ISSN (Print) - 0012-9976 | ISSN (Online) - 2349-8846

ನಿರುದ್ಯೋಗ ನಿವಾರಣೆ-ಸರ್ಕಾರೀ ಕ್ರಮಗಳ ರಾಜಕೀಯ ಅಸಲಿಯತ್ತುಗಳು

ಅಸಂಘಟಿತ ಕಾರ್ಮಿಕ ಕ್ಷೇತ್ರವೆಂಬುದು ರಾಜಕೀಯ ಮಸಲತ್ತುಗಳ ಪರಿಣಾಮವೇ ವಿನಃ ಆರ್ಥಿಕ ಆಯ್ಕೆಯೇನಲ್ಲ

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸಾರ್ವಜನಿಕ ಕ್ಷೇತ್ರದಲ್ಲಿ ೨.೪ ಲಕ್ಷ ಉದ್ಯೋಗಗಳು ಭರ್ತಿಯಾಗದೇ ಖಾಲಿ ಬಿದ್ದಿವೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿವೆ. ಇದು ಉದ್ಯೋಗ ಸೃಷ್ಟಿಯ ಬಗ್ಗೆ ಕೇಂದ್ರದ ಎನ್‌ಡಿಎ ಸರ್ಕಾರ ಮಾಡಿಕೊಳ್ಳುತ್ತಿರುವ ಪ್ರಚಾರಗಳ ಬಗ್ಗೆ ಮತ್ತೊಮ್ಮೆ ವಿವಾದವನ್ನು ಸೃಷ್ಟಿಸಿದೆ. ದೇಶದ ಔಪಚಾರಿಕ ವಲಯದ ಉದ್ಯೋಗ ಸೃಷ್ಟಿಯಲ್ಲಿ ಸಾರ್ವಜನಿಕ ಕ್ಷೇತ್ರಕ್ಕೆ ಪ್ರಮುಖ ಪಾತ್ರವಿದ್ದು ಆ ಕ್ಷೇತ್ರದಲ್ಲೇ ಇಷ್ಟು ದೊಡ್ಡ ಪ್ರಮಾಣದ ಉದ್ಯೋಗಗಳು ಭರ್ತಿಯಾಗದೆ ಉಳಿದಿರುವುದು ಸರ್ಕಾರವು ಸೃಷ್ಟಿಸುತ್ತಿರುವ ಉದ್ಯೋಗಗಳ ಸ್ವರೂಪವನ್ನು ವಿವರಿಸುತ್ತವೆ. ಕಳೆದ ಒಂದು ದಶಕದಿದ ಸಾರ್ವಜನಿಕ ಕ್ಷೇತ್ರಗಳೇ ಮುಂಚೂಣಿಯಲ್ಲಿ ನಿಂತು ನಡೆಸುತ್ತಿರುವ ಉದ್ಯೋಗಗಳ ಅನೌಪಚಾರೀಕರಣದ ಬಗ್ಗೆ (ಖಾಯಂ ಉದ್ಯೋಗದ ಜಾಗದಲ್ಲಿ ಗುತ್ತಿಗೆ ಮತ್ತು ದಿನಗೂಲಿ ನೌಕರರನ್ನು ಭರ್ತಿ ಮಾಡಿಕೊಳ್ಳುತ್ತಿರುವುದು-ಅನು) ಅಪಾರ ಕಳವಳ ವ್ಯಕ್ತವಾಗುತ್ತಲೇ ಇದೆ; ಮತ್ತು ಸರ್ಕಾರವು ಇಷ್ಟು ದೊಡ್ಡ ಪ್ರಮಾಣದ ಖಾಯಂ ಉದ್ಯೋಗಗಳನ್ನು  ತನ್ನ ಹಿತ್ತಲಲ್ಲೇ ಭರ್ತಿ ಮಾಡದೆ ಬಾಕಿ ಇಟ್ಟುಕೊಂಡಿರುವುದು ಕೇಂದ್ರದ ನೀತಿಗಳು ಉದ್ಯೋಗಗಳ ಅನೌಪಚಾರೀಕರಣಕ್ಕೆ ಬೆಂಬಲ ನೀಡುತ್ತಿವೆ ಎಂಬುದನ್ನು ಸೂಚಿಸುತ್ತದೆ.

