ISSN (Print) - 0012-9976 | ISSN (Online) - 2349-8846

ಅಮೆರಿಕ ಅಧ್ಯಕ್ಷ ಟ್ರಂಪ್ ದೇಶದ್ರೋಹಿಯೇ?

ಟ್ರಂಪ್ ಅವರ ಮೇಲೆ ದೇಶದ್ರೋಹದ ಆರೋಪವನ್ನು ಹೊರಿಸಿತ್ತಿರುವುದರ ಹಿಂದಿನ ನೈಜ ಕಾರಣಗಳನ್ನು ಅರಿತುಕೊಳ್ಳಬೇಕಿದೆ.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಇದೊಂದು ಅನಿರೀಕ್ಷಿತವಾದ ಬೆಳವಣಿಗೆಯೇನಲ್ಲ. ಮಾತ್ರವಲ್ಲ. ಈ ವಿದ್ಯಮಾನವು ಸರಿಯಾದ ಸಮಯದಲ್ಲೇ ಯೋಜಿತವಾಗಿ ಘಟಿಸಿದೆ. ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರ ನಡುವಿನ ಶೃಂಗಸಭೆ  ಇದೇ ಜುಲೈ ೧೩ ರಂದು ನಡೆಯಿತಷ್ಟೆ. ಅದಕ್ಕೆ ಸರಿಯಾಗಿ ಮೂರು ದಿನಗಳ ಮುಂಚೆ ಅಮೆರಿಕದ ಡೆಪ್ಯೂಟಿ ಅಟಾರ್ನಿ ಜನರಲ್ ರಾಡ್ ರೊಸೆನ್ಟೈನ್ ಅವರು ೧೨ ಮಂದಿ ರಷಿಯನ್ ಬೇಹುಗಾರಿಕಾ ಅಧಿಕಾರಿಗಳ ಮೇಲೆ ಡಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಸಂವಹನ ಸೇವೆ ಒದಗಿಸುತ್ತಿದ್ದ ಸರ್ವರ್‌ಗಳನ್ನು ಸ್ಥಗಿತಗೊಳಿಸಿದ ಮತ್ತು ಹಿಲರಿ ಕ್ಲಿಂಟನ್ ಅವರ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಜಾನ್ ಪೊಡೆಸ್ಟಾ ಅವರ ಇ-ಮೇಲ್ ಖಾತೆಯನ್ನು ಸ್ಥಗಿತಗೊಳಿಸಿ, ಅವರ ಎಲ್ಲಾ ಇ-ಮೇಲ್‌ಗಳನ್ನು ವಿಕಿಲೀಕ್ಸ್‌ಗೆ ಹಸ್ತಾಂತರ ಮಾಡಿ ಅವುಗಳ ಪ್ರಕಟಣೆಗೆ ಕಾರಣವಾಗಿದ್ದಾರೆಂದು ಗುರುತರವಾದ ಆರೋಪ ಹೊರಿಸಿದರು. ಇದರಿಂದಾಗಿ ರಷಿಯಾ ದೇಶವು ಅಮೆರಿಕದ ಪ್ರಜಾತಂತ್ರವನ್ನು ವಿಛ್ಛಿದ್ರಗೊಳಿಸಲು ನಡೆಸುತ್ತಿರುವ ಪ್ರಯತ್ನವು ಸಾಬೀತುಗೊಂಡಿದೆಯೆಂದು ಡೆಮಾಕ್ರಾಟ್ ಪಕ್ಷದವರು, ಅಮೆರಿಕದ ದೊಡ್ಡ ದೊಡ್ಡ ಮಾಧ್ಯಮಗಳು ಮತ್ತು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ಹೇಳುತ್ತಿವೆ.

೨೦೧೬ರಲ್ಲಿ ನಡೆದ ಅಮೆರಿಕದ ಚುನಾವಣೆಗಳಲ್ಲಿ ರಷಿಯಾ ಮೂಗುತೂರಿಸಿ ಹಸ್ತಕ್ಷೇಪ ನಡೆಸಿದೆ ಎಂದು ಅಮೆರಿಕವು ಅಧಿಕೃತವಾಗಿ ಆರೋಪ ಹೊರಿಸಿದ್ದರೂ ಸೂಕ್ತವಾದ ಸಾಕ್ಷಿ ಪುರಾವೆಗಳು ದೊರಕಿರಲಿಲ್ಲ. ಆದರೆ ಇದು ಟ್ರಂಪ್ ಅವರನ್ನು ದೂಷಿಸುತ್ತಾ ಡೆಮಾಕ್ರಾಟರು, ಅಮೆರಿಕಾದ ಬೇಹುಗಾರಿಕಾ ಸಂಸ್ಥೆಗಳು ಮತ್ತು ಅಮೆರಿಕದ ದೊಡ್ಡ ಮಾಧ್ಯಮಗಳು ನಡೆಸಿದ ಪ್ರಚಾರಕ್ಕೇನೂ ತಡೆಯುಂಟು ಮಾಡಲಿಲ್ಲ. ಅಲ್ಲದೆ ಇದೀಗ ವಿಕಿಲೀಕ್ಸ್ ಅನ್ನು ಈ ಸಂಚಿನ ಆರೋಪದಲ್ಲಿ ಹೆಸರಿಸಿರುವುದರಿಂದ ವಿಕಿಲೀಕ್ಸ್‌ನ ಸ್ಥಾಪಕನಾದ ಜೂಲಿಯನ್ ಅಸಾಂಗೆ ಅವರ ವಿರುದ್ಧ ತಾವು ನಿರಂತರವಾಗಿ ನಡೆಸುತ್ತಿದ್ದ ಆಂದೋಲನಕ್ಕೂ ಸಮರ್ಥನೆ ಸಿಕ್ಕಂತಾಗಿದೆಯೆಂದು ಡೆಮಾಕ್ರಾಟರು ಭಾವಿಸುತ್ತಿದ್ದಾರೆ. ಆದರೆ ಸಿಐಎ ನಡೆಸಿದ ಚಿತ್ರಹಿಂಸೆಗಳು ಮತ್ತು ಎಡ್ವರ್ಡ್ ಸ್ನೋಡೆನ್ ಬಯಲುಪಡಿಸಿದಂತೆ ನ್ಯಾಷನಲ್ ಸೆಕ್ಯೂರಿಟಿ ಏಜೆನ್ಸಿ (ಎನ್‌ಎಸ್‌ಎ)ಯು ಅಮೆರಿಕದ ನಾಗರಿಕರ ಮೇಲೆ ನಡೆಸುತ್ತಿದ್ದ ಬೇಹುಗಾರಿಕೆಗಳು ಈಗಾಗಲೇ ಬಹಿರಂಗಗೊಂಡಿದ್ದರಿಂದ ಈ ಎರಡೂ ಸಂಸ್ಥೆಗಳು ಜನರ ಮುಂದೆ ಬೆತ್ತಲಾಗಿವೆ. ಅಮೆರಿಕದ ಬೇಹುಗಾರಿಕಾ ಏಜೆನ್ಸಿಗಳು ದೇಶದ್ರೋಹಿಯೆಂದು ಪರಿಗಣಿಸುವ ಏಡ್ವರ್ಡ್ ಸ್ನೋಡೆನ್ ವಾಸ್ತವವಾಗಿ ಅಮೆರಿಕದಲ್ಲಿ ನಡೆಯುತ್ತಿದ್ದ ಗುಪ್ತ ಹಗರಣಗಳನ್ನು ಬಯಲಿಗೆಳೆದ (ವಿಷಲ್ ಬ್ಲೋಯರ್) ನೈಜ ನಾಯಕ ಮತ್ತು ನಿಜವಾದ ಡೆಮಾಕ್ರಾಟ್ (ಪ್ರಜಾತಂತ್ರವಾದಿ)ಆಗಿದ್ದು ಆತನಿಗೆ ರಷ್ಯಾ ದೇಶವು ೨೦೨೦ರ ತನಕ ರಾಜತಾಂತ್ರಿಕ ಆಶ್ರಯಕೊಟ್ಟಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.

