ISSN (Print) - 0012-9976 | ISSN (Online) - 2349-8846

ಭಯೋತ್ಪಾದನೆ ಮತ್ತು ಕಾನೂನು ಕ್ರಮ

ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ (ಎನ್‌ಐಎ)ಯು ತನಿಖಾ ಕ್ರಮಗಳಲ್ಲಿ ಅಂತರರಾಷ್ಟ್ರೀಯ ದರ್ಜೆಗೆ ಸರಿಗಟ್ಟುವ ರೀತಿಯಲ್ಲಿ  ತನ್ನ ಘೋಷಿತ ಪಾತ್ರವನ್ನು  ನಿಭಾಯಿಸಬೇಕು.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಹರ್ಯಾಣದ ಪಾಣಿಪತ್‌ನ ಬಳಿ ೨೦೦೭ರಲ್ಲಿ ಸಂಭವಿಸಿದ ಸಂಝೋತಾ ಎಕ್ಸ್‌ಪ್ರೆಸ್ ರೈಲುಗಾಡಿ ಸ್ಪೋಟದಲ್ಲಿ ೬೮ ಪ್ರಯಾಣಿಕರು ಕೊಲ್ಲಲ್ಪಟ್ಟಿದ್ದರು. ಅವರಲ್ಲಿ ೪೪ ಪ್ರಯಾಣಿಕರು ಪಾಕಿಸ್ತಾನೀಯರಾಗಿದ್ದರು. ಈ ಘೋರ ಭಯೋತ್ಪಾದನಾ ಕೃತ್ಯದ ಆರೋಪಿತರೆಲ್ಲರೂ ಇತ್ತೀಚೆಗೆ ಬಿಡುಗಡೆಯಾಗಿದ್ದಾರೆ. ಇದು ಎರಡು ತದ್ವಿರುದ್ಧ ಪ್ರತಿಕ್ರಿಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಬಿಜೆಪಿ ಪಕ್ಷವು ಈ ನ್ಯಾಯಾದೇಶವನ್ನು ಐತಿಹಾಸಿಕವೆಂದು ಬಣ್ಣಿಸಿದೆ.  ಮತ್ತೊಂದು ಕಡೆ ಪಾಕಿಸ್ತಾನವು ಈ ತೀರ್ಮಾನವನ್ನು ನ್ಯಾಯಕ್ಕಾದ ಅಪಮಾನವೆಂದು ಖಂಡಿಸಿದೆ. ಇದೆಲ್ಲದರ ನಡುವೆ ಅತ್ಯಂತ ಪ್ರಮುಖವಾದ ಮತ್ತು ಕಳವಳ ಹುಟ್ಟಿಸುವ ಸಂಗತಿಯೆಂದರೆ ಇವೆಲ್ಲವೂ  ಪ್ರಕರಣದ ತನಿಖೆಯನ್ನು ನಡೆಸಿದ ನ್ಯಾಷನಲ್ ಇನ್‌ವೆಸ್ಟಿಗೇಷನ್ ಏಜೆನ್ಸಿ (ಎನ್‌ಐಎ) ಮೇಲೆ ಮಾಡಬಹುದಾದ ಪ್ರಭಾವ. ಈ ಕುರಿತು ಎನ್‌ಐಎ ನ್ಯಾಯಾಲಯವು ಮಾಡಿರುವ ಟಿಪ್ಪಣಿಯಲ್ಲೂ ಇದು ವ್ಯಕ್ತಗೊಂಡಿದೆ. ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಾ ಸರ್ಕಾರವು ಮಂಡಿಸಿದ ಸಾಕ್ಷ್ಯಗಳಲ್ಲಿ ತಪ್ಪಿಸಿಕೊಳ್ಳಲು ಬೇಕಾದ ಅಪಾರ ಅವಕಾಶಗಳಿದ್ದು ಸಂದೇಹಾಸ್ಪದವಲ್ಲದ ಸಾಕ್ಷ್ಯ-ಪುರಾವೆಗಳ ಕೊರತೆಯಿಂದಾಗಿಯೇ ಒಂದು ಅಮಾನುಷ ಹಿಂಸಾತ್ಮಕ ಕೃತ್ಯವು ಶಿಕ್ಷೆಯಿಂದ ಪಾರಾಗುತ್ತಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ತಮಗಾಗಿರುವ ಆಳವಾದ ನೋವು ಮತ್ತು ಸಂಕಟವನ್ನೂ ಸಹ ಆ ನ್ಯಾಯಾಧೀಶರು ತಮ್ಮ ತೀರ್ಮಾನವನ್ನು ಘೋಷಿಸುವ ಮುನ್ನ ದಾಖಲಿಸಿದ್ದಾರೆ.

