ISSN (Print) - 0012-9976 | ISSN (Online) - 2349-8846

ಉಪಕಾರಿ ಹಣದುಬ್ಬರವೆಂಬ ನೀರ್ಗುಳ್ಳೆ

ಹಣದುಬ್ಬರದ ನಿರ್ವಹಣೆಯು ಒಂದು ಸಮಗ್ರ ಅಭಿವೃದ್ಧಿಯ ಗುರಿಯಾಗಬೇಕೇ ವಿನಃ ಶಾಸನಾತ್ಮಕ ಆದೇಶವಾಗಬಾರದು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಪ್ರಾಯಶಃ ೨೦೧೯ರ ಸಾರ್ವತ್ರಿಕ ಚುನಾವಣೆಯು ಹಣದುಬ್ಬರವು ಚುನಾವಣಾ ಅಜೆಂಡಾ ಆಗದ ಮೊಟ್ಟಮೊದಲ ಚುನಾವಣೆಯಾಗಿರಬಹುದು. ಅದಕ್ಕೆ ಕಾರಣವೂ ಇದೆ. ಕಳೆದ ಐದು ವರ್ಷಗಳಲ್ಲಿ ಹಣದುಬ್ಬರದ ದರವು, ಅದರಲ್ಲೂ, ಪೆಟ್ರೋಲಿಯಂ ಮತ್ತು ಆಹಾರ ಬಳಕೆಯ ವಸ್ತುಗಳನ್ನು ಒಳಗೊಂಡಂತೆ ಸಮಗ್ರ ಹಣದುಬ್ಬರ ದರವೂ ಅಷ್ಟೊಂದು ಕೆರಳಿದಂತಿಲ್ಲ. ಗ್ರಾಹಕರ ಬೆಲೆ ಸೂಚ್ಯಂಕಗಳ ಏರಿಕೆಯನ್ನು ಆಧರಿಸಿ ಲೆಕ್ಕಾಚಾರ ಮಾಡುವ ವರ್ಷಾನುವರ್ಷದ ಹಣದುಬ್ಬರದ ದರವು ೨೦೧೪ರಲ್ಲಿ ಶೇ.೬.೬೫ ರಷ್ಟಿದ್ದದ್ದು ೨೦೧೮ರ ಏಪ್ರಿಲ್ ವೇಳೆಗೆ ಶೇ.೨.೨೪ಕ್ಕೆ ಇಳಿದಿದೆ. ಆದರೆ ಈ ಸಂಖ್ಯೆಗೆ ಸಹಾನುಭೂತಿಪರ ಮಾನ್ಯತೆಯನ್ನು ಗಳಿಸಿಕೊಟ್ಟಿರುವುದು ದೇಶದ ಹಣದುಬ್ಬರ ದರವನ್ನು ಶೇ.೨ರಿಂದ ಶೇ.೬ರ ಒಳಪಟ್ಟು ನಿಯಂತ್ರಿಸಬಹುದೆಂದು ನಿಗದಿ ಪಡಿಸಿರುವ ರಿಸರ್ವ್ ಬ್ಯಾಂಕಿನ ಹಣದುಬ್ಬರ ನಿಯಂತ್ರಣ ಚೌಕಟ್ಟಿನ ನೀತಿಯಾಗಿದೆ. 

