ಲಿಂಗಾಂತರಿ ಮಸೂದೆಯಲ್ಲಿರುವ ಕೊರತೆಗಳು
ಲಿಂಗಾಂತರಿ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಅವರ ಸಾಮಾಜಿಕ ಕಲ್ಯಾಣ ಮತ್ತು ಭದ್ರತೆಗಳನ್ನು ಖಾತರಿಗೊಳಿಸುವ ಸಕಾರಾತ್ಮಕ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳುವ ಅಗತ್ಯವಿದೆ.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗ (ನ್ಯಾಷನಲ್ ಹ್ಯೂಮನ್ ರೈಟ್ಸ್ ಕಮಿಹನ್- ಎನ್‌ಎಚ್‌ಆರ್‌ಸಿ)ವು ಪ್ರಪ್ರಥಮ ಭಾರಿಗೆ ದೇಶಾದ್ಯಂತ ಲಿಂಗಾಂತರಿ ಸಮುದಾಯಗಳ ಒಂದು ಸರ್ವೆಯನ್ನು ನಡೆಸಿತು ಮತ್ತು ಆ ಸಮುದಾಯಕ್ಕೆ ಸೇರಿದ ಶೇ.೯೨ರಷ್ಟು ಜನರು ಆರ್ಥಿಕವಾಗಿ ದೂರೀಕರಿಸಲ್ಪಟ್ಟಿದ್ದಾರೆ ಎಂಬುದನ್ನು ಕಂಡುಕೊಂಡಿತು. ನಾವೊಂದು ಆಧುನಿಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂಬ ಹೆಗ್ಗಳಿಕೆಯ ಜೊತೆಜೊತೆಗೆ ಒಂದಿಡೀ ಸಮುದಾಯವನ್ನು ವ್ಯವಸ್ಥಿತವಾಗಿ ಹೊರಗಿಟ್ಟಿರುವುದು ಮತ್ತು ಜೀವನೋಪಾಯಗಳಿಗೆ ಸಂಬಂಧಪಟ್ಟ ಮೂಲಭೂತ ಹಕ್ಕುಗಳನ್ನೂ ನಿರಾಕರಿಸಿರುವುದು ಒಂದು ದೊಡ್ಡ ಅಸಂಗತವಾದ ವಿದ್ಯಮಾನವಾಗಿದೆ. ಈ ಸಮುದಾಯಗಳ ಇತರ ಎಲ್ಲಾ ಉದ್ಯೋಗಾವಕಾಶಗಳು ಸಾಮಾಜಿಕವಾಗಿ ನಿರ್ಬಂಧಿತವಾಗಿರುವುದರಿಂದ ಬಹಳಷ್ಟು ಸಾರಿ ಅವರು ಅನಿವಾರ್ಯವಾಗಿ ಅಥವಾ ಬಲವಂತವಾಗಿ ಭಿಕ್ಷೆ ಅಥವಾ ವೇಶ್ಯಾವಾಟಿಕೆಯ ವೃತ್ತಿಗೆ ದೂಡಲ್ಪಡುತ್ತಾರೆ. ಲಿಂಗಾಂತರಿ ಸಮುದಾಯಗಳು ಎದುರಿಸುತ್ತಿರುವ ಪ್ರಾಥಮಿಕ ಬಿಕ್ಕಟ್ಟೆಂದರೆ ಅವರ ಲೈಂಗಿಕ ನಾಗರಿಕತ್ವದ ನಿರಾಕರಣೆ. ಎನ್‌ಎಚ್‌ಆರ್‌ಸಿ ಯ ಅಂಕಿಅಂಶಗಳು ಹೇಳುವಂತೆ ಶೇ.೯೯gಷ್ಟು ಲಿಂಗಾಂತರಿಗಳು ಸಮಾಜದಿಂದ ತಿರಸ್ಕಾರಕ್ಕೊಳಪಡುತ್ತಾರೆ. ಅಲಕ್ಷಿತ ಸಮುದಾಯಗಳಲ್ಲೇ ಈ ಲಿಂಗಾಂತರಿ ಸಮುದಾಯಗಳು ಅತ್ಯಂತ ವಿಲಕ್ಷಣ ವಿವಕ್ಷತೆಗೆ ಗುರಿಯಾಗುತ್ತಾ ಲೈಂಗಿಕ ಹಿಂಸೆಗೆ ಮತ್ತು ವೈದ್ಯಕೀಯ ನಿರ್ಲಕ್ಷ್ಯಕ್ಕೆ ತುತ್ತಾಗುತ್ತಾರೆ. ಅವರ ದೇಹ ರಚನೆಯ ಬಗ್ಗೆಯೇ ಒಂದು ಕಳಂಕಿತ ಧೋರಣೆ ಸಮಾಜದಲ್ಲಿರುವುದರಿಂದ ಲಿಂಗಾಂತರಿ ಸಮುದಾಯಗಳು ಇತರ ಸ್ತ್ರೀ-ಪುರುಷರಂತೆ ಸಾರ್ವಜನಿಕ ಸ್ಥಳಗಳಲ್ಲಿರುವಂತೆಯೂ ಇಲ್ಲ ಅಥವಾ ಇತರರಿಗೆ ಸಿಗುವ ಮರ್ಯಾದೆಯೂ ಅವರಿಗೆ ದೊರೆಯುವುದಿಲ್ಲ. ಅವರಲ್ಲಿ ಬಹಳಷ್ಟು ಜನರು ಕುಟುಂಬದಿಂದ ಹೊರಬಂದಿರುತ್ತಾರೆ. ಆದ್ದರಿಂದ ಸಾಮಾಜಿಕ ಮಾನ್ಯತೆಯನ್ನು ದೊರಕಿಸುವ ಅತ್ಯಂತ ಪ್ರಾಥಮಿಕ ನೆಲೆಯೂ ಅವರಿಗಿರುವುದಿಲ್ಲ. ರಾಷ್ಟ್ರೀಯ ಅಯೋಗದ ಸರ್ವೇ ತಿಳಿಸಿಕೊಡುವಂತೆ ಕೇವಲ ಶೇ.೨ರಷ್ಟು ಲಿಂಗಾಂತರಿಗಳು ಮಾತ್ರ ಅವರ ಕುಟುಂಬಗಳ ಜೊತೆ ವಾಸಿಸುತ್ತಾರೆ.
೨೦೧೪ರ ಲಿಂಗಾಂತರಿ ವ್ಯಕ್ತಿಗಳ ಪರಿರಕ್ಷಣಾ ಕಾಯಿದೆಯು ಇವುಗಳನ್ನು ತಿದ್ದಿಕೊಳ್ಳುವ ಮತ್ತು ಆ ಸಮುದಾಯಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಡುವ ದಿಕ್ಕಿನಲ್ಲಿ ಮಾಡಿದ ಪ್ರಯತ್ನವಾಗಿದೆ. ಕಳೆದ ಆಗಸ್ಟಿನಲ್ಲಿ ಈ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯು ನಡೆದಿದ್ದು ಮೂಲ ಮಸೂದೆಯು ಹಲವಾರು ರೂಪಾಂತರಗಳನ್ನು ಕಂಡಿದೆ. ಈ ಸದ್ಯಕ್ಕೆ ಮಶೂದೆಯು ಇರುವ ಸ್ವರೂಪವನ್ನು ಪರಿಶೀಲಿಸಿದಲ್ಲಿ ಸಬಂಧಪಟ್ಟ ಸ್ಥಾಯಿ ಸಮಿತಿಯು ಈ ವಿಷಯದ ಬಗ್ಗೆ ೨೦೧೭ರಲ್ಲಿ ಮಾಡಿದ ಎರಡು ಪ್ರಮುಖ ಶಿಫಾರಸ್ಸುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಮೊದಲನೆಯದು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಲಿಂಗಾಂತರಿ ಸಮುದಾಯಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಶಿಫಾರಸ್ಸು. ಈ ಬಗೆಯ ಸಕಾರಾತ್ಮಕ ಕ್ರಮಗಳ ಮೂಲಕ ಮಾತ್ರ ಲಿಂಗಾಂತರಿ ಸಮುದಾಯವು ಸಮಾಜದಲ್ಲಿ ಎದುರಿಸುತ್ತಿರುವ ಆರ್ಥಿಕ ಹೊರದೂಡುವಿಕೆಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸುವಂತೆ ಮಾಡಬಹುದು.
