ISSN (Print) - 0012-9976 | ISSN (Online) - 2349-8846

ಮಂಗಮಾಯವಾದ ಭ್ರಷ್ಟಾಚಾರ!

೨-ಜಿ ಹಗರಣವು ಖುಲಾಸೆಯಾಗಿರುವ ರೀತಿಯು ಹೇಗೆ ಭ್ರಷ್ಟಾಚಾರವನ್ನು  ಒಂದು ಸಿನಿಕ ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಲಾಗುತ್ತಿದೆಯೆಂಬುದನ್ನು ಬಯಲುಮಾಡುತ್ತದೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ೨-ಜಿ ಹಗರಣದ ಎಲ್ಲಾ ಆರೋಪಿಗಳನ್ನು ವಿಚಾರಣಾ ನ್ಯಾಯಲಯವು ಬಿಡುಗಡೆ ಮಾಡಿರುವುದು ಒಂದು ಆಶ್ಚರ್ಯಕರ ಸಂಗತಿಯೇ ಸರಿ. ಅದಕ್ಕಿಂತ ಆಶ್ಚರ್ಯಕರವಾದ ಸಂಗತಿಯೆಂದರೆ ಅತ್ಯಂತ ಕಡಿಮೆ ಅವಧಿಯಲ್ಲೇ ಈ ಹಗರಣವು ಸಾರ್ವಜನಿಕರ ನೆನಪಿನಿಂದ ಮರೆಯಾಗಿರುವುದು. ಎರಡನೆ ಪೀಳಿಗೆಯ (೨-ಜಿ)ಮೊಬೈಲ್ ತರಂಗಾಂತರವನ್ನು ಮೊದಲು ಬಂದವರಿಗೆ, ಮೊದಲ ಆದ್ಯತೆಯ ತತ್ವದಡಿ ಹರಾಜು ಮಾಡುವಾಗ ಅಪಾರ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಈ ದೇಶದಲ್ಲಿ ದೊಡ್ಡ ರಾಜಕೀಯ ಕೋಲಾಹಲವೇ ನಡೆದು ಇನ್ನೂ ಹತ್ತು ವರ್ಷಗಳು ಕಳೆದಿಲ್ಲ. ಆ ಪ್ರಕ್ರಿಯೆಯಲ್ಲಿ ಮೊಬೈಲ್ ಇಂಟರ್‌ನೆಟ್ ಮತ್ತು ಧ್ವನಿ ಸೇವೆಯನ್ನು ದೇಶಾದ್ಯಂತ ಒದಗಿಸಲು ವಿವಿಧ ಟೆಲಿಕಾಂ ಕಂಪನಿಗಳಿಗೆ ೧೨೨ ಲೈಸೆನ್ಸ್‌ಗಳನ್ನು ನೀಡಲಾಗಿತ್ತು. ದೇಶವು ಒಂದು ದೂರಸಂಪರ್ಕ ಕ್ರಾಂತಿಯ ಹೊಸ್ತಿಲಲ್ಲಿ ಇರುವಾಗ ಈ ಕ್ರಮವು ದೇಶದಲ್ಲಿ ದೂರಸಂಪರ್ಕದ ಬಳಕೆಯನ್ನು ಮತ್ತು ದೂರ ಸಂಪರ್ಕದ ಸಾಂದ್ರತೆಯನ್ನು ಹೆಚ್ಚಿಸುವಲ್ಲಿ ಬೇಕಿರುವ ಅತ್ಯಗತ್ಯ ಶಕ್ತಿಯನ್ನು ತುಂಬುತ್ತದೆ ಎಂದು ಬಣ್ಣಿಸಲಾಗಿತ್ತು. ಬದಲಿಗೆ ಅದೊಂದು ದೊಡ್ಡ ಹಗರಣವಾಗಿ ಬದಲಾಯಿತು ಮತ್ತು ಇದರಿಂದ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರದಡಿ ದೇಶಕ್ಕೆ ೧,೭೦,೦೦೦ ಕೋಟಿಯಷ್ಟು ನಷ್ಟವಾಗುತ್ತಿತ್ತೆಂಬ ರಮ್ಯ ಪ್ರಚಾರ ನಡೆದು ೨-ಜಿ ಹಗರಣವು ಕಾಂಗ್ರೆಸ್-ಯುಪಿಎ  ಭ್ರಷ್ಟಾಚಾರಕ್ಕೆ ಒಂದು ಪ್ರತಿಮೆಯಾಗಿ ಬದಲಾಯಿತು. ಮತ್ತು ಕಾಂಗ್ರೆಸ್ ಆಳ್ವಿಕೆಯ ಅಂತ್ಯಕ್ಕೂ ನಾಂದಿಯನ್ನೂ ಹಾಡಿತು.