ಹಣದುಬ್ಬರ ಮತ್ತು ಆರ್ಥಿಕ ಪ್ರಗತಿಯ ನಡುವಿನ ಸಂಬಂಧಗಳ ಬಗ್ಗೆ ಹಾಲಿ ಅಸ್ಥಿತ್ವದಲ್ಲಿರುವ ಸ್ಥೂಲ ಆರ್ಥಿಕತೆಗೆ ಸಂಬಂಧಪಟ್ಟಿರುವ ವಿದ್ವತ್ತುಗಳು ಅನುಮತಿಸಬಹುದಾದ ಒಂದು ನಿರ್ದಿಷ್ಟ ಮಟ್ಟದ ಹಣದುಬ್ಬರ ದರದ ಪ್ರಾಮುಖ್ಯತೆಯನ್ನು ಪರಿಗಣಿಸುತ್ತವೆ. ಈ ಮಟ್ಟವನ್ನು ಮೀರಿ ಏರಿಕೆಯಾಗುವ ಹಣದುಬ್ಬರ ದರಗಳು ಆರ್ಥಿಕ ಪ್ರಗತಿಗೆ ಕಂಟಕ ತರುತ್ತವೆ ಎಂಬ ಬಗ್ಗೆ ಸರ್ವಸಮ್ಮತಿ ಇದ್ದರೂ ಅನುಮತಿಸಲಾದ ಕನಿಷ್ಟ ಮಟ್ಟದ ಹಣದುಬ್ಬರಕ್ಕಿಂತ ಕಡಿಮೆ ಮಟ್ಟಕ್ಕೆ ದರಗಳು ತಲುಪಿದಾಗ ಯಾವ ಬಗೆಯ ಪರಿಣಾಮಗಳುಂಟಾಗುತ್ತವೆ ಎಂಬ ಬಗ್ಗೆ ಏಕಾಭಿಪ್ರಾಯವಿಲ್ಲ. ಆದರೂ ಅಂಥ ಕನಿಷ್ಟ ದರಗಳು ಒಂದೋ ಆರ್ಥಿಕ ಪ್ರಗತಿಗೆ ಪೂರಕವಾಗಿರುತ್ತವೆ ಅಥವಾ ಅತ್ಯಂತ ಕನಿಷ್ಟ ಪ್ರಭಾವವನ್ನು ಹೊಂದಿರುತ್ತದೆ ಎಂಬ ತಿಳವಳಿಕೆಯೇ ಪ್ರಧಾನವಾಗಿದೆ. ಆದರೆ ೨೦೧೯ರ ಏಪ್ರಿಲ್‌ನಲ್ಲಿ  ಹಿಂದಿನ ಆರು ತಿಂಗಳಿಗಿಂತ  ಹೆಚ್ಚಿನ ಏರಿಕೆ ಕಂಡ ಹಣದುಬ್ಬರ ದರವು ಶೇ. ೨.೯೨ನ್ನು ಮುಟ್ಟಿತ್ತು. ಆದರೂ ರಿಸರ್ವ್ ಬ್ಯಾಂಕು ಅನುಮತಿಸಿರುವ ಹಣದುಬ್ಬರದ ಪರಿಧಿಯೊಳಗೇ ಈ ಏರಿಕೆಯೂ ಇದ್ದ  ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕಿನ ಪರಿಭಾಷೆಯಲ್ಲಿ ಈ ಏರಿಕೆಯನ್ನೂ ಕೂಡಾ ಒಂದು ಉಪಕಾರಿ ಹಣದುಬ್ಬರವೆಂದೇ ಕರೆಯಬಹುದು. ಈಗ ರಿಸರ್ವ್‌ಬ್ಯಾಂಕ್ ತನ್ನ ಅಧೀನ ಬ್ಯಾಂಕುಗಳಿಗೆ ವಿಧಿಸುತ್ತಿದ್ದ ಬಡ್ಡಿ ದರವನ್ನು ಶೇ.೬ ರಿಂದ ಸತತವಾಗಿ ಇಳಿಸುತ್ತಲೇ ಬಂದು ಇದೀಗ ಶೇ.೫.೭೫ರಷ್ಟಕ್ಕೆ ಇಳಿಸಿದೆ. ಈ ನೀತಿಯ ಹಿಂದಿನ ಪ್ರಧಾನ ಉದ್ದೇಶವೆಂದರೆ ಆರ್ಥಿಕತೆಯಲ್ಲಿ ಹೂಡಿಕೆಯನ್ನು ಮತ್ತು ಗ್ರಾಹಕ ವೆಚ್ಚವನ್ನೂ ಹೆಚ್ಚಿಸಿ ಈಗ ಶೇ.೫.೮ಕ್ಕೆ ಇಳಿದಿರುವ ಜಿಡಿಪಿ ದರವನ್ನು ೨೦೧೯-೨೦ರ ವೇಳೆಗೆ ಶೇ.೭ಕ್ಕೆ ಏರಿಸುವುದು. ಆದರೆ ಆರ್ಥಿಕ ಅಭಿವೃದ್ಧಿ ಗತಿಯನ್ನು ಹೆಚ್ಚಿಸಲು ಅನುಸರಿಸುತ್ತಿರುವ ಈ ಸುತ್ತುಬಳಸು ಕ್ರಮಗಳು ವಿಸ್ತೃತವಾದ ಸಾಮಾಜಿಕ -ಆರ್ಥಿಕ ಉದ್ದೇಶಗಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದೆಂಬುದನ್ನು ಮಾತ್ರ ಕಿಂಚಿತ್ತೂ ಪರಿಗಣನೆಗೆ ತೆಗೆದುಕೊಂಡಿಲ್ಲ.