 ಜುಲೈ ೧೬ರಂದು ಹೆಲ್ಸಿನ್ಕಿಯಲ್ಲಿ ಟ್ರಂಪ್-ಪುಟಿನ್ ಶೃಂಗಸಭಯೆಲ್ಲಿ ನಡೆದ ಚರ್ಚೆಗಳ ನೈಜ ಸಾರದ ಬಗ್ಗೆ ಎಲ್ಲಿಯೂ ವರದಿಯಾಗದಿರುವುದು ಕುತೂಹಲಕಾರಿಯಾಗಿದೆ. ಈ ಸಭೆಯನ್ನು ಸ್ಥಳದಿಂದಲೇ ವರದಿ ಮಾಡಿದ ಸಿಎನ್‌ಎನ್ ಸುದ್ದಿಸಂಸ್ಥೆಯ ವರದಿಗಾರರೊಬ್ಬರು ಒಬ್ಬ ಅಮೆರಿಕದ ಅಧ್ಯಕ್ಷ ಇಷ್ಟೊಂದು ಅಗೌರವಯುತವಾಗಿ ನಡೆದುಕೊಂಡಿದ್ದನ್ನು ತಾನು ಹಿಂದೆಂದೂ ಕಂಡಿರಲಿಲ್ಲವೆಂದು ವರದಿಮಾಡಿದ್ದರು. ಅಸಲಿ ವಿಷಯವೇನೆಂದರೆ ೨೦೧೬ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪವಿತ್ತೆಂಬ ಬಗ್ಗೆ ಟ್ರಂಪ್ ಅವರು ಅಮೆರಿಕಾದ ಬೇಹುಗಾರಿಕಾ ಸಂಸ್ಥೆಗಳ ವರದಿಗಿಂತ ರಷ್ಯಾದ ಅಧ್ಯಕ್ಷ ಪುಟಿನ್ ಅವರ ಮಾತಿಗೆ ಹೆಚ್ಚಿಗೆ ಕಿಮ್ಮತ್ತು ಕೊಡುತ್ತಿರುವುದನ್ನು ಅಮೆರಿಕ ಬೇಹುಗಾರಿಕಾ ಸಂಸ್ಥೆಗಳು ಅರಗಿಸಿಕೊಳ್ಳಲಾಗುತ್ತಿಲ್ಲ. ಜಂಟಿ ಪತ್ರಿಕಾ ಗೋಷ್ಟಿಯಲ್ಲಿ, ರಷ್ಯಾದ ಅಧ್ಯಕ್ಷ ಹಾಗೂ ಈ ಹಿಂದೆ ಆ ದೇಶದ ಬೇಹುಗಾರಿಕಾ ಸಂಸ್ಥೆಯಾದ ಕೆಜಿಬಿಯ ಅಧಿಕಾರಿಯೂ ಆಗಿದ್ದ ಪುಟಿನ್ ಅವರು ಅಮೆರಿಕಾ ಬೇಹುಗಾರಿಕಾ ಸಂಸ್ಥೆಯ ವರದಿಯನ್ನು ತಿರಸ್ಕರಿಸಿದರಲ್ಲದೆ ಒಬ್ಬ ಮಾಜಿ ಬೇಹುಗಾರಿಕಾ ಅಧಿಕಾರಿಯಾಗಿ ಇಂಥ ವರದಿಗಳು ಹೇಗೆ ತಯಾರಾಗುತ್ತವೆ ಎಂಬುದು ತಮಗೆ ಚೆನ್ನಾಗಿಯೇ ಗೊತ್ತು ಎಂತಲೂ ಟೀಕಿಸಿದರು. 

