ಸುರಕ್ಷಿತ ಗರ್ಭಪಾತ ಆರೈಕೆಯ ಹಕ್ಕು
ವೈದ್ಯಕೀಯವಾಗಿ ಗರ್ಭವನ್ನು ಅಂತ್ಯಗೊಳಿಸಿಕೊಳ್ಳುವ ಕಾಯಿದೆಗೆ ಬಹುಕಾಲದಿಂದ ಸೂಚಿಸುತ್ತಿರುವ ತಿದ್ದುಪಡಿಗಳನ್ನು ಅಳವಡಿಸಿಕೊಳ್ಳಬೇಕು.
The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.
ಇತ್ತೀಚಿನ ದಿನಗಳಲ್ಲಿ, ಸುಪ್ರೀಂ ಕೋರ್ಟಿನಲ್ಲಿ, ಗರ್ಭಧಾರಣೆಯಾದ ಇಪ್ಪತ್ತು ವಾರಗಳ ನಂತರದಲ್ಲೂ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರುತ್ತಾ ಸಾಲುಸಾಲು ಅಹವಾಲುಗಳು ದಾಖಲಾಗುತ್ತಿವೆ. ಇದು ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್-೧೯೭೧ (ವೈದ್ಯಕೀಯವಾಗಿ ಬಸಿರನ್ನು ಕೊನೆಗೊಳಿಸಿಕೊಳ್ಳುವ ಕಾಯಿದೆ-೧೯೭೧)ಗೆ ತುರ್ತಾಗಿ ತಿದ್ದುಪಡಿಗಳು ಆಗಲೇಬೇಕಿರುವುದನ್ನು ಸೂಚಿಸುತ್ತದೆ. ಈಗಿರುವ ಕಾನೂನು ಗರ್ಭವತಿ ಮಹಿಳೆಯ ಜೀವಕ್ಕೆ ಅಪಾಯವಾಗುವಂತಿದ್ದರೆ ಮಾತ್ರ ಇಪ್ಪತ್ತು ವಾರಗಳ ನಂತರವೂ ಗರ್ಭಪಾತಕ್ಕೆ ಅನುಮತಿ ನೀಡುತ್ತದೆ. ಆದ್ದರಿಂದಲೇ ಇಂಥಾ ಅಹವಾಲುಗಳು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯದಲ್ಲಿ ದಾಖಲಾಗುತ್ತಿವೆ. ಈಗಿರುವ ಕಾನೂನು ತಾಯಿಗರ್ಭದಲ್ಲಿರುವ ಭ್ರೂಣದ ಅಸಹಜ ಬೆಳವಣಿಗೆಯನ್ನಾಗಲೀ ಅಥವಾ ಅದನ್ನು ಇಪ್ಪತ್ತು ವಾರಗಳ ನಂತರದಲ್ಲಿ ಪತ್ತೆ ಹಚ್ಚಬಹುದೆನ್ನುವ ವಾಸ್ತವವನ್ನಾಗಲೀ, ಅಥವಾ ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಆಗಬಹುದಾದ ಅಪಾಯವನ್ನಾಗಲೀ ಗರ್ಭಪಾತಕ್ಕೆ ಅನುಮತಿ ನೀಡಲು ಕಾರಣಗಳನ್ನಾಗಿ ಪರಿಗಣಿಸುವುದಿಲ್ಲ. ಆದ್ದರಿಂದಲೇ ಅವುಗಳು ಕೋರ್ಟಿನ ಮುಂದೆ ಬರುತ್ತವೆ. ಮತ್ತು ಕೋರ್ಟುಗಳು ಪ್ರತಿಯೊಂದು ಪ್ರಕರಣವನ್ನು ಬಿಡಿಬಿಡಿಯಾಗಿಯೇ ಪರಿಗಣಿಸಿ ವೈದ್ಯರ ತಂಡದ ಶಿಫಾರಸ್ಸುಗಳ ಆಧರಿಸಿ ಆದೇಶವನ್ನು ನೀಡಬೇಕಾಗುತ್ತದೆ.