ಆಗ ಮಾಡಲಾದ ಆರೋಪಗಳು ಎಲ್ಲರಿಗೂ ಚಿರಪರಿಚಿತವೇ. ಯುಪಿಎ ಸರ್ಕಾರವು ತಮ್ಮ ಮೆಚ್ಚಿನ ಕಂಪನಿಗಳಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ತರಂಗಾಂತರಗಳನ್ನು ಮಾರಿಕೊಂಡಿದೆಯೆಂಬುದೂ, ಅದಕ್ಕೆ ಬದಲಾಗಿ ಅವರಿಂದ ಅಪಾರ ಪ್ರಮಾಣದ ಲಂಚವನ್ನು ಪಡೆದುಕೊಂಡಿದೆ ಎಂಬುದು ಆಗ ವಿರೋಧಪಕ್ಷಗಳು ಅವರ ಮೇಲೆ ಮಾಡಿದ ಆರೋಪದ ಸಾರಂಶ. ಇದರಿಂದಾಗಿ ಸರ್ಕಾರಕ್ಕೆ ಬರಬೇಕಿದ್ದ ವರಮಾನ ತೀವ್ರವಾಗಿ ಕುಸಿತವಾಗಿದೆಯಾಗಿದೆಯೆಂದು ಪ್ರತಿಪಾದಿಸಿದ ಕೆಲವು ಪತ್ರಕರ್ತರು ಮತ್ತು ವಿಶ್ಲೇಷಕರು ಆ ನಷ್ಟದ ಮೊತ್ತವನ್ನು ಕನಿಷ್ಟ ೨೦,೦೦೦ ಕೋಟಿ ರೂ.ಗಳೆಂದು ಅಂದಾಜಿಸಿದ್ದರು. ಆದರೆ ದೇಶದ ಆಗಿನ ಮಹಾಲೆಕ್ಕಪರಿಶೋಧಕರಾಗಿದ್ದ (ಸಿಎಜಿ) ವಿನೋದ್ ರೈ ಅವರಂತೂ ಈ ಹಗರಣದಿಂದ ಸರ್ಕಾರಕ್ಕಾಗುತ್ತಿದ್ದ ಸಂಭವನೀಯ ನಷ್ಟವನ್ನು ೧.೭೩ ಲಕ್ಷಕೋಟಿಯಷ್ಟೆಂದು ಅಂದಾಜಿಸಿದರು. ಇದರಿಂದಾಗಿ ಟೆಲಿಕಾಂ ಕಂಪನಿಗಳಿಗೆ ಸೂಪರ್ ಲಾಭ ದಕ್ಕಿದೆಯೆಂದೂ ಅಂದಾಜಿಸಲಾಯಿತು. ಆಗ ಟೆಲಿಕಾಂ ಮಂತ್ರಿಯಾಗಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಎ. ರಾಜಾ ಅವರನ್ನು ಈ ಹಗರಣದ ಪ್ರಧಾನ ಫಲಾನುಭವಿಯೆಂದು ಆರೋಪಿಸಲಾಯಿತು ಮತ್ತು ಅವರೊಂದಿಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನೂ ಒಳಗೊಂಡಂತೆ ಕಾಂಗ್ರೆಸ್‌ನ ಇತರರೂ ಈ ಭ್ರಷ್ಟಾಚಾರದಲ್ಲಿ ಪಾಲುದಾರರೆಂದು ಆರೋಪಿಸಲಾಯಿತು. ತರಂಗಾಂತರದ ಹಂಚಿಕೆಯನ್ನು ಮಾಡುವ ನಿರ್ಧಾರದಲ್ಲಿ ಅಕ್ರಮ, ಸ್ವಜನಪಕ್ಷಾಪಾತಗಳು ಮತ್ತು ಲಂಚಕೋರತನ ಹಾಗೂ ಸರ್ಕಾರದ ಬೊಕ್ಕಸಕ್ಕಾದ ನಷ್ಟಗಳನ್ನು ನಂಬಲರ್ಹ ಸಾಕ್ಷ್ಯಗಳ ಮೂಲಕ ಆರೋಪಿಸಲಾಯಿತೆಂಬುದು ನಿಜವಾದರೂ ಇಡೀ ಪ್ರಕರಣಕ್ಕೆ ಅತ್ಯಂತ ಮಹತ್ವವನ್ನು ತಂದುಕೊಟ್ಟಿದ್ದು ಮಾತ್ರ ಹಗರಣದ ಉತ್ಪ್ರೇಕ್ಷಿತ ಮೊತ್ತ. ಅದು ಯುಪಿಎ ಸರ್ಕಾರದ ಅಸಾಧಾರಣ ಭ್ರಷ್ಟಾಚಾರಕ್ಕೆ ಒಂದು ಸಂಕೇತವಾಗಿದ್ದು ಮಾತ್ರವಲ್ಲದೆ ಮೂಲಭೂತ ಸೌಕರ್ಯಗಳು ಮತ್ತು ಬಡತನ ನಿರ್ಮೂಲನೆ ಕಾರ್ಯಕ್ರಮಗಳಿಂದ ಯಾವ ಪ್ರಮಾಣದ ಮೊತ್ತವು ಬೇರೆಡೆಗೆ ಹರಿಯಬಿಡಲಾಗುತ್ತದೆಂಬುದಕ್ಕೂ ದೊಡ್ಡ ಉದಾಹರಣೆಯಾಗಿಬಿಟ್ಟಿತು.

೨-ಜಿ ಹಗರಣದಲ್ಲಿ ೧.೭೩ ಲಕ್ಷ ಕೋಟಿ ರೂ.ಗಳಷ್ಟು ಹಗರಣ ಸಂಭವಿಸಿದೆ ಎಂಬ ಆರೋಪಕ್ಕೂ ಹಾಗೂ ನಂತರದ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ಭಾರತ ಗಣರಾಜ್ಯದ ಚುನಾಯಿತ ಸಾಮ್ರಾಟನಾಗುವುದಕ್ಕೂ ನೇರೆ ಸಂಬಂಧವಿದೆಯೆಂಬ ಷಡ್ಯಂತ್ರದ ಸಿದ್ಧಾಂತವನ್ನು ಕೆಲವರು ಪ್ರತಿಪಾದಿಸುತ್ತಾರೆ. ಈ ಷಡ್ಯಂತ್ರದ ಸತ್ಯಾಸತ್ಯತೆ ಏನೇ ಇದ್ದರೂ ಈ ಪ್ರಕರಣದ ರಾಜಕೀಯ ಪರಿಣಾಮಗಳೇನಾಯಿತೆಂಬುದನ್ನು ಮಾತ್ರ ಸ್ಪಷ್ಟವಾಗಿ ಗುರುತಿಸಬಹುದು. ಈ ಹಗರಣವನ್ನು ಕಾಂಗ್ರೆಸ್ ಭ್ರಷ್ಟಾಚಾರದ ಮಾದರಿಯನ್ನಾಗಿ ಬಿತ್ತರಿಸಿ ಕಾಂಗ್ರೆಸ್ ಎಂದರೆ ಭ್ರಷ್ಟತೆ ಎಂಬುದನ್ನು ಒಂದು ಸಾಮಾನ್ಯ ತಿಳವಳಿಕೆಯನ್ನಾಗಿ ಮಾಡಿಬಿಡುವಷ್ಟು ಪ್ರಚಾರ ಮಾಡಲಾಯಿತು. ಮತ್ತು ಆ ನಂತರ ಕಾಂಗ್ರೆಸ್ ಮೇಲೆ ಆರೋಪಿಸಲಾದ ಯಾವುದೇ ಹಗರಣಗಳನ್ನು ಯಾವುದೇ ವಿವೇಚನೆ ಇಲ್ಲದೆ ಜನಸಾಮಾನ್ಯರು ಒಪ್ಪಿಕೊಂಡುಬಿಡುವಂಥ ಸಂದರ್ಭವನ್ನೂ ಸಹ ಸೃಷ್ಟಿಸಲಾಯಿತು. ಈ ಸೃಷ್ಟಿತ ಸಾಮಾನ್ಯ ತಿಳವಳಿಕೆಯೇ ಇಂಡಿಯಾ ಅಗೆನ್ಸ್ಟ್ ಕರಪ್ಷನ್ (ಭ್ರಷ್ಟತೆಯ ವಿರುದ್ಧ ಭಾರತ)ನ ಚಳವಳಿಗೆ ಮಾನ್ಯತೆಯನ್ನೂ ಗಳಿಸಿಕೊಟ್ಟಿತು ಮತ್ತು ಆ ಮೂಲಕ ಭಾರತದ ಎಲಾ ಸಮಸ್ಯೆಗಳಿಗೂ ಭ್ರಷ್ಟತೆಯೊಂದೇ ಕಾರಣವೆಂಬ, ಮತ್ತು ಭ್ರಷ್ಟಾಚಾರ ವಿರೋಧವೊಂದೇ ಅವೆಲ್ಲಕ್ಕೂ ಸರಿಯಾದ ಪರಿಹಾರವೆಂಬುದನ್ನು ನಂಬುವಂಥ ಸಂದರ್ಭವನ್ನೂ ಹುಟ್ಟುಹಾಕಿತು. ಇದgರ್ಥ ತರಂಗಾಂತರದ ಹಂಚಿಕೆಯಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವಿರಲಿಲ್ಲ ಎಂದಲ್ಲ. ಆದರೆ ಸಾರ್ವಜನಿಕ ಜೀವನವು ಎದುರಿಸುತ್ತಿರುವ ಬಡತನ, ನಿರುದ್ಯೋಗ, ತಾರತಮ್ಯ, ಹಿಂಸಾಚಾರ ಮತ್ತಿತರ ಹತ್ತು ಹಲವು ಮಹತ್ವದ ವಿಷಯಗಳೆಲ್ಲಕ್ಕೂ ಮೇಲ್ಪದರ ನೈತಿಕತೆ ಮತ್ತು ಭಾವೋನ್ಮಾದಗಳಿಂದ ತುಂಬಿದ ಭ್ರಷ್ಟಾಚಾರ ವಿರೋಧವೊಂದನ್ನೇ ಪರಿಹಾರವೆಂದು ಬಿತ್ತಿದ್ದು ಮಾತ್ರ ಬೇರೆಯದೇ ಆದ ವಿದ್ಯಮಾನವಾಗಿತ್ತು.