 

ಆದರೆ ಇಂದು ಕಾರ್ಮಿಕರ ಅನೌಪಚಾರೀಕರಣವು ಒಂದು ಪ್ರಧಾನ ವಿದ್ಯಮಾನವಾಗಿರುವುದರ ಹಿಂದೆ ಸರ್ಕಾರದ ನೀತಿಗಳ ಒತ್ತಾಸೆಯಿದೆಯೆಂಬುದನ್ನು ಸರ್ಕಾರ ನಿರಾಕರಿಸುತ್ತಲೇ ಬಂದಿದೆ.

ಒಂದೆಡೆ ಪರಂಪರಾನುಗತವಾಗಿ ಬಳಸಿಕೊಂಡುಬಂದಿರುವ ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸಿನ (ಎನ್‌ಎಸ್‌ಎಸ್‌ಒ) ಉದ್ಯೋಗ-ನಿರುದ್ಯೋಗ ಅಂದಾಜುಗಳ ಬದಲಿಗೆ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ- ಇಪಿಎಫ್‌ಒ) ನಿಖರವಲ್ಲದ ಮತ್ತು ನಿರಂತರವಾಗಿ ಬದಲಾಗುವ ಅಂಕಿಅಂಶಗಳನ್ನು ಬಳಸಿಕೊಳ್ಳುತ್ತಾ ಸರ್ಕಾರವು ತನಗೆ ಅನಾನುಕೂಲಕಾರಿಯಾದ ಅಂಶಗಳನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಪ್ರಧಾನಿಗಳು ಯುವಕರು ಪಕೋಡಾಗಳನ್ನು ಮಾರಿ ದಿನಕ್ಕೆ ೨೦೦ ರೂ. ಸಂಪಾದಿಸುತ್ತಿರುವುದೂ ಸಹ ಉದ್ಯೋಗ ಸೃಷ್ಟಿಯೇ ಭಾಗವೇ ಆಗಿದೆ ಎಂದು ಹೇಳುವ ಮೂಲಕ ಉದ್ಯಮಶೀಲತೆ, ಸ್ವಯಂ ಉದ್ಯೋಗ, ಮತ್ತು ಅಸಂಘಟಿತ ವೆಂಬ ಪರಿಕಲ್ಪನೆಗಳನ್ನು ಒಂದಕ್ಕೊಂದು ಸಂವಾದಿಯಾಗಿ ಬಳಸುತ್ತಿದೆ. ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಅಸಂಘಟಿತ ವಲಯವೂ ಒಂದು ಆಯ್ಕೆ ಯೆಂಬಂತ ಚಿತ್ರಣವನ್ನು ಕೊಡುತ್ತಿದೆ. ಸಣ್ಣ ವಹಿವಾಟುಗಳಲ್ಲಿರುವ ಕಡಿಮೆ ಶ್ರಮ ವಿಭಜನೆ ಮತ್ತು ಬೇಕೆಂದಾಗ ಬದಲಾಗಬಲ್ಲ ಸಡಿಲತೆಗಳಿಂದ ಹೆಚ್ಚಿನ ಆರ್ಥಿಕ ಲಾಭ ಒದಗುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಘಟಿತ ಕ್ಷೇತ್ರದಲ್ಲಿದ್ದರೆ ದೊರಕುತ್ತಿದ್ದ ಸಾಮಾಜಿಕ ಭದ್ರತೆಗಳ ಸೌಲಭ್ಯಗಳನ್ನು ಸ್ವಪ್ರೇರಣೆಯಿಂದ ಬಿಟ್ಟುಕೊಡುವಂತೆಯೂ ಮಾಡುತ್ತಿದ್ದಾರೆ. ಆದರೆ ಅಸಂಘಟಿತ ಕ್ಷೇತ್ರದಲ್ಲಿನ ಅನೌಪಚಾರಿಕ ಉದ್ಯೋಗಗಳು ಮೂಲಭೂತವಾಗಿ ಬದುಕುಳಿಯಲು ಬೇಕಾಗುವಷ್ಟು ಮಾತ್ರ ಆದಾಯವನ್ನು ತಂದುಕೊಡುವ, ಅಸ್ಥಿರವಾದ, ಅತ್ಯಂತ ಕಡಿಮೆ ಉತ್ಪಾದಕತೆಯುಳ್ಳ ಸ್ವಯಂ ಉದ್ಯೋಗಗಳೇ ಆಗಿದ್ದು ಅದನ್ನು ಉದ್ಯಮಶೀಲತೆಯೆಂದು ಕರೆಯುವುದರಲ್ಲಿ ಏನೂ ಅರ್ಥವಿಲ್ಲ. ಶಿಕ್ಷಣ ಮತ್ತು ಕೌಶಲ್ಯದ ಕೊರತೆಯೇ ಅಸಂಘಟಿತ ಕ್ಷೇತ್ರದ ಅನೌಪಚಾರಿಕ ಉದ್ಯೋಗಗಳಿಗೆ ಕಾರಣವೆಂದು ಸಮರ್ಥಿಸಿಕೊಳ್ಳಲಾಗುತ್ತದೆ. ಹಾಗಿದ್ದಲ್ಲಿ ಹೆಚ್ಚಿನ ಕೌಶಲ್ಯ ಮತ್ತು ಶಿಕ್ಷಣವನ್ನು ಬೇಡುವ ಸಂಘಟಿತ ಕ್ಷೇತ್ರದಲ್ಲೂ ಸಹ ಗುತ್ತಿಗೆ ಮತ್ತು ದಿನಗೂಲಿ ಪದ್ಧತಿಗಳನ್ನು ಜಾರಿ ಮಾಡುವ ಮೂಲಕ ಉದ್ಯೋಗಗಳನ್ನು ಏಕೆ ಅನೌಪಚಾರಿಕಗೊಳಿಸಲಾಗುತ್ತಿದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಅದರಲ್ಲೂ ಉನ್ನತ ಶಿಕ್ಷಣದಂಥ ವಿಶೇಷ ಪರಿಣಿತಿ ಬೇಡುವ ಕ್ಷೇತ್ರಗಳಲ್ಲೂ ಈಬಗೆಯ ಅನೌಪಚಾರೀಕರಣ ನಡೆಯುತ್ತಿರುವಾಗ ಈ ಪ್ರಶ್ನೆ ಇನ್ನಷ್ಟು ಕಗ್ಗಂಟಾಗುತ್ತದೆ.