ಆದರೆ ಈ ಕಾಯಿದೆಗೆ ಸೂಚಿಸಲಾಗಿರುವ ತಿದ್ದುಪಡಿಗಳು ತಾಯಿಗರ್ಭದಲ್ಲಿರುವ ಭ್ರೂಣದ ಅಸ್ವಾಭಾವಿಕ ಬೆಳವಣಿಗೆ ಗಂಭೀರವಾದ ಪ್ರಮಾಣದಲ್ಲಿದ್ದರೆ (ಇದು ಕಾಯಿದೆಯ ನಿಯಮಗಳಲ್ಲಿ ಪಟ್ಟಿಯಾಗಬೇಕು) ಮತ್ತು ಗರ್ಭವತಿ ಮಹಿಳೆಯ ಜೀವಕ್ಕೆ ಅಪಾಯವಿರುವ ಸಂದರ್ಭಗಳಲ್ಲಿ ಗರ್ಭಪಾತ ಮಾಡಲು ಗರ್ಭದ ಕಾಲಾವಧಿಯನ್ನು ಮಾನದಂಡವನ್ನಾಗಿಸುವುದಿಲ್ಲ. ಆದರೆ ಈ ತಿದ್ದುಪಡಿಗಳು ೨೦೧೪ರಿಂದಲೂ ಸಂಸತ್ತಿನಲ್ಲಿ ಅನುಮೋದನೆಯನ್ನು ಕಾಯುತ್ತಾ ಕುಳಿತಿವೆ. ಈ ತಿದ್ದುಪಡಿಗಳಿಗೆ ಅನುಮೋದನೆ ಸಿಕ್ಕಲ್ಲಿ ಒಬ್ಬ ನೊಂದಾಯಿತ ಆರೋಗ್ಯ ಸೇವಾದಾತರ (ಹೆಲ್ತ್ ಸರ್ವೀಸ್ ಪ್ರೊವೈಡರ್ಸ್) ಅನುಮೋದನೆಯ ಮೇರೆಗೆ ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳಬಹುದು. ಆಗ ಗರ್ಭಪಾತ ಮಾಡಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗುವುದು ತಪ್ಪುತ್ತದೆ.
ಅಲ್ಲದೆ ಈ ತಿದ್ದುಪಡಿಯಲ್ಲಿ ಗರ್ಭವನ್ನು ಅಂತ್ಯಗೊಳಿಸಿಕೊಳ್ಳುವುದು ಎಂಬ ಪದದ ವ್ಯಾಖ್ಯಾನವನ್ನು ಮಾಡುವಾಗ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ರೂಪದ ಗರ್ಭಪಾತಗನ್ನು ಬೇರ್ಪಡಿಸಲಾಗಿದೆ. ಮತ್ತು ಆರೋಗ್ಯ ಸೇವಾದಾತರ ಪಟ್ಟಿಯಲ್ಲಿ ಆಯುರ್ವೇದ, ಯುನಾನಿ, ಸಿದ್ಧ, ಮತ್ತು ಹೋಮಿಯೋಪತಿ ಪದ್ಧತಿಯ ವೈದ್ಯರುಗಳನ್ನೂ ಮತ್ತು ಸೂಲಗಿತ್ತಿ ಹಾಗೂ ಶುಶ್ರೂಕರನ್ನು ಸೇರಿಸಲಾಗಿದೆ. ಆದರೆ ಆಲೋಪತಿ ವೈದ್ಯರುಗಳಿಂದ ಈ ತಿದ್ದುಪಡಿಗೆ ಸ್ವಲ್ಪ ವಿರೋಧ ವ್ಯಕ್ತವಾಗಿದೆ. ಇಂಥಾ ಎಲ್ಲಾ ಬಗೆಯ ಆರೋಗ್ಯ ಸೇವಾ ದಾತರುಗಳಿಗೆ ಗರ್ಭಪಾತ ಮಾಡಲು ಅವಕಾಶ ಕೊಡುವುದರಿಂದ ವೈದ್ಯಕೀಯ ದುರಾಚಾರಗಳು ಹೆಚ್ಚುತ್ತದೆ ಎಂಬುದು ಅವರ ತಕರಾರು. ಆದರೆ ಸರ್ಕಾರವು ಅಗತ್ಯವಿರುವ ತರಬೇತಿ ಮತ್ತು ಪ್ರಮಾಣಪತ್ರ ಹೊಂದಿರುವವರಿಗೆ ಮತ್ತು ಕೇವಲ ವೈದ್ಯಕೀಯ ಗರ್ಭಪಾತವನ್ನು ಮಾಡಲು ಮಾತ್ರ ಅವಕಾಶ ಕೊಡುವ ಉದ್ದೇಶವನ್ನು ಹೊಂದಿದೆ. ಸೂಕ್ತ ತರಬೇತಿ ಪಡೆದ ನಡುಹಂತದ ಆರೋಗ್ಯ ಸೇವಾದಾತರು ಇಂಥಾ ಗರ್ಭಪಾತಗಳನ್ನು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.
