ISSN (Print) - 0012-9976 | ISSN (Online) - 2349-8846

ನಾಲ್ಕು ರಾಷ್ಟ್ರಗಳ ಕ್ವಾಡ್ ಕೂಟ ಮತ್ತೆ ಜೀವತಳೆದಿದ್ದೇಕೆ?

ನಿಯಮಬದ್ಧ ಆಳ್ವಿಕೆಯ ಹೆಸರಿನಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ಜಪಾನ್ ದೇಶಗಳು ಏಷಿಯ- ಪೆಸಿಫೆಕ್ ಪ್ರದೇಶದಲ್ಲಿ ಅಮೆರಿಕದ ಮೇಲಾಧಿಪತ್ಯಕ್ಕೆ ಬೆಂಬಲ ನೀಡುತ್ತಿವೆ.

 

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

ಇದೇ ನವಂಬರ್ ಮಧ್ಯದಲ್ಲಿ ಮನಿಲಾದಲ್ಲಿ ಪೂರ್ವ ಏಷಿಯಾ ದೇಶಗಳ ಮುಖ್ಯಸ್ಥರ ಶೃಂಗಸಭೆ ನಡೆಯುತ್ತಿರುವಾಗ ಆಸ್ಟ್ರೇಲಿಯ, ಜಪಾನ್, ಭಾರತ ಮತ್ತು ಅಮೆರಿಕದ ಅತ್ಯುನ್ನತ ಮಟ್ಟದ ಅಧಿಕಾರಿಗಳು ಒಂದು ಅಧಿಕೃತ ಸಭೆ ನಡೆಸಿದರು. ಆ ಸಭೆಯಲ್ಲಿ ಅವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅಂತರರಾಷ್ಟ್ರೀಯ ನಿಯಮಗಳ ವ್ಯವಸ್ಥೆ ಯನ್ನು ಎತ್ತಿಹಿಡಿಯುವುದಾಗಿ ಘೋಷಿಸಿದರು. ಅದರ ಜೊತೆಜೊತೆಯಲ್ಲಿ, ಚೀನಾ ದೇಶದ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ ಆ ದೇಶವು ಅಂತರರಾಷ್ಟ್ರೀಯ ಕಾನೂನು, ನೌಕಾಯಾನ ಮತು ನಾಗರಿಕ ವಿಮಾನಯಾನ ಅಧಿಕಾರಗಳನ್ನು ಗೌರವಿಸುವಂತೆ ಮಾಡುವುದಾಗಿ ಪಣತೊಟ್ಟರು. ಆಸ್ಟ್ರೇಲಿಯಾದ ವಿದೇಶವ್ಯವಹಾರಗಳ ಸಚಿವಾಲಯದ ಪ್ರಕಾರ ಇಂಡೋ ಫೆಸಿಫಿಕ್ ಪ್ರಾಂತ್ಯದಲ್ಲಿ ಸಮುದ್ರಮಾರ್ಗ ಸುರಕ್ಷತೆಯನ್ನು ಎತ್ತಿಹಿಡಿಯುವ ಮತ್ತು ಉತ್ತರ ಕೊರಿಯಾದ ಅಣ್ವಸ್ತ್ರ ಮತ್ತು ಕ್ಷಿಪಣಿ ಬೆದರಿಕೆಯನ್ನೂ ಒಳಗೊಂಡಂತೆ ಎಲ್ಲಾ ಬಗೆಯ ಬೆದೆರಿಕೆಯನ್ನು ಒಟ್ಟಾಗಿ ಎದುರಿಸಲೂ ಸಹ ಈ ನಾಲ್ಕು ದೇಶಗಳ ಅಧಿಕಾರಿಗಳು ಒಪ್ಪಂದ ಮಾಡಿಕೊಂಡಿದ್ದಾರೆ.