ಮೊದಲನೆಯದಾಗಿ ಕಳೆದ ಐದು ದಶಕಗಳ ಅರ್ಥಶಾಸ್ತ್ರೀಯ ಸಾಹಿತ್ಯವು ವ್ಯಕ್ತಿಗಳ ಗ್ರಾಹಕ ಬಳಕೆಯ ಗರಿಷ್ಟೀಕರಣವನ್ನು ಗುರಿಯಾಗಿಟ್ಟುಕೊಂಡಿರುವ  ಜಿಡಿಪಿ ದರದ ಅಭಿವೃದ್ಧಿಯೊಂದನ್ನೇ ಆರ್ಥಿಕ ಪ್ರಗತಿಯ ಏಕೈಕ ಮಾನದಂಡವಾಗಿ ಅನುಸರಿಸುವುದರಿಂದ ಮನುಷ್ಯ ಸ್ವಭಾವ ಮತ್ತು ಪ್ರೇರಣೆಗಳ ಇತರ ಪ್ರಮುಖ ವಲಯಗಳಾದ ಅನುಭೂತಿ, ಸಾಮಾಜಿಕತೆ, ಸಾಮಾಜಿಕ ಬದ್ಧತೆ ಮತ್ತು ಸಾಮೂಹಿಕ ಕ್ರಿಯಾಶೀಲತೆಗಳನ್ನು ಮೂಲೆಗುಂಪು ಮಾಡುತ್ತದೆಂದು ಪ್ರತಿಪಾದಿಸುತ್ತಾ ಬಂದಿದೆ. ಹೀಗಾಗಿ ಜಿಡಿಪಿಯನ್ನು ಹೆಚ್ಚಿಸುವ ಉಪಾಯವಾಗಿ ಬಳಸುತ್ತಿರುವ ಹಣದುಬ್ಬರ ನಿಯಂತ್ರಣ ತಂತ್ರಗಳೂ ಸಹ ಅದೇ ಪ್ರೇರಣೆಯನ್ನು ಹೊಂದಿದೆಯೆಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಉದಾಹರಣೆಗೆ ೨೦೧೪ರ ಬಿಜೆಪಿಯ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆಯಲ್ಲಿ ಆಕಾಶ ಮುಟ್ಟುತ್ತಿರುವ ಆಹಾರ ಸಾಮಗ್ರಿಗಳ ಬೆಲೆ ಏರಿಕೆ ಮತ್ತು ಹಣದುಬ್ಬರಗಳ ಬಗೆಗಿನ ಅಬ್ಬರದ ಪ್ರಚಾರಗಳನ್ನು ನೆನಪಿಸಿಕೊಳ್ಳಿ. ಭಾರತದ ಗ್ರಾಹಕ ಮಾರುಕಟ್ಟೆಯ ಪ್ರಧಾನ ಬಳಕೆದಾರರಾದ ಮಧ್ಯಮವರ್ಗವು ದೊಡ್ಡ ಮಟ್ಟದಲ್ಲಿ ಬಿಜೆಪಿಯ ಪರವಾಗಿ ಮತ ಚಲಾಯಿಸಿದ್ದರಿಂದಲೇ ಬಿಜೆಪಿ ಆ ಚುನಾವಣೆಯಲ್ಲಿ ಗೆದ್ದಿತು. ಪರಿಣಾಮವಾಗಿ ಗ್ರಾಹಕ ದರವನ್ನು ಸದಾ ಅಂಕೆಯಲ್ಲಿಟ್ಟುಕೊಳ್ಳುವುದು ಬಿಜೆಪಿಯ ನೀತಿಯಾಗಿತ್ತು. ಆದರೆ ಅದರ ಪರಿಣಾಮವಾಗಿ ವಸ್ತುಗಳ ಬಳಕೆದಾರರಿಗೆ ಅನುಕೂಲವಾಯಿತೇ ವಿನಾ ಉತ್ಪಾದಕರಿಗಲ್ಲ. ಇದು ಕೃಷಿ ಕ್ಷೇತ್ರದಲ್ಲಿ ಇನ್ನೂ ನಿಚ್ಚಳವಾಗಿ ಎದ್ದುಕಾಣುತ್ತದೆ. ಮತ್ತೊಂದು ಕಡೆ ಈ ಬಳಕೆದಾರ ಮಧ್ಯಮವರ್ಗವು ತನ್ನಸಹವಾಸಿ ರೈತಾಪಿಗಳ ಕಷ್ಟಕಾರ್ಪಣ್ಯಗಳ ಬಗ್ಗೆ ಎಂದಿಗೂ ಅನುಭೂತಿಯನ್ನು ತೋರಿಸಲೇ ಇಲ್ಲ.