ಎರಡೆನೆಯ ಶಿಫಾರಸ್ಸು ಲಿಂಗಾಂತರಿ ಸಮುದಾಯಗಳಿಗೆ ಮದುವೆ ಮತ್ತು ಪಾಲುದಾರಿಕೆ ಹಕ್ಕುಗಳನ್ನು ಶಾಸನಾತ್ಮಕವಾಗಿ ಮಾನ್ಯ ಮಾಡುವ ಶಿಫಾರಸ್ಸು. ಕೇವಲ ಎರಡು ಬಗೆಯ ಲಿಂಗ ವ್ಯತ್ಯಾಸಗಳನ್ನು ಮಾತ್ರ ಪರಿಗಣಿಸುವ ಸಮಾಜವೊಂದರಲ್ಲಿ ಇದೊಂದು ಕಷ್ಟ ಸಾಧ್ಯವಾದ ಉಪಕ್ರಮ. ಭಾರತೀಯರು ತಮ್ಮ ಸಾಮಾಜಿಕ-ಸಾಂಸ್ಕೃತಿಕ ವಾಸ್ತವವಗಳನ್ನು ನಿರ್ವಚಿಸಿಕೊಳ್ಳುವಲ್ಲಿ ಸ್ತ್ರೀ-ಪುರುಷವೆಂಬ ದ್ವಿಲಿಂಗ ವಾಸ್ತವಕ್ಕೆ ಮಾತ್ರ ಕಟ್ಟುಬಿದ್ದಿದ್ದಾರೆ. ಲಿಂಗಾಂತರಿ ಸಮುದಾಯವು ಎದುರಿಸುವ ಸಾಮಾಜಿಕ ನಿಷೇಧದ ಮೂಲ ಸಮಾಜದಲ್ಲಿರುವ ಈ ಲೈಂಗಿಕ ದ್ವಿತ್ವದ ಯಾಜಮಾನಿಕೆಯಲ್ಲಿದೆ. ವಾಸ್ತವದಲ್ಲಿ ಈ ಮಸೂದೆಯ ಮೊದಲ ಕರಡಿನಲ್ಲಿ ಲಿಂಗಾಂತರಿಗಳು ಯಾರೆಂದು ಮಾಡಿದ್ದ ನಿರ್ವಚನದ ಬಗ್ಗೆಯೇ ಆ ಸಮುದಾಯಕ್ಕೆ ತೀವ್ರ ಆಕ್ಷೇಪವಿತ್ತು. ಅದರ ಪ್ರಕಾರ ಲಿಂಗಾಂತರಿಯೆಂದರೆ ಗಂಡಸೂ ಅಲ್ಲದ ಹೆಂಗಸೂ ಅಲ್ಲದ ವ್ಯಕ್ತಿ. ಇಂಥಾ ನಿರ್ವಚನವೂ ಕೇವಲ ಅವಹೇಳನಕಾರಿ ಮಾತ್ರವಲ್ಲದೆ ಸಮಾಜದಲ್ಲಿ ಒಪ್ಪಿತ ರೂಢಿಯಾಗಿ ಬಂದಿರುವ ಲೈಂಗಿಕ ದ್ವಿತದ ಮೂಲಕ ಮಾತ್ರ ಜಗತ್ತನ್ನು ನೋಡುವ ಮತ್ತು ಲಿಂಗಾಂತರಿಗಳೆಂದರೆ ಯಾವುದೋ ಸಮಾಜ ಮಾನ್ಯ ಮಾಡಿದ ಲಿಂಗವಲ್ಲವೋ ಅದು ಎಂಬಂತೆ ನಕಾರಾತ್ಮಕ ಮಾನದಂಡಗಳ ಮೂಲಕ ನಿರ್ವಚಿಸುವ ರೀತಿಯದ್ದಾಗಿದೆ. ಅದೃಷ್ಟವಶಾತ್ ಆ ಮಸೂದೆಯ ಇತ್ತೀಚಿನ ಕರಡಿನಲ್ಲಿ ಆ ನಿರ್ವಚನಕ್ಕೆ ಸಮಾಧಾನಕರ ತಿದ್ದುಪಡಿಯನ್ನು ಮಾಡಿದ್ದು ಲಿಂಗಾಂತರಿ ವ್ಯಕ್ತಿ ಯಾರೆಂದರೆ ಹುಟ್ಟಿನಿಂದ ನೀಡಲ್ಪಟ್ಟ ಲಿಂಗ ಗುರುತಿಗೆ ತಕ್ಕಂತೆ ಯಾವ ವ್ಯಕ್ತಿಯ ಲಿಂಗ ಸ್ವಭಾವವು ಹೊಂದಾಣಿಕೆಯಾಗುವುದಿಲ್ಲವೋ ಅಂಥ ವ್ಯಕ್ತಿ ಎಂದು ನಿರ್ವಚನ ಮಾಡುತ್ತದೆ.