ಈ ತಿದ್ದುಪಡಿಗಳು ಗರ್ಭಪಾತದ ಆರೈಕೆಯನ್ನು ಪಡೆಯುವ ಅವಕಾಶಗಳನ್ನು ಹೆಚ್ಚಿಸಿದರೂ ಅವೆಲ್ಲಾ ಒಂದು ನಿರ್ದಿಷ್ಟ ಸಂದರ್ಭಕ್ಕೆ ಒಳಪಟ್ಟೇ ಜಾರಿಯಾಗಬೇಕು. ಅಸುರಕ್ಷಿತ ಗರ್ಭಪಾತದಿಂದಾಗಿ ಭಾರತದಲ್ಲಿ ಸರಾಸರಿ ಪ್ರತಿದಿನ ಹತ್ತು ಮಹಿಳೆಯರು ಸಾಯುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಾಗುವ ಮೂರನೇ ಎರಡು ಭಾಗದಷ್ಟು ಗರ್ಭಪಾತಗಳು ಅಸುರಕ್ಷಿತವಾದವು. ಹಾಗೂ ಅವು ಅಧಿಕೃತ ಮತ್ತು ನಿಯಂತ್ರಣಕ್ಕೊಳಪಟ್ಟ ಆಸ್ಪತ್ರೆ ಅಥವಾ ಇತರ ದವಾಖಾನೆಗಳಲ್ಲಿ ಆಗುವುದಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನೊಂದಾಯಿತ ಆರೋಗ್ಯ ಸೇವಾ ದಾತರ ಸೇವೆ ಎಟುಕದಿರುವುದು ಅಥವಾ ಅಂತವರು ಗರ್ಭಪಾತ ಮಾಡಲು ನಿರಾಕರಿಸುವುದು ಒಂದು ಬಗೆಯ ಕಾರಣವಾಗಿದ್ದರೆ, ಕುಟುಂಬಗಳಿಂದ ಒತ್ತಡ ಅಥವಾ ಅಸಹಕಾರ, ಕಳಂಕಿತರಾಗುವ ಭಯ, ಹಣಕಾಸಿನ ಮುಗ್ಗಟ್ಟು, ಮತ್ತು ಅರಿವಿನ ಕೊರತೆ ಹಾಗೂ ಮಾಹಿತಿಗಳು ದಕ್ಕದಿರುವುಂಥ ಇನ್ನಿತರ ಬಗೆಬಗೆಯ ಸಾಮಾಜಿಕ ಅಂಶಗಳು ಸಮಸ್ಯೆಯನ್ನು ಉಲ್ಭಣಗೊಳಿಸಿವೆ. ಇವು ಮಹಿಳೆಯರು ಅಸುರಕ್ಷಿತ ಅಥವಾ ಕಾನೂನುಬಾಹಿರ ಗರ್ಭಪಾತಗಳಿಗೆ ಮೊರೆಹೋಗುವಂತೆ ಮಾಡುತ್ತದೆ. ಇದು ತುರ್ತು ಗರ್ಭನಿರೋಧಕಗಳ ದುರ್ಬಳಕೆ, ವೈದ್ಯರ ಸಲಹೆಯನ್ನು ಪಡೆಯದೆ ವೈದ್ಯಕೀಯ ಬಸಿರಿಳಿಕೆಗಳಾದ ಮಿಫ಼ೆಪ್ರಿಸ್ಟೋನ್ ಮತ್ತು ಮಿಸೊಪ್ರೊಸ್ಟೊಲ್ ಗಳ ಬಳಕೆ, ಮತ್ತು ಅಸುರಕ್ಷಿತ ಒರಟು ನಾಟಿ ಗರ್ಭಪಾತಗಳಿಗೆ ದಾರಿಮಾಡಿಕೊಡುತ್ತದೆ. ಹೀಗಾಗಿಯೇ ೪೬ ವರ್ಷಗಳಷ್ಟು ಹಿಂದೆಯೇ ಗರ್ಭಪಾತದ ಕುರಿತು ಶಾಸನವನ್ನು ಮಾಡಿದ್ದರೂ, ಸುರಕ್ಷಿತ ಗರ್ಭಪಾತದ ಆರೈಕೆಯನ್ನು ಪೂರೈಸಲು ವಿಫಲವಾಗಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. ಆದ್ದರಿಂದಲೇ ಸುರಕ್ಷಿತ, ಅಧಿಕೃತ ಮತ್ತು ನಿಯಂತ್ರಿತ ಗರ್ಭಪಾತದ ಆರೈಕೆಯನ್ನೂ ಒಳಗೊಳ್ಳುವ ರೀತಿಯಲ್ಲಿ ಕಾಯಿದೆಯ ವ್ಯಾಪ್ತಿಯನ್ನು ಹಿಗ್ಗಿಸಬೇಕಿದೆ.