ಹಣದುಬ್ಬರವನ್ನು ಗ್ರಾಹಕ ದರ ಸೂಚ್ಯಂಕ, ಸಗಟು ದರ ಸೂಚ್ಯಂಕ ಅಥವಾ ಜಿಡಿಪಿ ನಿರೋಧಕ ಇನ್ನಿತ್ಯಾದಿ ಪಧತಿಗಳ ಮೂಲಕ ಅಳೆಂiಲಾಗುತ್ತಿದೆ. ಮತ್ತು ಇದೇ ಸಂದರ್ಭದಲ್ಲಿ ಹಲವಾರು ಸರಕು ಮತ್ತು ಸೇವೆಗಳ ಸಾಪೇಕ್ಷ ಏರುಪೇರಿನ ವರ್ತನೆಗಳು ಆರ್ಥಿಕ ಕ್ಷೇತ್ರದಲ್ಲಿನ ಭಿನ್ನಭಿನ್ನ ಪಾತ್ರಧಾರಿಗಳ ಮೇಲೆ ಭಿನ್ನಭಿನ್ನ ಪ್ರಭಾವವನ್ನು ಬೀರುವ ಸನ್ನಿವೇಶದಲ್ಲಿ ಹಣದುಬ್ಬರವನ್ನು ಉಪಕಾರಿ ಎಂದು ಬಣ್ಣಿಸುವುದೇ ಒಂದು ರೀತಿಯಲ್ಲಿ ಪ್ರಚೋದನಕಾರಿಯಾಗಿದೆ. ಹೀಗಾಗಿ ಹಣದುಬ್ಬರ ನಿಗ್ರಹದ ಬಗೆಗಿನ ಶಾಸನಾತ್ಮಕ ನೀತಿಗಳು ಜನರನ್ನು ವರ್ಗೀಕರಿಸುವ ಮತ್ತು ಪರಾಯೀಕರಿಸುವ ರಾಜಕೀಯದೊಂಡನ್ನೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಮಾತ್ರವಲ್ಲದೆ ಅಂಥಾ ಹಣದುಬ್ಬರಕ್ಕೆ ಉಪಕಾರಿ ಎಂಬ ಸ್ಥಾನವನ್ನು ನೀಡುವ ಮೂಲಕ ಮತದಾರರನ್ನು ಗೊಂದಲಕ್ಕೀಡು ಮಾಡುವಲ್ಲಿ ಕೂಡಾ ಯಶಸ್ವಿಯಾಗುತ್ತದೆ.