ಲಿಂಗಾಂತರಿ ವ್ಯಕ್ತಿಗಳನ್ನು ಬೇಕಾಬಿಟ್ಟಿಯಾಗಿ ಬಂಧಿಸುವಂಥ ಹಲವಾರು ಕಾನೂನುಗಳು ಈಗಾಗಲೇ ಅಸ್ಥಿತ್ವದಲ್ಲಿವೆ. ಭಿಕ್ಷಾಟನಾ ವಿರೋಧಿ ಕಾನೂನುಗಳು ಅಂಥ ಕಾನೂನುಗಳಲ್ಲಿ ಒಂದು. ಲಿಂಗಾಂತರಿ ವ್ಯಕ್ತಿಗಳಿಗೆ ಮೀಸಲಾತಿಯನ್ನು ನೀಡಿ ಆರ್ಥಿಕ ಭದ್ರತೆಯನ್ನು ಒದಗಿಸುವುದು ಇದನ್ನು ಪ್ರತಿಘಟಿಸಬಹುದಾದ ಒಂದು ವಿಧಾನ. ಲಿಂಗಾಂತರಿ ವ್ಯಕ್ತಿಗಳಿಗೆ ಕಿರುಕುಳ ನೀಡಲು ಬಹಳಷ್ಟು ಸಾರಿ ಅನೈಸರ್ಗಿಕ ಲೈಂಗಿಕ ಕ್ರಿಯೆಯನ್ನು ಪ್ರತಿಬಂಧಿಸುವ ಭಾರತೀಯ ದಂಡ ಸಂಹಿತೆಯ ೩೭೭ ನೇ ಕಲಮನ್ನು ಬಳಸಲಾಗುತ್ತದೆ. ಎಲ್ಲಿಯತನಕ ಭಾರತದ ದಂಡ ಸಂಹಿತೆಯಲ್ಲಿ ಈ ೩೭೭ನೇ ಕಲಮು ಅಸ್ಥಿತ್ವದಲ್ಲಿರುತ್ತದೋ ಅಲ್ಲಿಯವರೆಗೆ ಲಿಂಗಾಂತರಿ ಸಮುದಾಯವು ಸದಾ ಬಂಧನದ ಭೀತಿಯಲ್ಲೇ ಬದುಕಬೇಕಾಗುತ್ತದೆ. ಹೀಗಾಗಿ ಈ ಸಮುದಾಯದ ಲೈಂಗಿಕ ಅನನ್ಯತೆ ಮತ್ತು ಲೈಂಗಿಕ ಹಕ್ಕುಗಳನ್ನು ಕಾಪಾಡುವ ನಿರ್ದಿಷ್ಟ ಕಾನೂನೊಂದರ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಲಿಂಗಾಂತರಿ ಸಮುದಾಯದ ಮದುವೆ ಮತ್ತು ಪಾಲುದಾರಿಕೆ ಹಕ್ಕುಗಳನ್ನು ಖಾತರಿಗೊಳಿಸುವ ಸ್ಥಾಯಿ ಸಮಿತಿಯ ಎರಡನೇ ಶಿಫಾರಸ್ಸು ಮಸೂದೆಯಲ್ಲಿ ಸೇರ್ಪಡೆಯಾಗುವುದು ಅತ್ಯಗತ್ಯವಾಗಿದೆ. ಅದೇ ರೀತಿ ಯಾವ ನಿರ್ದಿಷ್ಟ ನಡೆಗಳು ಲಿಂಗಾಂತರಿ ವ್ಯಕ್ತಿಗೆ ಮಾಡುತ್ತಿರುವ ತಾರತಮ್ಯವೆಂದು ಪರಿಗಣಿತವಾಗುತ್ತದೆ ಎಂಬುದನ್ನು ಮಸೂದೆಯು ಸರಿಯಾಗಿ ಸ್ಪಷ್ಟಪಡಿಸುವುದಿಲ್ಲ. ಹೀಗೆ, ಈ ಮಸೂದೆಯನ್ನು ಒಟ್ಟಾರೆಯಾಗಿ ಪ್ರಗತಿಪರ ಮಸೂದೆಯೆಂದು ಪರಿಗಣಿಸುತ್ತಿದ್ದರೂ ಅದು ಲಿಂಗಾಂತರಿ ವ್ಯಕ್ತಿಗಳ ಲೈಂಗಿಕ ನಾಗರಿಕತ್ವವನ್ನು ಕೊಡಮಾಡುವ ಕೇಂದ್ರ ಸಮಸ್ಯೆಯನ್ನು ನಿವಾರಿಸುವಲ್ಲಿ ಇನ್ನೂ ಸಫಲವಾಗಿಲ್ಲ.