೧೯೭೧ರಲ್ಲಿ ಜಾರಿಗೆ ಬಂದ ಎಂಟಿಪಿ ಕಾಯಿದೆಯ ಅಂಶಗಳನ್ನು ಅಂದಿನ ಜನಸಂಖ್ಯಾ ನಿಯಂತ್ರಣದ ಉದ್ದೇಶಗಳು ಮತ್ತು ಅನರ್ಹ ಮತ್ತು ಕಾನೂನಿನ ಅಂಕೆಗೆ ಒಳಪಡದವರಿಂದ ಗರ್ಭಪಾತ ಮಾಡಿಸಿಕೊಂಡು ಸಾಯುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದ ಸಂದರ್ಭದ ಅಗತ್ಯಗಳು ನಿರ್ದೇಶಿಸಿವೆ. ಅಂತಿಮವಾಗಿ ಈ ಪ್ರಸ್ತಾವಿತ ತಿದ್ದುಪಡಿಗಳು ಮತ್ತೊಂದು ಪ್ರಮುಖ ಅಂಶವಾದ ಮಹಿಳೆಯ ಆಯ್ಕೆ ಮತ್ತು ಸ್ವಾಯತ್ತತೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಈ ಅಂಶಗಳು ಮೊದಲಿನ ಕಾಯ್ದೆಯಲ್ಲಿ ಇರಲಿಲ್ಲ. ಗರ್ಭವತಿ ಮಹಿಳೆಯು ಕೋರಿದಲ್ಲಿ ೧೨ ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಈ ತಿದ್ದುಪಡಿಗಳು ಅನುಮತಿ ನೀಡುತ್ತದೆ. ಅದಲ್ಲದೆ, ಭ್ರೂಣದ ಅಸ್ವಾಭಾವಿಕ ಬೆಳವಣಿಗೆ ಅಥವಾ ಗರ್ಭವತಿ ಮಹಿಳೆಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಆಗಬಹುದಾದ ಅಪಾಯವನ್ನು ಪರಿಗಣಿಸಿ ಆರೋಗ್ಯ ಸೇವಾದಾತರು ಗರ್ಭಪಾತ ಮಾಡಿಸಬಹುದಾದ ಗರ್ಭಾವಧಿಯನ್ನು ೨೦ ವಾರಗಳಿಂದ ೨೪ ವಾರಗಳಿಗೆ ಏರಿಸಿದೆ. ಮತ್ತೊಂದು ಸ್ವಾಗತಾರ್ಹ ತಿದ್ದುಪಡಿಯೆಂದರೆ ಗರ್ಭಪಾತ ಮಾಡಿಸಿಕೊಳ್ಳಲು ಗರ್ಭನಿರೋಧಕದ ವೈಫಲ್ಯದ ಕಾರಣ ನೀಡುವವರು ವಿವಾಹಿತರಾಗಿರಬೇಕೆಂಬ ಅಂಶವನ್ನು ತೆಗೆದುಹಾಕಲಾಗಿದೆ. ೧೯೭೧ರ ನಂತರದಲ್ಲಿ ಸಾಮಾಜಿಕ ಮತ್ತು ವೈದ್ಯಕೀಯ ಸಂದರ್ಭಗಳು ತೀವ್ರಗತಿಯಲ್ಲಿ ಬದಲಾವಣೆಯನ್ನು ಕಂಡಿರುವಾಗ ಎಂಟಿಪಿಯಂಥಾ ಕಾಯಿದೆಯು ಜಡವಾಗುಳಿಯಲು ಸಾಧ್ಯವಿಲ್ಲ.