ಲ್ಯಾಟಿನ್ ಅಮೆರಿಕ ಮತ್ತು ಕ್ಯಾರಿಬಿಯನ್ ದೇಶಗಳಂಥ ಅಭಿವೃದ್ಧಿಶೀಲ ದೇಶಗಳಲ್ಲಿ ತಮ್ಮ ಶಿಕ್ಷಣದ ಗುಣಮಟ್ಟಕ್ಕೆ ತಕ್ಕನಾದ ಉದ್ಯೋಗಗಳು ದೊರೆತಲ್ಲಿ ಉನ್ನತ ಕೌಶಲ್ಯ ಹೊಂದಿರುವ ಕಾರ್ಮಿಕರು ಸ್ವಪ್ರೇರಣೆಯಿಂದ ಅಸಂಘಟಿತ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಭಾರತದಲ್ಲೂ ಹೀಗೆ ಆಗುತ್ತದೆಯೇ ಎಂಬುದು ಸಂದೇಹಾಸ್ಪದ ಸಂಗತಿಯಾಗಿದೆ. ಭಾರತದ ಯುವಜನೆತಯ ಧೋರಣೆ, ಆತಂಕಗಳು ಮತ್ತು ಆಶೋತ್ತರಗಳ ಬಗ್ಗೆ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಸಂಸ್ಥೆ- ಸಿಎಸ್‌ಡಿಎಸ್) ಸಂಸ್ಥೆಯು ೨೦೧೭ರಲ್ಲಿ ನಡೆಸಿದ ಅಧ್ಯಯನದ ವರದಿಯು ತಿಳಿಸುವಂತೆ ಭಾರತದ ಯುವಕರಿಗೆ ಉದ್ಯೋಗವನ್ನು ಆಯ್ಕೆ ಮಾಡುವಾಗ ಆದಾಯಕ್ಕಿಂತ ಉದ್ಯೋಗದ ಖಾಯಂ ಸ್ವರೂಪವು ಮುಖ್ಯವಾಗುತ್ತದೆ. ಇದಕ್ಕೆ ಪೂರಕಾವಗ್ಗಿ ಶೇ.೬೦ರಷ್ತು ಯುವಕರು ಸರ್ಕಾರಿ ಉದ್ಯೋಗವನ್ನು ಬಯಸುತ್ತಾರೆ ಎಂದು ಆ ಅಧ್ಯಯನವು ತಿಳಿಸುತ್ತದೆ. ಈ ಪ್ರವೃತ್ತಿ ಕಳೆದೊಂದು ದಶಕದಲ್ಲಿ ಯಾವ ಬದಲಾವಣೆಯನ್ನೂ ಕಂಡಿಲ್ಲ. 