೨-ಜಿ ಹಗರಣ ಮತ್ತು ಯುಪಿಎ ಅವಧಿಯ ಇತರ ಹಗರಣಗಳಿಂದ ಇನ್ನೂ ಇತರ ಪರಿಣಾಮಗಳೂಂಟಾಗಿವೆ. ಅವುಗಳಲ್ಲಿ ಅತಿ ಮುಖ್ಯವಾದವು ಮಹಾಲೆಕ್ಕಾಧಿಪಾಲರ ಕಾರ್ಯಾಲಯ ಮತ್ತು ನ್ಯಾಯಾಲಯಗಳಂತ ಪ್ರಭುತ್ವ ಸಂಸ್ಥೆಗಳು ರಾಜಕೀಯೀಕರಣಗೊಂಡಿದ್ದು ಮತ್ತು ಮಾಧ್ಯಮಗಳಂಠ ಸಾರ್ವಜನಿಕ ಸಂಸ್ಥೆಗಳಲ್ಲಿ ಅತ್ಯಂತ ನಂಜುತುಂಬಿದ ಏಕಪಕ್ಷೀಯತೆ ನಿಧಾನವಾಗಿ ಸೇರಿಕೊಳ್ಳಲು ಪ್ರಾರಂಭವಾದದ್ದು. ಅಷ್ಟು ಮಾತ್ರವಲ್ಲದೆ, ಇದೀಗ ಸಾರ್ವಜನಿಕ ಸಂಪನ್ಮೂಲಗಳನ್ನು ಸರ್ಕಾರಕ್ಕೆ ಸಾಕಷ್ಟು ವರಮಾನ ತರುವ ರೀತಿಯಲ್ಲಿ ವಿನಿಯೋಗಿಸದಿರುವುದೇ ಆ ಯೋಜನೆಯಲ್ಲಿ ಆಗಿರಬಹುದಾದ ಭ್ರಷ್ಟಾಚಾರಕ್ಕೆ ಪುರಾವೆಯೆಂಬ ರೀತಿಯಲ್ಲಿ ಸಾರ್ವಜನಿಕ ನೀತಿಗಳನ್ನು ಬಗ್ಗಿಸಲಾಗಿದೆ.

ವಿಚಾರಣಾ ನ್ಯಾಯಾಲಯದ ಆದೇಶದಿಂದಾಗಿ ಸುಪ್ರೀಂ ಕೋರ್ಟಿನ ಪಾವಿತ್ರ್ಯತೆಯೂ ಕಡೆಗಣೆನೆಯಾಗಿದೆ. ತರಂಗಾಂತರದ ಹಂಚಿಕೆಯಲ್ಲಿ ಕ್ರಮಬದ್ಧತೆಯಿಲ್ಲದಿರುವುದನ್ನು ಮತ್ತು ಸ್ವಜನಪಕ್ಷಪಾತವನ್ನು ಗುರುತಿಸಿದ್ದ  ಸುಪ್ರೀಂ ಕೋರ್ಟು ದೇಶದ ಪ್ರಮುಖ ಸಂಪತ್ತನ್ನು ಕೊಡುಗೆಯ ರೀತಿ ನೀಡಲಾಗಿದೆ ಎಂಬ ತೀರ್ಮಾನಕ್ಕೆ ಬಂದು ೨-ಜಿ ತರಂಗಾಂತರಗಳ ಹಂಚಿಕೆಯನ್ನೇ ೨೦೧೨ರಲ್ಲಿ ರದ್ದುಗೊಳಿಸಿತ್ತು. ಆದರೆ ಆ ಆದೇಶದಲ್ಲಿ ತಾನು ತರಂಗಾಂತರಗಳ ಹಂಚಿಕೆಯಲ್ಲಿ ಕ್ರಮಬದ್ಧತೆಯನ್ನು ಪಾಲಿಸದಿರುವುದನ್ನು ಮಾತ್ರ ಗಮನಕ್ಕೆ ತೆಗೆದುಕೊಂಡಿದ್ದು ತನ್ನ ಈ ಆದೇಶವು ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳ ಮೇಲೆ ಯವುದೇ ಪ್ರಭಾವವನ್ನು ಬೀರುವುದಿಲ್ಲವೆಂಬುದನ್ನು ಸ್ಪಷ್ಟಪಡಿಸಿತ್ತು. ಆದರೆ ಅದು ಹೇಳಿದಷ್ಟು ಸುಲಭವಲ್ಲ. ಕೇಂದ್ರೀಯ ತನಿಖಾ ದಳ-ಸಿಬಿಐ ತಾನು ಆರೋಪ ಹೊರಿಸಿದ ಯಾವೊಬ್ಬ ಆರೋಪಿಯ ಮೇಲೂ ಯಾವುದೇ ಆರೋಪವನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲವೆಂದು ವಿಚಾರಣಾ ನ್ಯಾಯಾಲಯವು ಹೇಳುತ್ತಿದೆ. ಇದು ೨೦೧೪ರಿಂದ ಅಧಿಕಾರದಲ್ಲಿರುವ ಮೋದಿ ಸರ್ಕಾರದ  ಉದ್ದೇಶಗಳನ್ನೂ ಒಳಗೊಂಡಂತೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಮೋದಿ ಸರ್ಕಾರವು ಭ್ರಷ್ಟಾಚಾರದ ಆರೋಪಿಗಳಿಗೆ ಶಿಕ್ಷೆಯನ್ನೂ ನೀಡುವ ಭರವಸೆಗಳನ್ನು ನೀಡಿತ್ತು; ಇಂಥಾ ಅತ್ಯಂತ ಕುಖ್ಯಾತ ಹಗಣವೊಂದರ ಅಪರಾಧಿಗಳಿಗೆ ಶಿಕ್ಷೆ ದೊರೆಯುವಂತೆ ಮಾಡುವಲ್ಲಿ ವಿಫಲವಾಗಿರುವುದು ಕಳೆದೊಂದು ವರ್ಷದಿಂದ ಮಸುಕಾಗುತ್ತಾ ಬಂದಿರುವ ಮೋದಿಯವರ ವರ್ಚಸ್ಸನ್ನು ಮತ್ತಷ್ಟು ಮಂಕಾಗಿಸಬಹುದು. ಅಷ್ಟು ಮಾತ್ರವಲ್ಲದೆ, ಕಾಂಗ್ರೆಸ್ಸಿನಲ್ಲಿ ಭ್ರಷ್ಟಾಚಾರವೆಂಬುದು  ಅಂತರ್ಗತವಾದ ಸಂಸ್ಕೃತಿಯೆಂಬ ಮೋದಿ ಸರ್ಕಾರದ ಆರೋಪಗಳನ್ನು ಈ ೨-ಜಿ ಹಗರಣದ ತೀರ್ಪು ಮೊಂಡುಗೊಳಿಸಬಹುದು. ಆದರೆ ಈ ಅವಕಾಶವನ್ನು ಕಳೆದುಕೊಂಡಿರುವ ತನ್ನ ಪ್ರಭಾವನ್ನು ಮರುಗಳಿಸಿಕೊಳ್ಳಲು ಕಾಂಗ್ರೆಸ್ ಎಷ್ಟರಮಟ್ಟಿಗೆ ಸಫಲವಾಗಬಹುದೆಂಬುದನ್ನೂ ಇನ್ನೂ ಕಾದುನೋಡಬೇಕಿದೆ. ಆದರೆ ಈ ಗಂಭೀರ ವೈಫಲ್ಯವು ಕೆಲವೇ ಕೆಲವು ಕೈಗಾರಿಕೋದ್ಯಮಿಗಳಿಗೆ ಲಾಭವನ್ನು ತಂದುಕೊಡಲು ಹೇಗೆ ಭ್ರಷ್ಟಾಚಾರ ಮತ್ತು ಪ್ರಭುತ್ವದ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆಯೆಂಬ ವಿದ್ಯಮಾನದ ಬಗ್ಗೆ ಜನರನ್ನು ಸಂವೇದನಾಶೂನ್ಯರನ್ನಾಗಿಯೂ ಮಾಡಬಹುದು. ಈ ಪ್ರಕರಣದಲ್ಲಿ ಭ್ರಷ್ಟಾಚಾರವು ಮಂಗಮಾಯವಾಗಿಬಿಟ್ಟಿದ್ದರೂ ನಮ್ಮ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವೆಂಬುದು ಆಳವಾಗಿ ಮನೆಮಾಡಿದ್ದು ಒಂದು ನ್ಯಾಂiiಯುತ ಮತ್ತು ಸಮಾನ ಸದೃಶ ಸಮಾಜ ನಿರ್ಮಾಣಕ್ಕೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಅತ್ಯಂತ ಅನಿವಾರ್ಯವೆಂಬುದರಲ್ಲಿ ಎರಡು ಮಾತಿಲ್ಲ. 

Back to Top