ಆಡುಭಾಷೆಯಲ್ಲಿ ಈ ನಾಲ್ಕು ದೇಶಗಳ ಕೂಟವನ್ನು ಕ್ವಾಡ್ (ನಾಲ್ವರ ಕೂಟ) ಎಂದು ಕರೆಯಲಾಗುತ್ತದೆ. ಕ್ವಾಡ್ ಸದಸ್ಯರ ಪ್ರಕಾರ ಈ ಕೂಟವನ್ನು ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಗೌರವ ಹಾಗೂ ನಿಯಮಬದ್ಧ ಆಳ್ವಿಕೆಯ ಆಧಾರದಲಿ ಕಟ್ಟಿಕೊಳ್ಳಲಾಗಿದೆ. ಆದರೆ ಈ ಕೂಟದ ಹಿರಿಯ ಪಾಲುದಾರನಾದ ಅಮೆರಿಕಕ್ಕೆ ಇಂಥಾ ನ್ಯಾಯನಿಯಮಗಳ ಸೂಕ್ಷ್ಮತೆಯ ಬಗ್ಗೆ ಯಾವುದೇ ಗೌರವವಿಲ್ಲವೆಂಬುದು ಬೇರೆಯ ಮಾತು. ನೇರವಾಗಿ ಹೇಳಬೇಕೆಂದರೆ ಅಮೆರಿಕವು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯವನ್ನು ಗೌರವಿಸುವುದಿಲ್ಲ; ವಿಶ್ವಸಂಸ್ಥೆಯ ಅನುಮೋದನೆಯ ಅಗತ್ಯವಿಲ್ಲದೆ ತಾನು ಯಾವ ದೇಶ ಅಥವಾ ಪ್ರದೇಶದಲ್ಲದರೂ ಸೈನಿಕ ಮಧ್ಯಪ್ರವೇಶ ಮಾಡಬಹುದೆಂದು ಅದು ಭಾವಿಸುತ್ತದೆ; ಅಷ್ಟು ಮಾತ್ರವಲ್ಲದೆ ತಾನು ಯಾರು ಭಯೋತ್ಪಾದಕನೆಂದು ಭಾವಿಸುತ್ತದೋ ಆ ವ್ಯಕ್ತಿ ಇರುವ ಸ್ಥಳಕ್ಕೆ ಡ್ರೊನ್ ಕ್ಷಿಪಣಿಗಳ ಮೂಲಕ ದಾಳಿ ಮಾಡಿ ಹತ್ಯೆಗೈಯುತ್ತದೆ. ಆ ಪ್ರಕ್ರಿಯೆಯಲ್ಲಿ ಅಮಾಯಕ ನಾಗರಿಕರೂ ಸಹ ಕೊಲ್ಲಲ್ಪಟ್ಟರೆ ಅದು ಕೇವಲ ಅನುದ್ದಿಶ್ಯಪೂರ್ವಕ ಸಹವರ್ತಿ ಹಾನಿ ಎಂದು ತಳ್ಳಿಹಾಕಿಬಿಡುತ್ತದೆ. ಭಾರತದ, ಆಸ್ಟ್ರೇಲಿಯಾದ ಮತ್ತು ಜಪಾನಿನ ನಾಗರಿಕರು ತಮ್ಮ ಸರ್ಕಾರಗಳು ಇಂಥಾ ಒಂದು ಕಾನೂನು ಮಾನ್ಯ ಮಾಡದ, ಹಿಂಸಾಕೋರ ಸಾಮ್ರಜ್ಯಶಾಹಿ ದೇಶವೊಂದರ ಕಕ್ಷಿದಾರನಾಗಲು ಬಿಟ್ಟುಬಿಡುವುದು ತರವೇ?