ಸರ್ಕಾರಿ ಉದ್ಯೋಗಗಳೆ ಅತ್ಯಂತ ಭದ್ರತೆ ಹೊಂದಿರುವ ಉದ್ಯೋಗಗಳು ಎಂಬ ಸಾಂಪ್ರದಾಯಿಕ ಚಿಂತನೆಗಳು ಮೂಡಿಸಿರುವ ಆಶಾ ಭಾವನೆಗಳಿಂದಾಗಿ ಸಾರ್ವಜನಿಕ ಕ್ಷೇತ್ರದ ಮೇಲೆ ಯಾವತ್ತಿಗೂ ಹೆಚ್ಚಿನ ಒತ್ತಡಗಳು ಇದ್ದೇ ಇರುತ್ತವೆ. ಇದಕ್ಕೆ ಒಂದು ಉದಾಹರಣೆಯೆಂದರೆ ಇತ್ತೀಚೆಗೆ ರೈಲ್ವೆಯಲ್ಲಿ ಕರೆಯಲಾಗಿದ್ದ ೯೦,೦೦೦ ಉದ್ಯೋಗಗಳಿಗೆ ೧೨.೪ ಲಕ್ಷ ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರು. ಆದರೆ ಇದು ಶಿಕ್ಷಣದ ಮೇಲೆ ಮಾಡುವ ಹೂಡಿಕೆಗೆ ತಕ್ಕಷ್ಟು ಆರ್ಥಿಕ ಲಾಭವನ್ನು ಮರುಪಡೆಯಬೇಕೆಂಬ ಸಿದ್ಧಾಂತಕ್ಕೆ ಪೂರಕವಾಗಿಲ್ಲ. ಈ ಬಗೆಯ ತಣಿಯಲಾದ ಆಶಯಗಳು ಮುಂದುವರೆಯುತ್ತಿರುವುದಕ್ಕೆ ನಮ್ಮ ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳ ಸೃಷ್ಟಿಯಲ್ಲಿ ಮಾನವ ಸಂಪನ್ಮೂಲಗಳ ತಪ್ಪು ಬಳಕೆ ಮತ್ತು ಭ್ರಷ್ಟಾಚಾರವೂ ಕಾರಣವೆಂಬುದನ್ನು ತಳ್ಳಿಹಾಕಲಾಗುವುದಿಲ್ಲ. ಇದರಿಂದಾಗಿ ಒಂದು ಸರ್ಕಾರಿ ಉದ್ಯೋಗವನ್ನು ಪಡೆಯಲು ತೆರಬೇಕಾದ ಬೆಲೆಯೂ ಸಹ ಭರಿಸಲಾಗದಷ್ಟಾಗಿವೆ. ಇಂಧ ವ್ಯವಸ್ಥೆಯನ್ನು ಬೇಧಿಸಲಾಗದ ಉದ್ಯೋಗಾಕಾಂಕ್ಷಿಗಳು ಅನಿವಾರ್ಯವಾಗಿ ಅಸಂಘಟಿತ ವಲಯದ ಮೊರೆ ಹೋಗುತ್ತಾರೆ. ಅಂಥ ಅನಿವಾರ್ಯ ನಡೆಯನ್ನು ಸ್ವಯಂ ಪ್ರೇರಿತ ನಡೆಯೆಂದು ಬಣ್ಣಿಸುವುದು ತಪ್ಪಾಗುತ್ತದೆ. ಇದಲ್ಲದೆ ಕಾಲಕಾಲಕ್ಕೆ ವೇತನ ಅಯೋಗಗಳ ಮೂಲಕ ವೇತನವನ್ನು ಹೆಚ್ಚಿಸುತ್ತಲೇ ಹೋಗುತ್ತಿರುವುದರಿಂದ ನೇಮಕಾತಿಯೆಂಬುದು ಸರ್ಕಾರಗಳಿಗೂ ಸಹ ಒಂದು ದುಬಾರಿ ಕ್ರಮವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಸಿಮಿತ ಸಂಪನ್ಮೂಲಗಳಿರುವ ರಾಜ್ಯ ಸರ್ಕಾರಗಳು ಕೇಂದ್ರ್ರ ಸರ್ಕಾರದ ವೇತನಗಳ ಹೆಚ್ಚಳಕ್ಕೆ ಸರಿಸಮನಾಗಿ ತಮ್ಮ ವೇತನವನ್ನು ಹೆಚ್ಚಿಸಲು ಕಷ್ಟವಾಗುತ್ತಿದೆ. ಹೀಗಾಗಿ ಖಾಯಂ ಉದ್ಯೋಗಳು ಖಾಲಿ ಬೀಳುತ್ತಾ ಹೋಗುತ್ತವೆ. ಆ ರೀತಿ ಖಾಲಿ ಬೀಳುವ ಹುದ್ದೆಗಳನ್ನು ಗುತ್ತಿಗೆ ಅಥವಾ ದಿನಗೂಲಿ ಪದ್ಧತಿಯಡಿಯಲ್ಲಿ ಭರ್ತಿ ಮಾಡುವುದರ ಮೂಲಕ ಸರ್ಕಾರಗಳು ತಮ್ಮ  ಜ ಕಲ್ಯಾಣಪರ ಸೋಗನ್ನು ಉಳಿಸಿಕೊಳ್ಳುತ್ತಿವೆ.