ಬಿಡುಗಡೆಯಾದ ನಾಲ್ವರಲ್ಲಿ ಒಬ್ಬರು ೨೦೦೭ರ ಅಕ್ಟೋಬರ್‌ನಲ್ಲಿ ನಡೆದ ಅಜ್ಮೀರ್ ಸ್ಪೋಟ ಪ್ರಕರಣದಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯದಿಂದ ೨೦೧೮ರಲ್ಲಿ ದೋಷಮುಕ್ತರಾದ ಮತ್ತು ಏಳು ಜನರನ್ನು ಬಲಿ ತೆಗೆದುಕೊಂಡ ೨೦೦೭ರ ಮೇ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆದ ಮೆಕ್ಕಾ ಮಸ್ಜೀದ್ ಸ್ಫೋಟ ಪ್ರಕರಣದಲ್ಲಿ ಹೈದರಾಬಾದ್ ಕೋರ್ಟಿನಲ್ಲಿ ದೋಷ ಮುಕ್ತರಾಗಿದ್ದ ನಭಾ ಕುಮಾರ್ ಅಲಿಯಾಸ್ ಸ್ವಾಮಿ ಅಸೀಮಾನಂದ ಕೂಡಾ ಒಬ್ಬರು. ಈ ಎರಡೂ ಪ್ರಕರಣಗಳಲ್ಲೂ ತನಿಖೆ ನಡೆಸಿದ್ದು ಎನ್‌ಐಎನೇ ಆಗಿತ್ತು ಮತ್ತು ಎರಡೂ ಪ್ರಕರಣಗಳಲ್ಲಿ ಸರ್ಕಾರಿ ಅಭಿಯೋಜನೆಯು ಸರಿಯಾದ ಸಾಕ್ಷ್ಯ ಪುರಾವೆಗಳನ್ನು ಒದಗಿಸದಿದ್ದ ಕಾರಣದಿಂದಲೇ ಆರೋಪಿಗಳು ದೋಷ ಮುಕ್ತರಾದರು. ಹೈದರಾಬಾದಿನ ಪ್ರಕರಣದಲ್ಲಂತೂ ಪೊಲೀಸರು ಮೊದಲು ಹಲವು ಅಮಾಯಕ ಮುಸ್ಲಿಮರನ್ನು ಬಂಧಿಸಿದ್ದರು. ಆ ನಂತರ ಅವರನ್ನು ಬಿಡುಗಡೆ ಮಾಡಲಾಯಿತಾದರೂ ಅದಕ್ಕೆ ಮುನ್ನ ಪೊಲೀಸ್ ಕಸ್ಟಡಿಯಲ್ಲಿ ಅವರೆಲ್ಲರಿಗೂ ಸಾಕಷ್ಟು ಚಿತ್ರಹಿಂಸೆಯನ್ನು ಕೊಡಲಾಗಿತ್ತು. ಮಹಾರಾಷ್ಟ್ರದಲ್ಲಿ ೨೦೦೬ರಲ್ಲಿ ನಡೆದ ಮಾಲೆಗಾಂವ್ ಸ್ಪೋಟ ಪ್ರಕರಣದ ವಿಚಾರಣೆಯನ್ನು ಎನ್‌ಐಎ ಮಡದಿದ್ದರೂ ಅದೂ ಕೂಡಾ  ಇದೇ ದಾರಿಯನ್ನು ಹಿಡಿಯಿತು.