 ಈ ಕ್ವಾಡ್ ಕೂಟವನ್ನು ೨೦೦೭ರಲ್ಲಿ ಅಮೆರಿಕದ ಅಂದಿನ ಉಪಾಧ್ಯಕ್ಷ ಡಿಕ್ ಚೆನಿ, ಜಪಾನಿನ ಪ್ರಧಾನಿ ಶಿನ್‌ಜೋ ಅಬೆ, ಹಾಗೂ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಜಾನ್ ಹೋವಾರ್ಡ್ ಸೇರಿ ಹುಟ್ಟುಹಾಕಿದರು. ಹಾಗೆ ನೋಡಿದರೆ, ಸೋವಿಯತ್ ಒಕ್ಕೂಟದ ಪತನದ ನಂತರ ೧೯೯೨ರಿಂದಲೂ ಭಾರತ ಮತ್ತು ಅಮೆರಿಕ ದೇಶಗಳ ನೌಕಾಪಡೆಗಳು ಪ್ರತಿವರ್ಷ ಮಲಬಾರು ಕವಾಯತುವನ್ನು ಒಟ್ಟಾಗಿ ನಡೆಸಿಕೊಂಡು ಬಂದಿವೆ. ೨೦೦೭ರಲ್ಲಿ ಈ ಮಲಬಾರ್ ಕವಾಯತಿಗೆ ಭಾರತ, ಅಮೆರಿಕದ ನೌಕಾಪಡೆಗಳ ಜೊತೆಜೊತೆಗೆ ಜಪಾನಿನ ನೌಕಾಪಡೆಯೂ ಕೂಡಾ ಸೇರಿಕೊಂಡು ಜಪಾನಿನ ಸಮೀಪವಿರುವ ಒಕಿನಾವ ದ್ವೀಪದಲ್ಲಿ ನಡೆಸಲಾಯಿತು. ಇದರ ಜೊತೆಗೆ ಬಂಗಾಳಕೊಲ್ಲಿಯಲ್ಲಿ ಆಸ್ಟ್ರೇಲಿಯಾದ ಜೊತೆಗೆ ಸಿಂಗಪೂರ್ ಕೂಡಾ ಸೇರಿಕೊಂಡು ಮಲಬಾರು ಒಪ್ಪಂದವನ್ನು ದ್ವಿಪಕ್ಷೀಯತೆಯ ಗಡಿ ದಾಟಿಸಿತು. ಆದರೆ ೨೦೦೮ರಲ್ಲಿ ಆಸ್ಟ್ರೇಲಿಯಾವು ಈ ಮಲಬಾರ್ ಕವಾಯತಿನಿಂದ ಮತ್ತು ಕ್ವಾಡ್‌ನಿಂದ ಹೊರನಡೆಯಿತು. ಆದರೂ ಅದು ಅಮೆರಿಕದೊಡನೆ ಮಿಕ್ಕ ಪ್ರದೇಶಗಳಲ್ಲಿ ಜಂಟಿ ಕವಾಯತನ್ನು ಮುಂದುವರೆಸಿತು. ೨೦೧೫ರಿಂದ ಮಲಬಾರು ಕವಾಯತಿನಲ್ಲಿ ಜಪಾನ್ ಒಂದು ಶಾಶ್ವತ ಪಾಲುದಾರನಾಗಿ ಮುಂದುವರೆದಿದೆ. ಈಗ ಮತ್ತೊಮೆ ಕ್ವಾಡ್‌ಗೆ ಜೀವ ಬಂದಿರುವುದರಿಂದ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಮಲಬಾರು ಕವಾಯತಿನಲ್ಲಿ ಇನ್ನುಮುಂದೆ ಆಸ್ಟ್ರೇಲಿಯಾ ಸಹ ಸೇರಿಕೊಳ್ಳಬಹುದು.