ಉದ್ಯೋಗಗಳ ಅನೌಪಚಾರೀಕರಣವು ನವ ಉದಾರವಾದದ ಸಹಜ ಬೆಳವಣಿಗೆಯಾಗಿದೆ. ಭಾರತವೂ ಸಹ ಅದಕ್ಕೆ ಹೊರತಲ್ಲ. ಉದ್ಯೋಗಗಳನ್ನು ಅನೌಪಚಾರೀಕರಣಗೊಳಿಸುತ್ತಿರುವ ನೀತಿಗೆ ಯಾವುದೋ ಒಂದು ಸರ್ಕಾರವನ್ನು ಹೊಣೆ ಮಾಡಲು ಆಗದು.  ಇದು ನವ ಉದಾರವಾದಿ ಆರ್ಥಿಕ ನೀತಿಗಳನ್ನು ಜಾರಿಗೆ ತರುತ್ತಿರುವ ಎಲಾ ಸರ್ಕಾರಗಳ ಉದ್ಯೋಗ ನೀತಿಯಾಗಿದೆ. ಒಂದೆಡೆ ಇದು ಖಾಸಗಿ ಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪಥದ ಪರವಾಗಿದೆ. ಉದ್ಯಮಿಗಳ ದೃಷ್ಟಿಯಲ್ಲಿ ನೋಡುವುದಾದರೆ ಉದ್ಯೋಗಗಳ ಅನೌಪಚಾರಿಕತೆಯಿಂದಾಗಿ ಉತ್ಪಾದಕತೆ ಗುಣಾತ್ಮಕವಾಗಿ ಹೆಚ್ಚದಿದ್ದರೂ ಉತ್ಪಾದಕ ವೆಚ್ಚವಂತೂ ಕಡಿಮೆಯಾಗುತ್ತದೆ. ಮತ್ತು ಆ ಮೂಲಕ ಅವುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ವಿತ್ತೀಯ ಕಡಿತವನ್ನು ಪ್ರತಿಪಾದಿಸುವ ನವ ಉದಾರವಾದಿ ತತ್ವಚಿಂತನೆಗೂ ಅದು ಪೂರಕವಾಗಿದೆ. ಆದರೆ ಅರ್ಥಿಕತೆಯಲ್ಲಿ ಮಾಡಲಾಗಿರುವ ಈ ಮೂಲಭೂತ ಬದಲಾವಣೆಗಳಿಂದ ಉದ್ಭವಿಸುವ ಹೊಣೆಗಾರಿಕೆಗಳನ್ನು ನಿಭಾಯಿಸುವ ಬಗ್ಗೆ ಮಾತ್ರ ಸರ್ಕಾರವು ತೋರುತ್ತಿರುವ ಕುರುಡು ಅತ್ಯಂತ ಕಳವಳಕಾರಿಯಾಗಿದೆ. ಯಾವ ವ್ಯವಸ್ಥೆಯು ಆರ್ಥಿಕತೆಯ ಇಂಥಾ ಪರಿವರ್ತನೆಗಳಿಂದ  ಉಂಟಾಗುವ ಪರಿಣಾಮಗಳನ್ನು ಗುರುತಿಸಿ ಬಗೆಹರಿಸಲು ಮುಂದಾಗುವುದಿಲ್ಲವೋ ಅವುಗಳಿಗೆ ನವ ಉದಾರವಾದದ ತಾರ್ಕಿಕ ಪರಿಣಾಮವಾಗಿ ಉಂಟಾಗುವ ಸಾಮಾಜಿಕ ಧೃವೀಕರಣದ ಹೊಡೆತವನ್ನು ನಿಭಾಯಿಸಲೂ ಸಹ ಆಗುವುದಿಲ್ಲ.

Back to Top