ಭಾರತದಲ್ಲಿ ಲಿಂಗಾಂತರಿ ಸಮುದಾಯಗಳ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಯಾವುದೇ ಶಾಸನಗಳು ತಮಿಳುನಾಡಿನ ಮೇಲ್ಪಂಕ್ತಿಯನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ೨೦೦೪ರಲ್ಲಿ ಲಿಂಗಾಂತರಿಗಳ ಯೋಗಕ್ಷೇಮಕ್ಕೆಂದೇ ತಮಿಳುನಾಡು ಒಂದು ಪ್ರತ್ಯೇಕ ನಿಗಮವನ್ನು ಸ್ಥಾಪಿಸಿತು. ರಿಯಾಯತಿ ದರದ ವಸತಿ ಸೌಕರ್ಯ, ವೃತ್ತಿ ಕೌಶಲ್ಯ ತರಬೇತಿ ಕೇಂದ್ರಗಳ ಸ್ಥಾಪನೆಯಂಥ ಮೂಲಭೂತ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಸರ್ಕಾರದ ನಿರ್ದಿಷ್ಟ ಆಸ್ಪತ್ರೆಗಳಲ್ಲಿ ಉಚಿತ ಲಿಂಗ ಹೊಂದಾಣಿಕಾ ಶಸ್ತ್ರಚಿಕಿತ್ಸಾ ಸೌಲಭ್ಯಗಳನ್ನೂ ಸಹ ಸರ್ಕಾರ ಒದಗಿಸಿತು. ಲಿಂಗ ಹೊಂದಾಣಿಕೆಯ ಶಸ್ತ್ರ ಚಿಕಿತ್ಸೆಗಳಿಗೆ ೨೦೧೮ರಿಂದ ತಲಾ ೨ ಲಕ್ಷ ರೂಗಳನ್ನು ಒದಗಿಸುವ ಮೂಲಕ ಕೇರಳವು ಅಂಥಾ ಸೌಲಭ್ಯವನ್ನು ಒದಗಿಸುವ ಭಾರತದ ಎರಡನೇ ರಾಜ್ಯವಾಯಿತು. ಲಿಂಗಾಂತರಿ ಸಮುದಾಯಗಳಿಗೆ ಸರಿಯಾದ ಆರೋಗ್ಯ ಸೇವೆಯನ್ನು ಒದಗಿಸಲು ಮತ್ತು ವೈದ್ಯರುಗಳು ಮಾಡುವ ಮೋಸ ಮತ್ತು ಶೋಷಣೆಯಿಂದ ಪಾರು ಮಾಡಲು ಭಾರತದಲ್ಲಿ ಲಿಂಗಾಂತರಿಗಳಿಗೆ ಸರ್ಕಾರದಿಂದ ಇಂಥಾ ಬೆಂಬಲವು ತುರ್ತಾಗಿ ದೊರಕಬೇಕಿದೆ.
ಒಟ್ಟಾರೆಯಾಗಿ ಹೇಳುವುದಾದರೆ ದೈನಂದಿನ ಸಾರ್ವಜನಿಕ ಜೀವನದಲ್ಲಿ ಯಾವುದೇ ಅಳುಕಿಲದ್ದೆ ಲಿಂಗಾಂತರಿ ವ್ಯಕ್ತಿಗಳು ಬೆರೆತುಹೋಗಲು ಬೇಕಾದ ಎಲ್ಲಾ ಅವಕಾಶಗಳನ್ನು ಈ ಮಸೂದೆಯು ಒದಗಿಸಬೇಕಿದೆ. ಅದಕ್ಕೆ ತಕ್ಕಹಾಗೆ ಲಿಂಗಾಂತರಿ ವ್ಯಕ್ತಿಗಳ ಉಪಸ್ಥಿತಿಯು ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ವಾಸ ಪ್ರದೆಶಗಳಲ್ಲಿ ಸರ್ವೇ ಸಾಮಾನ್ಯವಾಗುವಂತೆ ನೋಡಿಕೊಳ್ಳುವ ಹಾಗೆ ಕಾನೂನಾತ್ಮಕ ಪ್ರಯತ್ನಗಳೂ ನಡೆಯಬೇಕು.