ಅಮೆರಿಕವು ಜಪಾನ್ ಮತ್ತು ಆಸ್ಟ್ರೇಲಿಯಾಗಳ ಜೊತೆಗೂ ವ್ಯೂಹಾತ್ಮಕ-ಸೈನಿಕ ಸಂಬಂಧಗಳನ್ನು ಮುಂದುವರೆಸಿದೆ. ಹೀಗಿರುವಾಗ ಅಮೆರಿಕವು ಭಾರತದೊಂದಿಗೆ ನಿಭಾಯಿಸುತ್ತಿರುವ ವ್ಯೂಹಾತ್ಮಕ-ಸೈನಿಕ ಪಾಲುದಾರಿಕೆಯನ್ನು ಟ್ರಂಪ್ ಆಡಳಿತವು ಹೇಗೆ ಪರಿಗಣಿಸುತ್ತದೆ? ಇದಕ್ಕೆ ಉತ್ತರವು ಅಮೆರಿಕದ ವಾಷೀಂಗ್‌ಟನ್ ಡಿಸಿ ಯ ವ್ಯೂಹಾತ್ಮಕ ಸಂಬಂಧಗಳ ಅಧ್ಯಯನ ಸಂಸ್ಥೆಯಲ್ಲಿ  ಮುಂದಿನ ಶತಮಾನದಲ್ಲಿ ಭಾರತದೊಂದಿಗಿನ ಅಮೆರಿಕ ಮೈತ್ರಿ ಹೇಗಿರುತ್ತದೆ ಎಂಬ ವಿಷಯದ ಬಗ್ಗೆ ಅಮೆರಿಕದ ಗೃಹ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಮಾಡಿದ ಭಾಷಣದಲ್ಲಿದೆ.

ಯಾವುದೇ ಅನುಮಾನಕ್ಕೆಡೆಯಿಲ್ಲದಂತೆ ಆ ಭಾಷಣದಲ್ಲಿ ಅವರು ಚೀನಾವನ್ನು ನಿಗ್ರಹಿಸಲು ತಾನು, ಭಾರತ ಮತ್ತು ಜಪಾನ್ ಮಾಡುತ್ತಿರುವ ಪ್ರಯತ್ನಗಳ ಜೊತೆ ಆಸ್ಟ್ರೇಲಿಯಾ ಸಹ ಸೇರಿಕೊಳ್ಳಬೇಕೆಂದು ಕರೆಕೊಟ್ಟರು. ಈ ಉದ್ದೇಶದಿಂದ ಕ್ವಾಡ್‌ಗೆ ಪುನಶ್ಚೇತನ ಕೊಡುವುದನ್ನು ಭಾರತ ನಿಂತನಿಲುವಿನಲ್ಲೇ ಒಪ್ಪಿಕೊಂಡಿತ್ತು. ಈ ಮೈತ್ರಿಯ ಸ್ವರೂಪದ ಇತರ ನಡಾವಳಿಗಳನ್ನು ನಂತರ ಮಾತನಾಡಿಕೊಳ್ಳಬಹುದೆಂಬುದು ಅದರ ಇರಾದೆಯಾಗಿತ್ತು. ಏಕೆಂದರೆ ಈಗಾಗಲೇ ಭಾರತವು ಅಮೆರಿಕದ ಪ್ರಮುಖ ರಕ್ಷಣಾ ಪಾಲುದಾರನಾಗಿಯಾಗಿತ್ತು. ಆ ಕಾರಣದಿಂದಾಗಿಯೇ ಈಗ  ಭಾರತಕ್ಕೆ ಅಮೆರಿದ ಸೈನಿಕ ಕೈಗಾರಿಕಾ ಸಂಕೀರ್ಣದಿಂದ ಉನ್ನತ ತಂತ್ರಜ್ನಾವನ್ನು ಪಡೆದುಕೊಳ್ಳುವ ಅರ್ಹತೆ ಒದಗಿಬಂದಿದೆ. ಅಷ್ಟು ಮಾತ್ರವಲ್ಲದೆ ಭಾರತದ ಸೇನಾ ನೆಲೆಗಳನ್ನು ಅಮೆರಿಕದ ಯುದ್ಧ ನೌಕೆ ಮತ್ತು ವಿಮಾನಗಳ ಬಳಕೆಗೆ ಮುಕ್ತಮಾಡುವ ಲಾಜಿಸ್ಟಿಕ್ ಎಕ್ಸ್‌ಚೇಂಜ್ ಮೆಮೊರಾಂಡಮ್ ಅಗ್ರಿಮೆಂಟ್ ಒಪ್ಪಂದವನ್ನು ಭಾರತ ಜಾರಿಗೆ ತಂದಾಗಿದೆ.

ಚೀನವನ್ನು ಹತೋಟಿಗೆ ತರಬೇಕೆಂಬ ಅಮೆರಿಕದ ಉದ್ದೇಶಗಳಿಗೆ ಭಾರತವೇಕೆ ಬದ್ಧವಾಗಬೇಕೆಂಬ ಪ್ರಶ್ನೆ ಏಳಬಹುದು?ಚೀನಾವು ಆರ್ಥಿಕ ಕ್ಷೇತ್ರದಲ್ಲಿ ಮಹಾನ್ ಮುನ್ನಡೆಯನ್ನು ಸಾಧಿಸುತ್ತಿದೆ. ಆದರೆ ಅದು ಅದಕ್ಕೆ ಸರಿಸಮನಾದ ಸೈನಿಕ ಮತ್ತು ಭೌಗೋಳಿಕ ಪ್ರಭಾವದ ಶಕ್ತಿಯನ್ನು ಹೊಂದಿಲ್ಲ. ಆ ನಿಟ್ಟಿನಲ್ಲಿ ಅಮೆರಿಕವು ಈಗಲೂ ಏಶಿಯಾ ಪೆಸಿಫಿಕ್ ಪ್ರದೇಶದಲ್ಲಿ ಹಾಗೂ ಇಡೀ ಜಗತ್ತಿನಲ್ಲಿ ಅಗ್ರಗಣ್ಯ ರಾಷ್ಟ್ರವಾಗಿದೆ. ರಕ್ಷಣಾ ವೆಚ್ಚ, ಸೈನಿಕ ಶಕ್ತಿ ಹಾಗೂ ಅಣ್ವಸ್ತ್ರ ಸಾಮರ್ಥ್ಯಗಳ ವಿಷಯದಲ್ಲಿ ಬೇರೆ ಯಾವ ದೇಶಗಳು ಅದರ ಸಮೀಪಕ್ಕೂ ಬರುವ ಸ್ಥಿತಿಯಲ್ಲಿಲ್ಲ. ಹಾಗಿದ್ದರೂ ಚೀನಾದ ಆರ್ಥಿಕ ಮುನ್ನೆಡೆ ಮತ್ತು ಏಷಿಯಾ-ಫೆಸಿಫಿಕ್ ಪ್ರಾಂತ್ಯಗಳಲ್ಲಿ ಅದು ನಿಧಾನಕ್ಕೆ ಬೆಳೆಸಿಕೊಳ್ಳುತ್ತಿರುವ ಪ್ರಭಾವಗಳು ಖಂಡಿತವಾಗಿ ಈ ಪ್ರಾಂತ್ಯದಲ್ಲಿ ಅಮೆರಿಕದ ಏಕಸ್ವಾಮ್ಯವನ್ನು ಮುರಿದುಹಾಕಿದೆ. ಇದರಿಂದ ಅಮೆರಿಕದ ರಕ್ಷಣೆಗೇನೂ ಅಪಾಯವಿಲ್ಲ ಎಂಬುದು ಮತ್ತೊಂದು ವಿಷಯ.