ಭಾರತದಲ್ಲಿರುವ ಮುಸ್ಲಿಮ್ ಸಮುದಾಯಕ್ಕೆ ಭಾರತದ ತನಿಖಾ ಏಜೆನ್ಸಿಗಳ ಮೇಲೆ ದಿನೇದಿನೇ ವಿಶ್ವಾಸ ಕುಸಿಯುತ್ತಿದೆಯೆಂದು ಬಹಳ ಕಾಲದಿಂದ ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು ಮತ್ತು ಪ್ರಗತಿಪರ ಧೋರಣೆಯುಳ್ಳ ಮಾಧ್ಯಮಗಳು ಎಚ್ಚರಿಸುತ್ತಾ ಬಂದಿದ್ದಾರೆ. ಬಾಬ್ರಿ ಮಸೀದಿಯನ್ನು ಕೆಡವಿದ ನಂತರದಲ್ಲಿ ೧೯೯೨-೯೩ರಲ್ಲಿ ಮುಂಬೈನಲ್ಲಿ ನಡೆದ ಕೋಮು ಗಲಭೆಗಳಿಂದ ಹಿಡಿದು ಆ ನಂತರದಲ್ಲಿ ನಡೆದ ಹಲವಾರು ಭಯೋತ್ಪಾದನಾ ಪ್ರಕರಣಗಳಲ್ಲಿ ಮತ್ತು ಕೋಮು ದಂಗೆಗಳಲ್ಲಿ ತಮ್ಮ ಸಮುದಾಯವನ್ನು ರಾಕ್ಷಸರಂತೆ ಚಿತ್ರಿಸುತ್ತಾ ತಮ್ಮ ಯುವಕರನ್ನು ವಿನಾಕಾರಣ ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆಯೆಂದು ಮುಸ್ಲಿಂ ಸಮುದಾಯವು ಸ್ಪಷ್ಟವಾಗಿ ಭಾವಿಸುತ್ತಿದೆ. 

ಎಲ್ಲಕ್ಕಿಂತ ಮುಖ್ಯವಾಗಿ ಈ ಎಲ್ಲಾ ಪ್ರಕರಣಗಳಲ್ಲಿ ಮತ್ತು ಹಾಲೀ ಸಂಝೋತಾ ಸ್ಪೋಟ ಪ್ರಕರಣಗಳಲ್ಲಿ ಸತ್ಯವೇನೆಂದು ತಿಳಿಯುವ ಸಾರ್ವಜನಿಕರ ಹಕ್ಕು ಬಲಿಯಾಗುತ್ತಿದೆ. ಹೀಗಾಗಿ ಕೆಲವು ಸರಳವಾದ ಆದರೆ ಘನಗಂಭೀರವಾದ ಕೆಲವು ಪ್ರಶ್ನೆಗಳನ್ನು ಕೇಳಲೇಬೇಕಾಗುತ್ತದೆ: ೬೮ ಭಾರತೀಯ ಹಾಗೂ ಪಾಕಿಸ್ತಾನೀಯರನ್ನು ಬಲಿ ತೆಗೆದುಕೊಂಡ ಆ ಬಾಂಬನ್ನು ಸ್ಪೋಟಗೊಳಿಸಿದವರು ಯಾರು? ಭಾರತ ಮತ್ತು ಪಾಕಿಸ್ತಾನಗಳು ಯಾವ ಕಾರಣಕ್ಕೂ ಯಾವುದೇ ರೀತಿಯ ಒಪ್ಪಂದಕ್ಕೆ ಬರಬಾರದೆಂಬ ಹಾಗು ಸದಾ ಪರಸ್ಪರ ಕಚ್ಚಾಡುತ್ತಲೇ ಇರಬೇಕೆಂಬ ಬಲವಾಗಿ ಬಯಸುತ್ತಿದ್ದವರು ಯಾರು? ಸಂಝೋತಾ ಎಕ್ಸ್‌ಪ್ರೆಸ್ ಎಂಬ ಹೆಸರೇ ಸೂಚಿಸುವಂತೆ ಅದೊಂದು ಅನುಸಂಧಾನದಿಂದ ರೂಪುಗೊಂಡ ಸೇವೆಯಾಗಿದ್ದು ಎರಡೂ ದೇಶಗಳ ನಾಗರಿಕರು ಪರಸ್ಪರರನ್ನು ಭೇಟಿಯಾಗಲು ಅನುವು ಮಾಡಿಕೊಡುತ್ತಿತ್ತು. ಆದರೆ ಈ ಸ್ಪೋಟವು ಅಪಾರವಾದ ಪ್ರಾಣಹಾನಿಗೆ ಕಾರಣವಾದದ್ದು ಮಾತ್ರವಲ್ಲದೆ ಎರಡೂ ದೇಶಗಳ ನಡುವೆ ಮತ್ತಷ್ಟು ಕಹಿ ಏರ್ಪಡಲೂ ಕಾರಣವಾಯಿತು. ಅದರೆ ಅದರ ಬಗ್ಗೆ ನಡೆದ ತನಿಖೆಯಾಗಲೀ, ನೀಡಲಾಗಿರುವ ನ್ಯಾಯಾದೇಶವಾಗಲೀ ಸ್ಪೋಟದಲ್ಲಿ ಬಲಿಯಾದವರ ಕುಟುಂಬಗಳಿಗೆ ಕನಿಷ್ಟ ಸಾಂತ್ವನವನ್ನು ಒದಗಿಸಲೂ ಸಾಧ್ಯವಾಗಿಲ್ಲ. ಬದಲಿಗೆ ಪಾಕಿಸ್ತಾನವು ಈ ಸಂದರ್ಭವನ್ನು ಬಳಸಿಕೊಂಡು ಭಾರತದ ಕೋರ್ಟುಗಳು ವಿಶ್ವಾಸಾರ್ಹವಲ್ಲವೆಂದು ಹೇಳುತ್ತಾ ತನ್ನ ಕೋರ್ಟುಗಳನ್ನು ಮಾತ್ರ ಹೀಗೆಳೆಯುವ ಭಾರತದ್ದು ಆಷಾಢಭೂತಿತನವೆಂದು ಟೀಕಿಸುವ ಮಟ್ಟಕ್ಕೆ ಹೋಗಿದೆ. 