ಪರಿಕಲ್ಪನಾತ್ಮಕವಾಗಿ ನೋಡಿದರೆ ಗ್ರಾಹಕ ಸೂಚ್ಯಂಕ ದರವು ಚಿಲ್ಲರೆ ವಹಿವಾಟಿನ ಹಣದುಬ್ಬರವನ್ನು ಸೂಚಿಸುತ್ತದಾದ್ದರಿಂದ ಸಗಟು ದರ ಸೂಚ್ಯಂಕಕ್ಕಿಂತ ಗ್ರಾಹಕ ಸೂಚ್ಯಂಕ ದರವೇ ಹಣಕಾಸು ನೀತಿಗೆ ಉತ್ತಮ ಮಾರ್ಗದರ್ಶಿಯಾಗಿರುತ್ತದೆ. ಗ್ರಾಹಕ ಸೂಚ್ಯಂಕ ದರದಲ್ಲಿ ಆಹಾರ ಸರಕುಗಳ ಮತ್ತು ಪಾನೀಯಗಳ ಒಟ್ಟುತೂಕವು ಶೇ.೪೬ರಷ್ಟಿರುತ್ತದೆ. ಆದರೆ ರಿಸರ್ವ್ ಬ್ಯಾಂಕಿನ ಹಣದುಬ್ಬರ ನಿಯಂತ್ರಣ ನೀತಿಗಳು ಅವುಗಳ ಮೇಲೆ ಯಾವುದೇ ಪ್ರಭಾವವನ್ನೂ ಬೀರುವುದೇ ಇಲ್ಲ. ಮತ್ತು ಆಹಾರ ಬೆಲೆಯ ಹಣದುಬ್ಬರ ಅಥವಾ ಇಳಿತಗಳು ಪ್ರಧಾನವಾಗಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆಯ ಏರುಪೇರುಗಳನ್ನೂ ಮತ್ತು ಸ್ಥಳೀಯ ಆಹಾರೋತ್ಪಾದನೆಯ ಏರುಪೇರುಗಳನ್ನು ಅವಲಂಬಿಸಿದ್ದು ಅದರ ಮೇಲೆ ರಿಸರ್ವ್ ಬ್ಯಾಂಕಿಗೆ ಯಾವುದೇ ನಿಯಂತ್ರಣವಿರಲು ಸಾಧ್ಯವಿಲ್ಲ. ಈ ಬಗೆಯ ಆರ್ಥಿಕ ಅಂಶಗಳ ಹಿನ್ನೆಲೆಯಲ್ಲಿ ಆಳುವ ಸರ್ಕಾರಗಳು ಒಂದೋ ಆಹಾರ ಸರಕುUಳ ದಾಸ್ತಾನು ಮತ್ತು ರಫ್ರಿನ ಮೇಲಿನ ನಿರ್ಬಂಧ ಹಾಗೂ ಸುಂಕ ರಹಿತ ಆಮದುಗಳಂಥ ಸರಬರಾಜು ಸಂಬಂಧೀ ಕ್ರಮಗಳನ್ನು ಅನುಸರಿಸಿತು. ಅಥವಾ ಮಾರುಕಟ್ಟೆಯಲ್ಲಿ ನಗದಿನ ಹರಿವನ್ನೇ ಬರಿದು ಮಾಡಿದ ನೋಟು ನಿಷೇಧದಂಥ ಅಥವಾ ಗ್ರಾಹಕರ ವಿಶ್ವಾಸವನ್ನೇ ಕದಡಿದಂಥ ಜಿಎಸ್‌ಟಿಯಂಥ ನೀತಿಗಳನ್ನು ಜಾರಿಗೆ  ತಂದಿತು.