ಮಾಜಿ ಅಧ್ಯಕ್ಷ ಒಬಾಮಾ ಅವರ ಅವಧಿಯಲ್ಲಿ ಸಿಐಎ ಯ ನಿರ್ದೇಶಕರಾಗಿದ್ದ ಜಾನ್ ಬ್ರೆನ್ನನ್ ಅವರ ಪ್ರಕಾರ ಹೆಲ್ಸಿನ್ಕಿಯಲ್ಲಿ ಟ್ರಂಪ್ ಅವರ ತಂಡವು ಅಪರಾಧ ಮತ್ತು ದುರ್ವರ್ತನೆಗಳ ಹೊಸ್ತಿಲನ್ನು ದಾಟಿದ್ದು ಅವರ ವರ್ತನೆಗಳು ದೇಶದ್ರೋಹಿ ಕ್ರಮಗಳಿಗಿಂತ ಕಿಂಚಿತ್ತೂ ಕಡಿಮೆಯಿರಲಿಲ್ಲ. ನ್ಯೂಯಾರ್ಕ್ ಟೈಮ್ಸ್‌ನ ಅಂಕಣಕಾರ ಥಾಮಸ್ ಫ್ರೈಡ್‌ಮನ್ ಅವರು ಇದನ್ನು ಸಂಪೂರ್ಣವಾಗಿ ಅನುಮೋದಿಸಿದ್ದಲ್ಲದೆ ಟ್ರಂಪ್ ಅವರು ರಷ್ಯಾದ ಬೇಹುಗಾರಿಕಾ ಸಂಸ್ಥೆಗಳ ಅಪೂರ್ವ ಆಸ್ತಿಯಾಗಿದ್ದಾರೆ ಎಂದು ದೂಷಿಸಿದರು. ಅಷ್ಟು ಮಾತ್ರವಲ್ಲದೆ: ಅಮೆರಿಕದ ನನ್ನ ಸಹ ದೇಶವಾಸಿಗಳೇ..ನೀವು ಟ್ರಂಪ್ ಮತ್ತು ಪುಟಿನ್ ಅವರುಗಳ ಜೊತೆಗಿದ್ದೀರೋ ಅಥವಾ ಸಿಐಎ, ಎಫ್‌ಬಿಎ ಮತ್ತು ಎನ್‌ಎಸ್‌ಎಗಳ ಜೊತೆಗಿದ್ದೀರೋ ಎಂತಲೂ ಅಮೆರಿಕದ ಜನತೆಯನ್ನು ಪ್ರಶ್ನಿಸಿದ್ದಾರೆ.

ಆದರೆ ಉದಾರವಾದಿಗಳು, ಅವರು ಬಲಪಂಥೀಯರ ಜೊತೆಗೇ ಇರಲಿ, ಒಂದು ದೇಶದ ಬೇಹುಗಾರಿಕಾ ಸಂಸ್ಥೆಯ ಪರವಹಿಸುವುದು ಸರಿಯೇ ಎಂಬ ಪ್ರಶ್ನೆಯನ್ನು ನಾವೀಗ ಕೇಳಬೇಕಿದೆ. ಇಂಥಾ ಸನಿವೇಶದಲ್ಲಿ ಟ್ರಂಪ್ ಅವರನ್ನು ಬೆಂಬಲಿಸುವ ಅಥವಾ ಅಮೆರಿಕದ ಪ್ರಭುತ್ವದೊಳಗಿನ ನಿಜವಾದ ಪ್ರಭುತ್ವವಾಗಿರುವ ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳನ್ನು ಬೆಂಬಲಿಸುವ ಎರಡೇ ಸಾಧ್ಯತೆಗಳಿಗೆ ನಮ್ಮ ಆಯ್ಕೆಯನ್ನು ಸೀಮಿತಗೊಳಿಸಿಕೊಳ್ಳಬೇಕೇ? ಇರಾಕಿನಲ್ಲಿ ಸಾಮೂಹಿಕಾ ವಿನಾಶದ ಶಸ್ತ್ರಾಸ್ತ್ರಗಳಿವೆ ಎಂದು ಸುಳ್ಳು ಸಾಕ್ಷ್ಯವನ್ನು ಸೃಷ್ಟಿಸಿ ಇರಾಕ್ ಮೇಲಿನ ದಾಳಿಗೆ ಪೊಳ್ಳು ಸಮರ್ಥನೆಯನ್ನು ಒದಗಿಸಿದ್ದು ಇವೇ ಬೇಹುಗಾರಿಕಾ ಸಂಸ್ಥೆಗಳಲ್ಲವೇ? ಸ್ನೋಡೇನ್ ಅವರು ಬಯಲುಗೊಳಿಸಿರುವ ಸತ್ಯಗಳು ಸ್ಪಷ್ಟಪಡಿಸುವಂತೆ ಅಮೆರಿಕದ ನಾಗರಿಕರ ಮೇಲೆ ಸಾಮೂಹಿಕ ಕಣ್ಗಾವಲನ್ನು ಇರಿಸಿರುವುದು ಇದೇ ಬೇಹುಗಾರಿಕಾ ಸಂಸ್ಥೆಗಳಲ್ಲವೇ? ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಚಿತ್ರಹಿಂಸೆ ನಡೆಸಿ ಹತ್ಯೆ ನಡೆಸಲು ನಿರ್ದೇಶನ ನೀಡಿದ್ದು ಇದೇ ಬೇಹುಗಾರಿಕಾ ಸಂಸ್ಥೆಗಳಲ್ಲವೇ? ಅಫ್ಘಾನಿಸ್ತಾನ, ಲಿಬ್ಯಾ, ಪಾಕಿಸ್ತಾನ, ಸೋಮಾಲಿಯಾ ಮತ್ತು ಯೆಮೆನ್ ದೇಶಗಳಲ್ಲಿನ ತಮ್ಮ ರಾಜಕೀಯ ವಿರೋಧಿಗಳ ಮೇಲೆ ಡ್ರೋನ್ ದಾಳಿ ನಡೆಸಿ ನೂರಾರು ನಿರಾಯುಧ ನಾಗರಿಕರ ಸಾವಿಗೆ ಕಾರಣರಾದರೂ ಕಿಂಚಿತ್ತೂ ಜವಾಬ್ದಾರಿ ಹೊರದೆ ದಾಳಿ ಮುಂದುವರೆಸಿದ್ದು ಇದೇ ಬೇಹುಗಾರಿಕಾ ಸಂಸ್ಥೆಗಳಲ್ಲವೇ?

೨೦೧೬ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಷ್ಯನ್ ಹಸ್ತಕ್ಷೇಪದ ಬಗ್ಗೆ ಟ್ರಂಪ್ ಅವರು ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳ ಮಾತು ಕೇಳದೆ ರಷ್ಯಾದ ಅಧ್ಯಕ್ಷ ಪುಟಿನ್ ಅವರ ಹೇಳಿಕೆಗೆ ಮಣೆಹಾಕುತ್ತಿರುವ ಬಗ್ಗೆ ಟ್ರಂಪ್ ಅವರನ್ನು ಖಂಡಿಸಿ ನಡೆಯುತ್ತಿರುವ ಈ ಅತ್ಯುನ್ಮಾದಿ ಹೇಳಿಕಾ ಸಮರಕ್ಕೆ ರಷ್ಯಾ ಕುರಿತು ಅಮೆರಿಕದ ವಿದೇಶಾಂಗ ನೀತಿ ಏನಿರಬೇಕೆಂಬ ಬಗ್ಗೆ ಅಮೆರಿಕದ ಆಳುವವರ್ಗದಲ್ಲೇ ಇರುವ ಮೂಲಭೂತ ಭಿನ್ನಾಭಿಪ್ರಾಯಗಳ ಹಿನ್ನೆಲೆಯಿದೆ. ಟ್ರಂಪ್ ಅವರ ವಿರೋಧಿಗಳು ರಷ್ಯಾದ ವಿರುದ್ಧ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಅನುಸರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಸೋವಿಯತ್ ಒಕ್ಕೂಟದ ಪತನದ ನಂತರ ಪಶ್ಚಿಮ ಏಶಿಯಾ, ಪೂರ್ವ ಯೂರೋಪ್ ಮತ್ತು ಮಧ್ಯ ಏಷಿಯಾಗಳಲ್ಲಿ ಶಕ್ತ ರಾಜಕಾರಣದ ನಿರ್ವಾತ ಏರ್ಪಟ್ಟಿದೆ. ಈ ಅವಕಾಶವನ್ನು ಬಳಸಿಕೊಂಡು ಈ ಭೂಭಾಗದ ರಾಜಕಾರಣದಲ್ಲಿ ತಾನು ಚಾಲಕ ಪಾತ್ರ ವಹಿಸಿಕೊಳ್ಳುವ ಮೂಲಕ ರಷ್ಯಾದ ಪ್ರಭಾವವನ್ನು ಮತ್ತಷ್ಟು ದುರ್ಬಲಗೊಳಿಸಿ ಮೂಲೆಗುಂಪುಮಾಡಬೇಕೆಂಬ ಹುನ್ನಾರವನ್ನು ಅಮೆರಿಕ ನಡೆಸಿದೆ. ಈ ಗುರಿಯನ್ನು ಈಡೇರಿಸಿಕೊಳ್ಳುವ ಸಲುವಾಗಿ ತನಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಅಮೆರಿಕವು ಬಲಪಂಥೀಯ, ಮೂಲಭೂತವಾದಿ ಮತ್ತು ಭಯೋತ್ಪಾದಕ ಶಕ್ತಿಗಳನ್ನು ಬಳಸಿಕೊಂಡಿದೆ. ಉದಾಹರಣೆಗೆ ಇರಾಕ್, ಸಿರಿಯಾ, ಈಜಿಪ್ಟ್ ಮತ್ತು ಲಿಬ್ಯಾಗಳಲ್ಲಿ ಇಸ್ಲಾಮಿಕ್ ರಾಜಕೀಯ ಶಕ್ತಿಗಳಲ್ಲಿ ಪ್ರತಿಗಾಮಿ ಧೋರಣೆ ಹೊಂದಿರುವಂಥಾ ಶಕ್ತಿಗಳನ್ನು ಬಳಸಿಕೊಂಡಿದ್ದರೆ ಉಕ್ರೈನ್‌ನಲ್ಲಿ ಸ್ಥಳೀಯ ಫ್ಯಾಸಿಸ್ಟರನ್ನೂ ಬಳಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಯೂರೇಷಿಯಾ ಪ್ರಾಂತ್ಯದಲ್ಲಿ ಚೀನಾ-ಇರಾನ್- ಮತ್ತು ರಷ್ಯಾಗಳ ನಡುವೆ ರಕ್ಷಣಾ ಮೈತ್ರಿ ಏರ್ಪಟ್ಟಿರುವುದನ್ನು ಹೇಗೆ ಎದುರಿಸಬೇಕೆಂಬ ಬಗ್ಗೆ ಅಮೆರಿಕದ ಆಳುವವರ್ಗಗಳಲ್ಲಿ ತೀವ್ರ ಭಿನ್ನಾಭಿಪ್ರಾಯವಿದೆ. ಈ ವಿಷಯದಲ್ಲಿ ರಷ್ಯಾದ ಜೊತೆ ತಾತ್ಕಾಲಿಕವಾಗಿ ಒಂದು ಬಗೆಯ ಶಾಂತಿ ಸಂಧಾನದ ನೀತಿಯನ್ನು  ಅನುಸರಿಸುತ್ತಿರುವ ಟ್ರಂಪ್ ಅವರ ತಂತ್ರದ ಬಗ್ಗೆ ಅಮೆರಿಕದ ಆಡಳಿತದ ಬಹುಸಂಖ್ಯಾತ ವರ್ಗದಲ್ಲಿ ಅಪಾರ ಅಸಮಾಧಾನವಿದೆ.

ಆಳುವ ವರ್ಗದಲ್ಲಿರುವ ಈ ನೈಜ ಭಿನ್ನಭಿಪ್ರಾಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಬದಲಾಗಿ ಟ್ರಂಪ್ ಅವರನ್ನು ದೇಶದ ಹಿತಾಸಕ್ತಿಯನ್ನು ಪುಟಿನ್‌ಗೆ ಮಾರುತ್ತಿರುವ ದೇಶದ್ರೋಹಿ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ.

Back to Top