಅಂಥಾ ಕ್ರಮಗಳು ಹೆಚ್ಚೆಂದರೆ ಬಿಕ್ಕಟ್ಟನ್ನು ತತ್ಕಾಲಿಕವಾಗಿ ಎದುರಿಸಲು ಸಹಾಯ ಮಾಡಬಹುದಷ್ಟೆ.

ಮಾರುಕಟ್ಟೆ ಸೃಷ್ಟಿಸಿರುವ ಸಮಾನತೆಗಳನ್ನು ನಿಭಾಯಿಸುವ ಹೊತ್ತಿನಲ್ಲಿ ಅಸಮಾನತೆಗಳನ್ನು ಸೃಷ್ಟಿಸುವ ರಚನೆಗಳನ್ನು ಮುಟ್ಟದೆ ಅದರ ಪರಿಣಾಮಗಳನ್ನು ಮಾತ್ರ ಕಡಿಮೆ ಮಾಡುವ ಕ್ರಮಗಳನ್ನು ಅನುಸರಿಸುವುದು ಸರ್ಕಾರಗಳು ಆಯ್ಕೆ ಮಾಡಿಕೊಂಡಿರುವ ಸುಲಭದ ದಾರಿಯಾಗಿದೆ. ಪರಿಹಾರ ಧನವೆಂಬ ಸಾಧನದ ಮೂಲಕ ಸರ್ಕಾರವು ಸಂತ್ರಸ್ತರನ್ನು ಅಥವಾ ಫಲಾನುಭವಿಗಳನ್ನು ಅಳೆಯುತ್ತದೆ. ಸರ್ಕಾರಗಳು ಪರಿಹಾರಧನದ ಅಗತ್ಯವನ್ನು ಸೃಷ್ಟಿಸುವಂಥ ಸಂದರ್ಭವನ್ನು ನಿವಾರಣೆ ಮಾಡಬೇಕು. ಉದಾಹರಣೆಗೆ ಸರ್ಕಾರವು ರೈತರು ಎದುಸ್ರಿಸುತ್ತಿರುವ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿರ್ಮೂಲನೆ ಮಾಡಬೇಕು. ಹಾಗೆ ನೋಡಿದಲ್ಲಿ ಪರಿಹಾರ ಧನವೆಂಬುದು ಅದರ ಅಗತ್ಯವನ್ನು ಸೃಷ್ಟಿಸುವ ಸಂದರ್ಭವನ್ನು ನಿವಾರಣೆ ಮಾಡುವಲ್ಲಿನ ಸರ್ಕಾರದ ವೈಫಲ್ಯದ ಸಂಕೇತವೇ ಆಗಿದೆ.

ಬೇರೆ ಎಲ್ಲಾ ಕ್ರಮಗಳ ಜೊತೆಜೊತೆಗೆ ಈ ಬಜೆಟ್ಟು ಒಂದು ಆಕರ್ಷಕವಾದ ಮತ್ತು ನಿರೀಕ್ಷಿತ ಸ್ಪರ್ಧಾತ್ಮಕ ಅವಕಾಶಗಳನ್ನು ವಿಸ್ತರಿಸುವಂಥ ಉದಾರವಾದಿ ಆದರ್ಶಗಳ ಪರಿಸ್ಥಿತಿಯನ್ನು ನಿರ್ಮಿಸುವ ತನ್ನ ಕರ್ತವ್ಯವನ್ನು ಮುಂದೂಡುವ ತನ್ನ ಉದ್ದೇಶಗಳಿಗೆ ಪೂರಕವಾಗಿ ಈ ಪರಿಹಾgಧನವೆಂಬ ಪರಿಕಲ್ಪನೆಯನ್ನು ದುಡಿಸಿಕೊಳ್ಳುತ್ತಿದೆ.

Back to Top