ರೋಸಾಲಿನ್ ಪೆಚೆಸ್ಕಿಯವರು ವಾದಿಸುವಂತೆ ಗರ್ಭಪಾತವೆಂಬುದು ಕುಟುಂಬ, ಪ್ರಭುತ್ವ, ತಾಯ್ತನ ಮತ್ತು ಯುವತಿಯರ ಲೈಂಗಿಕತೆಗಳ ಮೂಲಭೂತ ಅರ್ಥಗಳು ತಾತ್ವಿಕ ಸಂಘರ್ಷ ನಡೆಸುವ ಭೂಮಿಕೆಯಾಗಿದೆ. ಈ ತಿದ್ದುಪಡಿಗಳು ಸರಿದಾರಿಯಲ್ಲಿ ಇಟ್ಟಿರುವ ಒಂದು ಹೆಜ್ಜೆಯೆಂಬುದು ನಿಜವಾದರೂ ಇನ್ನೂ ಹಲವು ಮೂಲಭೂತ ಪ್ರಶ್ನೆಗಳಿವೆ. ಹಲವಾರು ಮಹಿಳೆಯರಿಗೆ ತಮಗೆ ಗರ್ಭನಿರೋಧಕದ ಆಯ್ಕೆ ಇರುವ ಬಗ್ಗೆ ಮತ್ತು ತಮಗೆ ಗರ್ಭಪಾತ ಮಾಡಿಸಿಕೊಳ್ಳಲು ಕಾನಾನಾತ್ಮಕ ಹಕ್ಕಿದೆಯೆಂಬ ಬಗ್ಗೆ ಅರಿವಿಲ್ಲ. ಮಹಿಳೆಯರಿಗೆ ಈ ಅರಿವನ್ನು ನೀಡುವಲ್ಲಿ ಮತ್ತು ಅವರಿಗೆ ಅಗತ್ಯವಿರುವ ಆರೈಕೆಯನ್ನು ಸುರಕ್ಷಿತ ಮತ್ತು ಮಾನವೀಯ ರೀತಿಯಲ್ಲಿ ಒದಗಿಸುವಲ್ಲಿ ಆರೋಗ್ಯ ಸೇವಾ ದಾತರ ಪಾತ್ರ ತುಂಬಾ ಮುಖ್ಯವಾಗಿದೆ. ಗರ್ಭಪಾತದ ಆರೈಕೆ ಮತ್ತು ಗರ್ಭನಿರೋಧಕಗಳು ದಕ್ಕುವಂತಾಗುವುದು ಒಂದು ಸಾರ್ವಜನಿಕ ಆರೋಗ್ಯದ ವಿಷಯ. ಅದನ್ನು ಹಾಗೆಯೇ ಪರಿಗಣಿಸಬೇಕು. ಮಹಿಳೆಯರನ್ನು ತಮ್ಮ ದೇಹ, ಲೈಂಗಿಕತೆ ಮತ್ತು ಗರ್ಭಧಾರಣೆಯ ಕುರಿತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಲ್ಲ ಸ್ವಾಯತ್ತ ವ್ಯಕ್ತಿಗಳನ್ನಾಗಿಯೇ ಗುರುತಿಸಬೇಕು.
ವೈದ್ಯಕೀಯವಾಗಿ ಗರ್ಭವನ್ನು ಅಂತ್ಯಗೊಳಿಸಿಕೊಳ್ಳುವ (ತಿದ್ದುಪಡಿ) ಮಸೂದೆ-2017 ಈ ಬಾರಿಯ ಸಂಸತ್ತಿನ ಅಧಿವೇಶನದಲ್ಲಿ ಮಂಡನೆಯಾಗುವ ಮಸೂದೆಗಳ ಪಟ್ಟಿಯಲ್ಲಿದೆ. ಗರ್ಭಪಾತದ ಕುರಿತು ನಮ್ಮ ಶಾಸನ ನಿರೂಪಕರು ಮತ್ತು ನಾವೆಲ್ಲರೂ ಕೂಡಾ ಮಕ್ತ ಮತ್ತು ಬಹಿರಂಗ ಚರ್ಚೆ ಮಾಡಲು ಇದು ಸಕಾಲವಾಗಿದೆ.