ಗ್ರಾಹಕರ ಕೊಳ್ಳುವ ದರಗಳು ಉಪಕಾರಿಯಾಗಿರುವುದು ಅಕಸ್ಮಿಕವೇ ಆಗಿರುವಾಗ, ರಿಸರ್ವ್ ಬ್ಯಾಂಕ್ ನಿಗದಿ ಪಡಿಸಿದ ಪರಿಧಿಯೊಳಗಿನ ಹಣದುಬ್ಬರಗಳೂ ಸಹ ಹೇಳಿಕೊಳ್ಳುವಷ್ಟು ನಿರುಪದ್ರವಿಯಾಗಿಯೇನೂ ವರ್ತಿಸುವುದಿಲ್ಲ. ಮೊದಲನೆಯದಾಗಿ ಸಗಟು ಬೆಲೆ ಸೂಚ್ಯಂಕದ ಆಧಾರದಲ್ಲಿ ಆಹಾರ ಸರಕುಗಳ ಹಣದುಬ್ಬರವು ಕಳೆದ ೩೩ ತಿಂಗಳಲ್ಲಿ ಅತಿ ಹೆಚ್ಚು ಅಂದರೆ ಶೇ. ೭.೪ರಷ್ಟನ್ನು ಮುಟ್ಟಿದೆ. ಇದು ಪ್ರಧಾನವಾಗಿ ಒಂದಾದ ನಂತರ ಒಂದರಂತೆ ಅಹಾರ ಸರಕುಗಳ ಬೆಲೆಗಳು ವರ್ಧಿಸುತ್ತಲೇ ಹೋಗಿರುವುದರ ಪರಿಣಾಮವಾಗಿದೆ. ವರ್ಷಾನುವರ್ತಿ ಹಣದುಬ್ಬರದ ಲೆಕ್ಕಾಚಾರದಲ್ಲಿ ದ್ವಿದಳ ಧಾನ್ಯಗಳ ಬೆಲೆಯುಬ್ಬರವು ಶೇ.೧೪ರಷ್ಟಾಗಿದೆ. ಬೇಳೆಕಾಳುಗಳ ಬೆಲೆಯುಬ್ಬರವು ಶೇ.೮.೫ಕ್ಕೆ ಮುಟ್ಟಿದೆ. ಎರಡನೆಯದಾಗಿ ಹವಾಮಾನ ಇಲಾಖೆಯ ಮುನ್ಸೂಚನೆಗಳು ಮುಂಗಾರು ಮಾರುತದ ಬಗ್ಗೆ ಅಂಥಾ ಆಶಾದಾಯಕವಾಗಿಯೇನೂ ಇಲ್ಲ. ಅಂದರೆ ಪ್ರಾಯಶಃ ಅಹಾರೋತ್ಪಾದನೆಯು ಕುಂಠಿತವಾಗಿ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಬಹುದು. ಮೂರನೆಯದಾಗಿ ಭೌಗೋಳಿಕ ರಾಜಕೀಯದಲ್ಲಿನ ಅನಿಶ್ಚಯತೆಗಳಿಂದಾಗಿ ಈಗ ಬ್ಯಾರೆಲ್ಲಿಗೆ ೬೦ ಡಾಲರ್ ನಷ್ಟು ಅಗ್ಗವಾಗಿರುವ ಕಚ್ಚಾ ತೈಲ ಬೆಲೆಯು ತೀವ್ರಗತಿಯಲ್ಲಿ ಏರಿಕೆ ಕಂಡು ಅಹಾರ ಸರಕುಗಳ ಮತ್ತಷ್ಟು ಬೆಲೆ ಏರಿಕೆಗೂ ಕಾರಣವಾಗಬಹುದು.

ಇಂಥಾ ಬೆಲೆ ಏರಿಕೆಗಳಿಂದ ರೈತಾಪಿಗಳು ಎಷ್ಟು ಲಾಭ ಪಡೆದುಕೊಳ್ಳಬಹುದೆಂಬುದು ಆಹಾರ ಅರ್ಥಿಕತೆಯನ್ನು ಸರ್ಕಾರಗಳು ಹೇಗೆ ನಿಭಾಯಿಸಬಲ್ಲವು ಎಂಬುದನ್ನೇ ಆಧರಿಸಿದೆ. ಹಾಲೀ ಬಿಜೆಪಿ ನೇತೃತ್ವದ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಅರ್ಥಿಕತೆಯ ಭರವಸೆಗಳನ್ನು ಕೇವಲ ಶಬ್ದಾಡಂಬರಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ ಆರ್ಥಿಕ ನಿರ್ವಹಣೆಯಲ್ಲಿ ಒಂದು ಸಮಗ್ರ ಅಭಿವೃದ್ಧಿ ನಿರ್ವಹಣೆಯ ಧೋರಣೆಯನ್ನು ಅನುಸರಿಸುವುದೇ? ಅಥವಾ ಮೊದಲಿನಂತೆ ಹಣದುಬ್ಬರ ನಿಯಂತ್ರಣ ಸಾಧನದ ಮೂಲಕ ಜಿಡಿಪಿ ದರ ಹೆಚ್ಚಿಸುವ ಗೀಳನ್ನು ಮುಂದುವರೆಸುತ್ತದೆಯೇ? 

Back to Top