ಕಳೆದ ಕೆಲವು ವರ್ಷಗಳಿಂದ ಎನ್‌ಐಎಯು ಹಿಂದೂತ್ವ ಭಯೋತ್ಪಾದನೆಯ ಆರೋಪಿಗಳ ಬಗ್ಗೆ ಮೃದು ನಿಲುವನ್ನು ತಳೆಯುತ್ತಿದೆಯೆಂಬ ಹಲವಾರು ಆರೋಗಳು ಭಾರತದೊಳಗೂ ಕೇಳಿಬರುತ್ತಿದೆ. ಎನ್‌ಐಎಯ ವಿಚಾರಣಾ ಕೌಶಲ್ಯದ ಬಗ್ಗೆ ಕೋರ್ಟು ಮಾಡಿರುವ ಟೀಕೆಗಳು ಈ ಆರೋಪವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಅದಕ್ಕಿರುವ ಪ್ರಧಾನ ಪಾತ್ರದಿಂದಾಗಿ ಭಾರತದ ಎಲ್ಲಾ ನಾಗರಿಕರು ಆ ಂಸ್ಥೆಯನ್ನು ಒಂದು ವೃತ್ತಿಪರ ಮತ್ತು ಪರಿಣಾಮಕಾರಿ ತನಿಖಾ ಸಂಸ್ಥೆಯೆಂದು ಕಾಣುವಂತೆ ನಡೆದುಕೊಳ್ಳುವ ಅಗತ್ಯವಿದೆ. ಸಂಝೋತಾ ಸ್ಫೋಟವಾದ ನಂತರದ ಕಳೆದ ೧೨ ವರ್ಷಗಳಲ್ಲಿ ೨೨೪ ಸಾಕ್ಷಿಗಳಲ್ಲಿ ೫೧ ಸಾಕ್ಷಿಗಳು ವ್ಯತಿರಿಕ್ತ (ಹಾಸ್ಟೈಲ್) ಸಾಕ್ಷಿಗಳಾಗಿ ಉಲ್ಟಾ ಹೊಡೆದರು. ಹಾಗೂ ಪ್ರಮುಖ ಆರೋಪಿಯೊಬ್ಬg ಕೊಲೆಯಾತು. ಇದರ ತನಿಖೆಗಾಗಿ ನಿಯುಕ್ತಗೊಂಡ ವಿಶೇಷ ತನಿಖಾ ದಳದ (ಎಸ್‌ಐಟಿ-ಸಿಟ್) ಮುಖ್ಯಸ್ಥರಾಗಿ ತನಿಖೆಯ ನೇತೃತ್ವ ವಹಿಸಿ ಈಗ ನಿವೃತ್ತರಾಗಿರುವ ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಸ್ಪೋಟಕ್ಕೆ ಕಾರಣರಾದ ಹಿಂದೂತ್ವ ಉಗ್ರಗಾಮಿಗಳ ಬಗ್ಗೆ ಬಲವಾದ ಸಾಕ್ಷ್ಯಗಳಿತ್ತೆಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ. ಈ ಆದೇಶದ ವಿರುದ್ಧವಾಗಿ ಮೇಲ್ಮವಿಯನ್ನೂ ಸಲ್ಲಿಸುವುದಿಲ್ಲ ಮತ್ತು ಸ್ಪೋಟದ ಬಗ್ಗೆ ಹೊಸ ತನಿಖೆಯನ್ನೂ ಮಾಡುವುದಿಲ್ಲವೆಂದು ಕೇಂದ್ರದ ಗೃಹ ಮಂತ್ರಿ ಹೇಳಿರುವುದಾಗಿ ವರದಿಯಾಗಿದೆ.