ಇನ್ನು ದಕ್ಷಿಣ ಚೀನಾ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳ ವಿವಾದದ ಬಗ್ಗೆ ಹೇಳುವುದಾದಲ್ಲಿ ಇದರಲ್ಲಿ ಯಾರೂ ಅಮಾಯಕರಲ್ಲ; ಈ ಪ್ರದೇಶಗಳ ಮೇಲೆ ಚೀನಾದ ಹಕ್ಕುದಾರಿಕೆ ಎಷ್ಟು ಅಸಂಬದ್ಧ ಮತ್ತು ಅತಾರ್ಕಿಕವೋ ಮಿಕ್ಕ ದೇಶಗಳ ಪ್ರತಿಪಾದನೆಗಳು ಅಷ್ಟೆ ಅಸಂಬದ್ಧವಾಗಿರಲು ಸಾಕು. ಆದರೆ ಈ ವಿಷಯದ ಬಗ್ಗೆ ಇತರ ಎಲ್ಲಾ ದೇಶಗಳಿಗಿಂತ ಹೆಚ್ಚಿನ ಸದ್ದು ಮಾಡುತ್ತ್ರುವ ಅಮೆರಿಕ  ಅಂತರರಾಷ್ಟ್ರೀಯ ಸಮುದ್ರಗಳ ಒಡಂಬಡಿಕೆಗೆ ಈವರೆಗೆ ಸಹಿಹಾಕಿಲ್ಲ. ಸಮುದ್ರ ವ್ಯಾಪಾರ ಮತ್ತು ಯಾನಗಳ ಬಗೆಗೆ ನಿರ್ಬಂಧ ಒಡ್ಡುವ ಮತ್ತು ಸ್ವಾತಂತ್ರ್ಯಗಳನ್ನು ನೀಡುವ  ಅಂತರರಾಷ್ಟ್ರೀಯ ಕಾನೂನುಗಳು ಏನೇ ಹೇಳಿದರೂ ಅದನ್ನೂ ಮೀರಿ ಚೀನಾದ ಆರ್ಥಿಕತೆಯ ನಿರಂತರ ಬೆಳವಣಿಗೆಗೆ ಬೇಕಾದ ವಾಣಿಜ್ಯ ಹರಿವನ್ನು ತಡೆಗಟ್ಟುವಷ್ಟು ಅಮೆರಿಕ ಸಮರ್ಥವಾಗಿದೆ. ವಾಸ್ತವವಾಗಿ ಪ್ರಶ್ನೆ ಇರುವುದು ಈ ಪ್ರದೇಶದ ಸಮುದ್ರ ಮಾರ್ಗದ ವಾಣಿಜ್ಯ ವಹಿವಾಟಿಗೆ ಚೀನಾದ ಒಡ್ಡಬಹುದಾದ ಅಪಾಯದ ಬಗ್ಗೆಯಲ್ಲ. ಕಿಂಚಿತ್ತು ಸಾಮ್ನ್ಯ ಪ್ರಜ್ನೆ ಇರುವವರೂ ಸಹ ಪೂರ್ವ ಮತ್ತು ದಕ್ಷಿಣ ಚೀನಾದ ಸಮುದ್ರ ಪ್ರದೇಶಗಳಲ್ಲಿ ನಡೆಯುವ ವಾಣಿಜ್ಯ ವಹಿವಾಟನ್ನು ಚೀನಾ ಅಸ್ತವ್ಯಸ್ಥಗೊಳಿಸುತ್ತದೆ ಎಂದು ಭಾವಿಸುವುದಿಲ್ಲ್ಲ; ಚೀನಾ ತನ್ನ ಆಸಕ್ತಿಗಳ ವಿರುದ್ಧ ತಾನೇ ನಡೆದುಕೊಳ್ಳುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಭಾರತ, ಜಪಾನ್, ಆಸ್ಟ್ರೇಲಿಯಾ ಮತ್ತು ಅಮೆರಿಕವು ಖಾತರಿಗೊಳಿಸಬೇಕೆಂದಿರುವ ಅಂತರರಾಷ್ಟ್ರೀಯ ನಿಯಮಬದ್ಧ ವ್ಯವಸ್ಥೆಯು ಸಾರಾಂಶದಲ್ಲಿ ಏಷಿಯಾ-ಪೆಸಿಫೀಕ್ ಪ್ರದೇಶದಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯ ಮೇಲಾಧಿಪತ್ಯವನ್ನು ಖಾತರಿಪಡಿಸುವ ವ್ಯವಸ್ಥೆಯಾಗಿದೆ. 

Back to Top