ಪರಿಸ್ಥಿತಿ ಹೀಗಿರುವಾಗ ಈ ಪ್ರಕರಣದ ಬಗ್ಗೆ ಯಾವುದೇ ಚರ್ಚೆಯನ್ನು ಮಾಡಲೂ ಮುಂದಾಗದ ಸರ್ಕಾರದ ಕ್ರಮವನ್ನು ಟೀಕಿಸುವವರು ಗೋಧ್ರಾ ರೈಲು ದಹನ ಪ್ರಕರಣದಲ್ಲಿರುವ ಮುಸ್ಲಿಂ ಆರೋಪಿತರ ಬಗ್ಗೆ ಮಾತ್ರ ಶೀಘ್ರಗತಿಯ ವಿಚಾರಣೆ ಮತ್ತು ನ್ಯಾಯಾತೀರ್ಮಾನಗಳಾಗುತ್ತಿರುವ ಕಡೆಗೆ ಬೊಟ್ಟುಮಾಡಿ ತೋರಿಸುತ್ತಾರೆ. ಹಾಗೆಯೇ ೧೯೯೨-೯೩ರ ಮುಂಬೈ ಗಲಭೆಯಲ್ಲಿ ಪ್ರಧಾನ ನಿಂದಿತರಾಗಿರುವ ಪೊಲೀಸರು ಮತ್ತು ಹಿಂದೂ ಆರೋಪಿಗಳಿರುವ ಪ್ರಕರಣದ ಗತಿಯನ್ನು ಪ್ರಧಾನವಾಗಿ ಮುಸ್ಲಿಮರೇ ಆರೋಪಿಗಳಾಗಿರುವ ೧೯೯೩ರಲ್ಲಿ ನಡೆದ ಬಾಂಬೆ ಸ್ಪೋಟ ಪ್ರಕರಣಕ್ಕೂ ಹೋಲಿಕೆ ಮಾಡಿ ನೋಡಬಹುದಾಗಿದೆ.

ತನ್ನ ಲಕ್ಷ್ಯ ಮತ್ತು ಉದ್ದೇಶಗಳಲ್ಲಿ ಎನ್‌ಐಎ ಯು ಈ ಮಹತ್ತರ ಗುರಿಗಳನ್ನು ಘೋಷಿಸಿಕೊಂಡಿದೆ: ನಿಸ್ವಾರ್ಥ ಮತ್ತು ನಿರ್ಭೀತ ಪ್ರಯತ್ನಗ ಮೂಲಕ ಭಾರತದ ನಾಗರಿಕರ ವಿಶ್ವಾಸವನ್ನು ಗೆದ್ದುಕೊಳ್ಳುವುದು. ಆದರೆ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಎನ್‌ಐಎ ಯು ಅಂಥಾ ವಿಶ್ವಾಸವನ್ನು ಮರಳಿ ಗೆದ್ದುಕೊಳ್ಳಬೇಕಿದೆ ಮತ್ತು ಸರ್ಕಾರವು ಅದನ್ನು ಖಾತರಿಗೊಳಿಸುವಂಥಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.

 

Back to Top